ಪ್ರಧಾನಿ ಮೋದಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ ಗಂಭೀರ ಮಾತಿದು!
ನವದೆಹಲಿ: ರಷ್ಯಾ ಮತ್ತು ಭಾರತ ಸಂಬಂಧಕ್ಕೆ ಹಲವು ದಶಕಗಳ ಇತಿಹಾಸವಿದೆ. ರಷ್ಯಾ ಜಾಗತಿಕವಾಗಿ ನಂಬುವ ಕೆಲವೇ ಕೆಲವು ದೇಶಗಳಲ್ಲಿ ಭಾರತ ಕೂಡ ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕೆ ಎರಡೂ ದೇಶಗಳ ನಡುವೆ ಲಕ್ಷಾಂತರ ಕೋಟಿ ವ್ಯವಹಾರ ನಡೆಯುತ್ತದೆ. ಆದರೆ ಈಗ ರಷ್ಯಾ ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿ ಬಗ್ಗೆ ನೀಡಿದ ಅದೊಂದು ಹೇಳಿಕೆ ಜಗತ್ತಿನಾದ್ಯಂತ ಹಲ್‌ಚಲ್ ಎಬ್ಬಿಸಿದೆ.
ಭಾರತ ಆರ್ಥಿಕವಾಗಿ ಮುನ್ನಗ್ಗುತ್ತಿರುವ ದೇಶ, ಇನ್ನು ಭಾರತದ ಆರ್ಥಿಕತೆ ಈಗ ಟಾಪ್-5 ದೇಶಗಳ ಪಟ್ಟಿಯಲ್ಲಿದೆ. ಅದರಲ್ಲೂ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಕುರಿತು ಜಗತ್ತೇ ಮಾತನಾಡಿಕೊಳ್ಳುತ್ತಿದೆ. ಇದೀಗ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಅದೇ ಮಾತನ್ನ ಪುನರ್ ಪ್ರಸ್ತಾಪ ಮಾಡಿದ್ದು, ಪ್ರಧಾನಿ ಮೋದಿ ಅವರ ಪರಿಕಲ್ಪನೆ ಅತ್ಯದ್ಭುತ ಎಂದಿದ್ದಾರೆ. ಇದು ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ.'ಪಿಎಂ ನರೇಂದ್ರ ಮೋದಿ ಅವರ ಪರಿಕಲ್ಪನೆಯಾದ ಮೇಕ್ ಇನ್ ಇಂಡಿಯಾ ಭಾರತದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಿದೆ' ಎಂದಿರುವ ರಷ್ಯಾ ಅಧ್ಯಕ್ಷರು, ಮೋದಿ ಸರ್ಕಾರದ ಸಾಧನೆ ಬಗ್ಗೆ ಹೊಗಳಿದ್ದಾರೆ. ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಮೋದಿ ಬಗ್ಗೆ ಪುಟಿನ್ ಹೇಳಿದ್ದೇನು?
ಅಷ್ಟಕ್ಕೂ ರಷ್ಯಾದಲ್ಲಿ ಆಂತರಿಕ ದಂಗೆ ಬಳಿಕ ಮೊನ್ನೆ ಮೊನ್ನೆ ಪುಟಿನ್ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ಈ ಮಧ್ಯೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ರಷ್ಯಾದ ಏಜೆನ್ಸಿ ಫಾರ್ ಸ್ಟ್ರಾಟೆಜಿಕ್ ಇನಿಶಿಯೇಟಿವ್ಸ್ (ASI) ಆಯೋಜಿಸಿದ್ದ ವೇದಿಕೆಯಲ್ಲಿ ಪುಟಿನ್ ಮಾತನಾಡುತ್ತಾ, ಪ್ರಧಾನಿ ಮೋದಿ ಅವರ ಪರಿಕಲ್ಪನೆ ಬಗ್ಗೆ ಹೊಗಳಿದ್ದಾರೆ. ಸ್ಥಳೀಯವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತಯಾರಿಸಲು ಕಂಪನಿಗಳನ್ನು ಪ್ರೋತ್ಸಾಹಿಸುವ ಆರ್ಥಿಕತೆಯ ಕುರಿತು ಮಾತನಾಡುವಾಗ ಪುಟಿನ್ ಭಾರತವನ್ನು ಉದಾಹರಣೆಯಾಗಿ ನೀಡಿದ್ದಾರೆ. ಅಲ್ಲದೆ ರಷ್ಯಾ ಕೂಡ ಭಾರತವನ್ನ ಅನುಸರಿಸಬೇಕು ಎಂದಿದ್ದಾರೆ.
ಭಾರತದ ಯೋಜನೆಗೆ ರಷ್ಯಾ ಹೆಮ್ಮೆ!
