ಆಫೀಸ್‌ನಲ್ಲಿ ಸಿಕ್ಕ ಮೊದಲ ಗೆಳೆಯ; ಸೆಕ್ಯೂರಿಟಿ ಗಾರ್ಡ್ ಹಾಗೂ ಉದ್ಯೋಗಿ ನಡುವಿನ ಹೃದಯಸ್ಪರ್ಶಿ ವಿಡಿಯೋ ವೈರಲ್
Emotional Viral Video: ಸಾಮಾನ್ಯವಾಗಿ ಹೊಸ ಊರು, ಹೊಸ ಆಫೀಸ್‌ಗೆ ಹೋದಾಗ ಅಲ್ಲಿ ಯಾರಾದರೂ ಆತ್ಮೀಯವಾಗಿ ಮಾತನಾಡಿಸಿದರೆ ಆಗುವ ಖುಷಿನೇ ಬೇರೆ. ಗೋವಾದಿಂದ ಉದ್ಯೋಗಕ್ಕಾಗಿ ಪುಣೆಗೆ ಕಾಲಿಟ್ಟ ಕೋಮಲ್ ಕೊಥಾವಾಳೆ ಎಂಬ ಯುವತಿಗೆ ತಮ್ಮ ಕಚೇರಿಯಲ್ಲಿ ಅಂತಹದ್ದೇ ಅನುಭವ ಆಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯುವತಿ ಕೋಮಲ್‌ಗೆ ಸೆಕ್ಯೂರಿಟಿ ಗಾರ್ಡ್ ರೂಪದಲ್ಲಿ ಅಪರೂಪದ 'ಮೊದಲ ಗೆಳೆಯ' ಸಿಕ್ಕಿದ್ದಾರೆ. ಕೆಲಸದ ಮೊದಲ ದಿನ ಸಿಕ್ಕ ಸಣ್ಣ ಸಹಾಯದಿಂದ ಚಿಗುರಿದ ಈ ಅಪೂರ್ವ ಸ್ನೇಹ ಹಾಗೂ ಗಾರ್ಡ್‌ನ ಕರುಣಾಮಯಿ ನಡವಳಿಕೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನರ ಮನ ಗೆದ್ದಿದ್ದು, ಇದು ಭಾರಿ ವೈರಲ್ ಆಗಿದೆ.

ಹೃದಯಸ್ಪರ್ಶಿ ಬಾಂಧವ್ಯದ ವಿಡಿಯೋ ವೈರಲ್
ಹೊಸ ನಗರಕ್ಕೆ ಕಾಲಿಟ್ಟು, ಹೊಸ ಉದ್ಯೋಗ ಆರಂಭಿಸುವುದು ಯಾರಿಗಾದರೂ ಕೊಂಚ ಸವಾಲಿನ ಕೆಲಸ. ಆದರೆ, ಗೋವಾದಿಂದ ಪುಣೆಗೆ ಉದ್ಯೋಗಕ್ಕಾಗಿ ಬಂದ ಕೋಮಲ್ ಕೊಥಾವಾಳೆ ಎಂಬ ಯುವತಿಗೆ ತಮ್ಮ ಹೊಸ ಆಫೀಸ್‌ನ ಸೆಕ್ಯೂರಿಟಿ ಗಾರ್ಡ್ ಮೊದಲ ಸ್ನೇಹಿತನಾಗಿ ಬೆಂಬಲವಾಗಿ ನಿಂತಿದ್ದಾರೆ. ಈ ಇಬ್ಬರ ನಡುವಿನ ಹೃದಯಸ್ಪರ್ಶಿ ಬಾಂಧವ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದು, ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.
