ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದ ನಟಿ ಸೋನಿಯಾ ಮಾನ್
ನವದೆಹಲಿ, ಫೆಬ್ರವರಿ 23: ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿದೆ. ಬಿಜೆಪಿ 48, ಎಎಪಿ 22 ಸ್ಥಾನಗಳಲ್ಲಿ ಜಯಗಳಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಿಜೆಪಿಗೆ ದೆಹಲಿಯ ಅಧಿಕಾರವನ್ನು ಬಿಟ್ಟುಕೊಟ್ಟಿದೆ. ಸದ್ಯ ಎಎಪಿ ಅಧಿಕಾರದಲ್ಲಿರುವ ರಾಜ್ಯ ಪಂಜಾಬ್. ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಎಎಪಿ ಹೆಚ್ಚಿನ ಗಮನ ನೀಡಿದೆ. ಹಲವು ಜನರು ರಾಜ್ಯದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ಭಾನುವಾರ ಪಂಜಾಬಿ ನಟಿ ಸೋನಿಯಾ ಮಾನ್ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ಪಕ್ಷವನ್ನು ಸೇರಿದರು. ಪಕ್ಷದ ಶಾಲನ್ನು ಹಾಕುವ ಮೂಲಕ ನಟಿ ಸೋನಿಯಾ ಮಾನ್ ಅವರನ್ನು ಅರವಿಂದ್ ಕೇಜ್ರಿವಾಲ್ ಪಕ್ಷಕ್ಕೆ ಬರಮಾಡಿಕೊಂಡರು.

ಸೋನಿಯಾ ಮಾನ್ ಕಿಸಾನ್ ಯೂನಿಯನ್ ನಾಯಕ ಎಸ್. ಬಲದೇವ್ ಸಿಂಗ್ ಜಿ ಪುತ್ರಿ. ಹಲವು ಗಾಯಕರ ಜೊತೆ ಸೇರಿ ಪ್ರಾದೇಶಿಕ ಭಾಷೆಯ ಅನೇಕ ಚಿತ್ರಗಳಲ್ಲಿ ಸೋನಿಯಾ ಮಾನ್ ನಟಿಸಿದ್ದಾರೆ. ಪಂಜಾಬ್‌ನಲ್ಲಿ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಸೋನಿಯಾ ಮಾನ್ ಎಎಪಿ ಸೇರ್ಪಡೆ: ಪಂಜಾಬ್ ಎಎಪಿ ಘಟಕ ನಟಿ ಸೋನಿಯಾ ಮಾನ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅರವಿಂದ್ ಕೇಜ್ರಿವಾಲ್ ಸೋನಿಯಾ ಮಾನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದೆ.
38 ವರ್ಷದ ಸೋನಿಯಾ ಮಾನ್ ನಟಿ ಮತ್ತು ರೂಪದರ್ಶಿ. ಹಲವಾರು ಸಂಗೀತ ಆಲ್ಪಂಗಳಲ್ಲಿಯೂ ಅವರು ನಟಿಸಿದ್ದಾರೆ. ಸೋನಿಯಾ ಮಾನ್ ಮಲಯಾಳಂ ಚಿತ್ರಗಳಲ್ಲಿ ಸಹ ನಟಿಸಿದ್ದಾರೆ.
ಸೋನಿಯಾ ಮಾನ್ ಉತ್ತರಾಖಂಡ ರಾಜ್ಯದಲ್ಲಿ ಜನಿಸಿದರು. ಅಮೃತದರದ ಡಿವಿಎ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಹಿಂದಿ, ಮರಾಠಿ, ಪಂಜಾಬಿ ಸೇರಿದಂತೆ 10 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ, ಐದು ಆಲ್ಬಂ ಸಾಂಗ್‌ಗಳಲ್ಲಿಯೂ ನಟಿಸಿದ್ದಾರೆ.
ಸಿಧು ಮೂಸೆವಾಲಾ ಅವರ ಸಂಗೀತ ಸಂಯೋಜನೆಯ ಆಲ್ಬಂ ಒಂದರಲ್ಲಿಯೂ ಸೋನಿಯಾ ಮಾನ್ ನಟಿಸಿದ್ದಾರೆ. ಎಸ್. ಬಲದೇವ್ ಸಿಂಗ್ ಎಡಪಂಥೀಯ ಸಿದ್ಧಾಂತದ ಕಾರ್ಯಕರ್ತರಾಗಿದ್ದರು. ಕೀರ್ತಿ ಕಿಸಾನ್ ಯೂನಿಯನ್ ನಾಯಕರಾಗಿದ್ದರು. 1986ರಲ್ಲಿ ಅವರನ್ನು ಹತ್ಯೆ ಮಾಡಲಾಗಿತ್ತು.
ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಅಸ್ತಿತ್ವದಲ್ಲಿದೆ. ಭಗವಂತ್ ಮಾನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಷದ ತತ್ವ, ಸಿದ್ಧಾಂತಗಳನ್ನು ಒಪ್ಪಿ ಸೋನಿಯಾ ಮಾನ್ ಭಾನುವಾರ ಎಎಪಿ ಪಕ್ಷವನ್ನು ಸೇರಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆ 2025ರ ಫಲಿತಾಂಶದ ಬಳಿಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ರಾಜ್ಯದ ಮೇಲೆ ಹೆಚ್ಚಿನ ಗಮನಹರಿಸಿದ್ದಾರೆ. ಅವರು 2027ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರ ಹಿಡಿಯಬೇಕು ಎಂದು ಪಕ್ಷ ಸಂಘಟನೆ ಆರಂಭಿಸಿದ್ದಾರೆ. ಚುನಾವಣೆಗೆ ಸಿದ್ಧತೆಗಳನ್ನು ಎರಡು ವರ್ಷಗಳ ಮೊದಲೇ ಆರಂಭಿಸಿದ್ದಾರೆ.
13 ವರ್ಷಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ನಡೆಸಿದ್ದ ಎಎಪಿ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿತ್ತು. ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲು ಕಂಡಿದ್ದರು.












Click it and Unblock the Notifications