ಅಜಿತ್ ಪವಾರ್ ಬೆನ್ನು ತಟ್ಟಿದ ಮೋದಿ: ಮೋದಿ ಬೆನ್ನು ತಟ್ಟಿದ ಶರದ್ ಪವಾರ್- ಮಹಾರಾಷ್ಟ್ರ ರಾಜಕಾರಣದಲ್ಲಿ ಫುಲ್ ಕನ್ಫ್ಯೂಷನ್
ಪುಣೆ, ಜುಲೈ 01: ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಇಂದು ಮಹಾರಾಷ್ಟ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡರು. ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಗಿದ್ದು, ಈ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗವಹಿಸಿದರು. ಇದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಶರದ್ ಪವಾರ್ ಅವರ ನಡೆಯು ಜನರಿಗೆ ಮತ್ತೆ ಕನ್ಫ್ಯೂಷನ್ ಮಾಡಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ಪ್ರತಿಪಕ್ಷಗಳು ಒತ್ತಾಯಿಸಿದರೂ ಶರದ್ ಪವಾರ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದು ವಿರೋಧ ಪಕ್ಷಗಳ ನಾಯಕರ ಆಕ್ರೋಶಕ್ಕೆ ಗುರಿಯಾಗಿದೆ.

ದೆಹಲಿಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರದ ಮಧ್ಯೆ, ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಉಭಯ ನಾಯಕರು ವೇದಿಕೆ ಹಂಚಿಕೊಂಡರು. ಪರಸ್ಪರ ಆತ್ಮೀಯವಾಗಿ ಶುಭಾಶಯ ಕೋರಿದರು.
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಗೆ ಬಂದ ಮೋದಿ ಅವರು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಬೆನ್ನು ತಟ್ಟಿದರು. ಆ ಬಳಿಕೆ ಶರದ್ ಪವಾರ್ ಬಳಿ ನಡೆದುಕೊಂಡು ಹೋದರು. ಆಗ ಶರದ್ ಪವಾರ್ ಅವರು ಪ್ರಧಾನಿ ಮೋದಿ ಅವರ ಬೆನ್ನು ತಟ್ಟಿ ಅಭಿನಂದಿಸಿದರು.

ಲೋಕಮಾನ್ಯ ತಿಲಕ್ ಸ್ಮಾರಕ ಮಂದಿರ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶರದ್ ಪವಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.
ವೇದಿಕೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಇದ್ದರು. ಕುತೂಹಲಕಾರಿಯಾಗಿ, ಡಿಸಿಎಂ ಅಜಿತ್ ಪವಾರ್ ಅವರು ಹಾಜರಿದ್ದರು. ಅಜಿತ್ ಪವಾರ್ ಅವರು ಇತ್ತೀಚೆಗೆ ತಮ್ಮ ಬೆಂಬಲಿಗ ನಾಯಕರ ಜೊತೆಗೆ ಬಿಜೆಪಿಯೊಂದಿಗೆ ಕೈಜೋಡಿಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, 'ಅಪನಂಬಿಕೆಯ ವಾತಾವರಣದಲ್ಲಿ ಅಭಿವೃದ್ಧಿ ಅಸಾಧ್ಯ' ಎಂದು ಹೇಳಿದರು.
ಒಬ್ಬರ ಮೇಲೊಬ್ಬರ ನಂಬಿಕೆ ನಮ್ಮನ್ನು ಬಲಗೊಳಿಸುತ್ತದೆ ಎಂದು ಅವರು ತಿಳಿಸಿದರು.

'ಲೋಕಮಾನ್ಯ ತಿಲಕ್ ಅವರು ಯುವ ಪ್ರತಿಭೆಗಳನ್ನು ಗುರುತಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದರು. ಅವರಂತೆಯೇ ವೀರ್ ಸಾವರ್ಕರ್ ಸಹ ಈ ಸಾಮರ್ಥ್ಯವನ್ನು ಹೊಂದಿದ್ದರು' ಎಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್ ಅವರು, 'ಲೋಕಮಾನ್ಯ ತಿಲಕರು ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ತಂದು ಕೊಡಲು ಬಯಸಿದ್ದರು. ಅವರು ತಮ್ಮ ಆರಂಭಿಕ ದಿನಗಳನ್ನು ಪುಣೆಯಲ್ಲಿ ಕಳೆದರು. ಬ್ರಿಟಿಷರಿಂದ ಸ್ವತಂತ್ರರಾಗಲು ಜನಸಾಮಾನ್ಯರನ್ನು ಒಗ್ಗೂಡಿಸುವ ಅಗತ್ಯವಿದೆ ಎಂದು ತಿಲಕರು ತಿಳಿದಿದ್ದರು' ಎಂದು ಹೇಳಿದರು.
ಏಳು ವರ್ಷಗಳ ಹಿಂದೆ ಪ್ರಧಾನಿ ಮೋದಿ ಮತ್ತು ಶರದ್ ಪವಾರ್ ಕೊನೆಯ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮೋದಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗವಹಿಸಬಾರದು ಎಂದು ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಒತ್ತಾಯಿಸಿತ್ತು.












Click it and Unblock the Notifications