ಮೊದಲ ದಿನವೇ ಸ್ನೇಹದ ಪಯಣ ಆರಂಭ
ಕೋಮಲ್ ಸುಮಾರು ಎರಡು ತಿಂಗಳ ಹಿಂದೆ ಗೋವಾದಿಂದ ಪುಣೆಗೆ ಕೆಲಸದ ನಿಮಿತ್ತ ಬಂದಿದ್ದರು. ಆಫೀಸ್‌ನ ಮೊದಲ ದಿನವೇ ಅವರ ಬಳಿ 2-3 ದೊಡ್ಡ ಲಗೇಜ್ ಬ್ಯಾಗ್‌ಗಳಿದ್ದವು. ಅಷ್ಟು ದೊಡ್ಡ ಬ್ಯಾಗ್‌ಗಳನ್ನು ಕಚೇರಿಯ ಒಳಗೆ ಕೊಂಡೊಯ್ಯಲು ಸಾಧ್ಯವಾಗದೆ, ಗೇಟ್ ಬಳಿ ಇದ್ದ ಸೆಕ್ಯೂರಿಟಿ ಗಾರ್ಡ್ ಬಳಿ ಸಾಯಂಕಾಲದವರೆಗೆ ಇಟ್ಟುಕೊಳ್ಳಲು ಮನವಿ ಮಾಡಿದ್ದರು. ಯಾವುದೇ ಹಿಂಜರಿಕೆಯಿಲ್ಲದೆ ತಕ್ಷಣವೇ ಒಪ್ಪಿಕೊಂಡ ಗಾರ್ಡ್, ಇಡೀ ದಿನ ಆ ಬ್ಯಾಗ್‌ಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು, ಈ ಸಣ್ಣ ನೆರವು ಇಬ್ಬರ ನಡುವೆ ಉತ್ತಮ ಸ್ನೇಹದ ಸೇತುವೆಯಾಯಿತು.
'ಹಾಯ್-ಹಲೋ' ಮೀರಿದ ಬಾಂಧವ್ಯ
ಅಂದಿನಿಂದ ಪ್ರತಿದಿನ ಕಚೇರಿಗೆ ಬರುವಾಗ ಮತ್ತು ಹೋಗುವಾಗ ಇಬ್ಬರೂ ಪರಸ್ಪರ ನಮಸ್ಕಾರ ಹೇಳುವುದನ್ನು ಮರೆಯುತ್ತಿರಲಿಲ್ಲ. ದಿನ ಕಳೆದಂತೆ ಇವರ ಸಂಭಾಷಣೆಗಳು ಕೇವಲ ಕುಶಲೋಪರಿಗಷ್ಟೇ ಸೀಮಿತವಾಗದೆ, ಕೆಲಸ, ನಗರದ ಜೀವನ ಹಾಗೂ ದಿನನಿತ್ಯದ ಅನುಭವಗಳ ಬಗ್ಗೆ ಹಂಚಿಕೊಳ್ಳುವ ಮಟ್ಟಕ್ಕೆ ಬೆಳೆಯಿತು. ಇದರಿಂದ ಆಫೀಸ್‌ನಲ್ಲಿ ತಮ್ಮ ಮೊದಲ ಆಪ್ತ ಸ್ನೇಹಿತ ಈ ಸೆಕ್ಯೂರಿಟಿ ಗಾರ್ಡ್ ಎಂದು ಕೋಮಲ್ ಹೇಳಿಕೊಂಡಿದ್ದಾರೆ.
ಕೋಮಲ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲೇನಿದೆ?