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದಂತೆ, 'ಭಾರತದಲ್ಲಿರುವ ನಮ್ಮ ಸ್ನೇಹಿತರು ಹಾಗೂ ದೊಡ್ಡ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ವರ್ಷಗಳ ಹಿಂದೆ 'ಮೇಕ್ ಇನ್ ಇಂಡಿಯಾ' ಪ್ರಾರಂಭಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ನಿಜವಾಗಿಯೂ ಪ್ರಭಾವಶಾಲಿ ಪರಿಣಾಮ ಬೀರಿದೆ. ನಾವೂ ಇದೇ ತಂತ್ರ ಅನುಸರಿಸಬೇಕು' ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ ಪುಟಿನ್. ಇನ್ನು ಪುಟಿನ್ ಅವರ ಮಾತು ಜಾಗತಿಕವಾಗಿ ಭಾರತದ ಶಕ್ತಿ ಮತ್ತು ಮೇಕ್ ಇನ್ ಇಂಡಿಯಾ ಸೃಷ್ಟಿಸಿರುವ ಹವಾ ಬಗ್ಗೆ ಮುನ್ಸೂಚನೆ ನೀಡಿದಂತಿದೆ.

ಭಾರತದ ಮಾದರಿಯತ್ತ ರಷ್ಯಾ ಹೆಜ್ಜೆ?
ಇದಿಷ್ಟೇ ಅಲ್ಲದೆ, ರಷ್ಯಾದಲ್ಲಿ ದೇಶೀಯ ಉತ್ಪನ್ನಗಳು ಮತ್ತು ಬ್ರ್ಯಾಂಡ್‌ಗಳನ್ನು ಉತ್ತೇಜಿಸಲು ಭಾರತವನ್ನು ಪುಟಿನ್ ಉದಾಹರಣೆಯಾಗಿ ನೀಡಿದ್ದಾರೆ. ಪುಟಿನ್ ಹೇಳಿಕೆ ಪ್ರಕಾರ, 'ರಷ್ಯಾ ಕಂಪನಿಗಳು ತಮ್ಮ ಉತ್ಪನ್ನಗಳನ್ನ ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಮತ್ತು ಸ್ಥಳೀಯ ಉತ್ಪಾದನೆ ಸಾಮರ್ಥ್ಯ ಅಭಿವೃದ್ಧಿಪಡಿಸಲು ಭಾರತವನ್ನ ಅನುಸರಿಬೇಕು.' ಎಂದು ಪುಟಿನ್ ತಮ್ಮ ದೇಶದ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ. ಅಲ್ಲದೆ ಈ ತಂತ್ರದ ಮೂಲಕವೇ ವಿದೇಶಿ ಹೂಡಿಕೆದಾರರನ್ನ ಸೆಳೆಯಲು ಸಾಧ್ಯ ಎಂಬ ಮಾತನ್ನು ಪುಟಿನ್ ತಿಳಿಸಿದ್ದಾರೆ. ಈ ಮೂಲಕ ಭಾರತ ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪರೋಕ್ಷವಾಗಿ ಮುನ್ಸೂಚನೆ ನೀಡಿದ್ದಾರೆ.
ರಷ್ಯಾ & ಭಾರತ ಎಂದೆಂದಿಗೂ ಸ್ನೇಹಿತರು!
ಇನ್ನು ಭಾರತ ಮತ್ತು ರಷ್ಯಾ ನಡುವೆ ಗಟ್ಟಿಯಾದ ಸ್ನೇಹ & ಸಂಬಂಧವಿದೆ. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಬಹುತೇಕ ರಷ್ಯಾ ಒಂಟಿಯಾಗಿದೆ. ಈ ಹೊತ್ತಲ್ಲಿ ರಷ್ಯಾ ಜೊತೆಗೆ ನಿಂತಿರುವ ಭಾರತ ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ತೈಲ ಆಮದು ಇರಬಹುದು, ರಕ್ಷಣಾ ಸಾಮಗ್ರಿಗಳ ಒಪ್ಪಂದ ಇರಬಹುದು. ರಷ್ಯಾ ಜೊತೆಯಲ್ಲಿ ಭಾರತದ ಸಂಬಂಧ ಅತ್ಯುತ್ತಮವಾಗಿದೆ. ಇತ್ತೀಚೆಗಷ್ಟೇ ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಮಾಡಿದ್ದರು. ಹೀಗೆ ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ನಂತರ ಈ ಹೇಳಿಕೆ ಹೊರಬಿದ್ದಿದೆ. ಪ್ರಧಾನಿ ಮೋದಿ ಅವರ ಬಗ್ಗೆ ಪುಟಿನ್ ಮಾತುಗಳು ಮಹತ್ವವನ್ನ ಪಡೆದಿದ್ದು, ಭಾರತದ ಅಭಿವೃದ್ಧಿ ಪರ ನಿಲುವನ್ನು ಸೂಚಿಸುತ್ತಿದೆ.












Click it and Unblock the Notifications