ಈ ಬಾಂಧವ್ಯದ ನಡುವೆ, ಕೋಮಲ್ ಸೆಕ್ಯೂರಿಟಿ ಸಿಬ್ಬಂದಿಗಳ ಕಠಿಣ ಕೆಲಸದ ಸ್ಥಿತಿಗತಿಯನ್ನು ಹತ್ತಿರದಿಂದ ಗಮನಿಸಿದರು. 'ಅವರಿಗೆ ವಾರಾಂತ್ಯದ ರಜೆಗಳೇ ಇರುವುದಿಲ್ಲ. ಸ್ವಂತ ಊರಿಗೆ ಹೋಗುವಾಗ ಮಾತ್ರ ಅವರಿಗೆ ರಜೆ ಸಿಗುತ್ತದೆ. ಇದು ನನಗೆ ಕಹಿ ಸತ್ಯದ ಅರಿವು ಮೂಡಿಸಿತು. ಪ್ರತಿಯೊಬ್ಬರ ಜೀವನ ಮತ್ತು ಅನುಭವಗಳು ಎಷ್ಟು ವಿಭಿನ್ನವಾಗಿರುತ್ತವೆ ಎಂಬುದನ್ನು ಇದು ನೆನಪಿಸಿತು,' ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಕೋಮಲ್ ಪ್ರತಿದಿನ ರಾತ್ರಿ 8 ಗಂಟೆಯ ಸುಮಾರಿಗೆ ಆಫೀಸ್‌ನಿಂದ ಹೊರಡುತ್ತಿದ್ದರು. ಆದರೆ ಒಂದು ದಿನ ತಮ್ಮ ಸ್ವಂತ ಊರಿಗೆ ಹೋಗಬೇಕಿದ್ದರಿಂದ ಸಂಜೆ 5:30ಕ್ಕೇ ಹೊರಟರು. ಪ್ರತಿದಿನ ತಡವಾಗಿ ಹೋಗುವ ಯುವತಿ ಬೇಗ ಹೊರಟಿರುವುದನ್ನು ನೋಡಿ ಗಾರ್ಡ್ ಆಶ್ಚರ್ಯಪಡುತ್ತಾರೆ ಎಂಬುದು ಕೋಮಲ್‌ಗೆ ಗೊತ್ತಿತ್ತು. ಹಾಗಾಗಿ ಆ ಕ್ಷಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.
ವಿಡಿಯೋದಲ್ಲಿ ಸೆಕ್ಯೂರಿಟಿ ಗಾರ್ಡ್ ಆಶ್ಚರ್ಯದಿಂದ 'ಇಷ್ಟೊಂದು ಬೇಗ ಹೊರಟಿದ್ದೀರಾ?' ಎಂದು ವಿಚಾರಿಸಿ, ಅವರ ಪ್ರಯಾಣಕ್ಕೆ ಸಂತಸ ವ್ಯಕ್ತಪಡಿಸುವುದು ಕಂಡುಬಂದಿದೆ. 'ಅವರಿಗೆ ಸುಲಭವಾಗಿ ರಜೆ ಸಿಗದಿದ್ದರೂ, ನಾನು ಊರಿಗೆ ಹೊರಟಿದ್ದಕ್ಕೆ ಅವರು ನನ್ನಷ್ಟೇ ಸಂತೋಷಪಟ್ಟರು,' ಎಂದು ಕೋಮಲ್ ತಿಳಿಸಿದ್ದಾರೆ.
ಈ ವಿಡಿಯೋ ಮತ್ತು ಬರಹಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 'ಅವರು ನಿಮ್ಮ ಪ್ರತಿಯೊಂದು ಸಣ್ಣ ವಿಚಾರವನ್ನೂ ಗಮನಿಸುತ್ತಾರೆ. ಇದು ಅತ್ಯಂತ ಸುಂದರ ಹಾಗೂ ಭಾವನಾತ್ಮಕ ಕ್ಷಣ,' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಮಾತನಾಡುವುದು, ಅವರ ಕಷ್ಟ-ಸುಖಗಳನ್ನು ತಿಳಿದುಕೊಳ್ಳುವುದು ಹಾಗೂ ನಾವು ಎಷ್ಟು ಅದೃಷ್ಟವಂತರು ಎಂಬುದನ್ನು ನೆನಪಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದಕ್ಕೆ ಈ ಕಥೆ ಪ್ರಮುಖ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು


Click it and Unblock the Notifications
