ಈ ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದರೆ ಬಿಲ್ ಕಟ್ಟಬೇಕಿಲ್ಲ! 3000 ಉಚಿತ ಹೆರಿಗೆ ಮಾಡಿಸಿದ ಡಾ. ಗಣೇಶ್
ಆಸ್ಪತ್ರೆಯೊಂದರಲ್ಲಿ ಮಗು ಹುಟ್ಟಿತು ಎಂದರೆ ಅದು ಸಂಭ್ರಮದ ವಾತಾವರಣ. ಆದರೆ, ಅದೇ ಆಸ್ಪತ್ರೆಯಲ್ಲಿ ಗಂಡು ಮಗು ಹುಟ್ಟಿದರೆ ಸಿಹಿ ಹಂಚಿ ಸಂಭ್ರಮಿಸುವ ಕುಟುಂಬಗಳು, ಹೆಣ್ಣು ಮಗು ಹುಟ್ಟಿದರೆ ಕಣ್ಣೀರು ಹಾಕುವ ದೃಶ್ಯಗಳು ನಮ್ಮ ಸಮಾಜದಲ್ಲಿ ಇನ್ನೂ ಕೂಡ ಕಾಣಸಿಗುತ್ತದೆ.
"ಒಬ್ಬ ವೈದ್ಯನಿಗೆ ರೋಗಿಯ ಸಾವಿನ ಸುದ್ದಿ ತಿಳಿಸುವುದು ಎಷ್ಟು ಕಷ್ಟವೋ, ಹೆಣ್ಣು ಮಗು ಜನಿಸಿದೆ ಎಂದು ಕುಟುಂಬದವರಿಗೆ ತಿಳಿಸುವುದು ಕೂಡ ಅಷ್ಟೇ ಕಷ್ಟ" ಎನ್ನುತ್ತಾರೆ ಪುಣೆಯ ಡಾ ಗಣೇಶ್ ರಾಖ್. ಸಮಾಜದಲ್ಲಿರುವ ಈ ಅಮಾನವೀಯ ಮನಸ್ಥಿತಿಯನ್ನ ಕಣ್ಣಾರೆ ಕಂಡ ಅವರು, ಅದನ್ನು ಬೇರುಸಹಿತ ಕಿತ್ತುಹಾಕಲು ಒಂದು ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಸಮಾಜದ ಕಹಿ ಸತ್ಯವನ್ನು ಎದುರಿಸಿದ ವೈದ್ಯ
ವೈದ್ಯಕೀಯ ವೃತ್ತಿಯಲ್ಲಿರುವ ಡಾ. ಗಣೇಶ್ ಅವರು ಪ್ರತಿದಿನವೂ ಸಮಾಜದಲ್ಲಿರುವ ಈ ಗಂಡು ಹೆಣ್ಣು ಎನ್ನುವ ತಾರತಮ್ಯಕ್ಕೆ ಸಾಕ್ಷಿಯಾಗುತ್ತಿದ್ದರು. ಆಸ್ಪತ್ರೆಯಲ್ಲಿ ಹೆಣ್ಣು ಮಗು ಹುಟ್ಟಿದ ತಕ್ಷಣ ಕುಟುಂಬದ ಸದಸ್ಯರು ಮುಖ ಸಿಂಡರಿಸಿಕೊಂಡು ಆಸ್ಪತ್ರೆಯಿಂದ ಹೊರನಡೆಯುತ್ತಿದ್ದರು. ಹೆರಿಗೆಯಾದ ತಾಯಂದಿರು ಕಣ್ಣೀರು ಹಾಕುತ್ತಿದ್ದರು.
ಅಷ್ಟೇ ಅಲ್ಲದೆ, ಗಂಡು ಮಗು ಜನಿಸಿದರೆ ಬಿಲ್ ಕಟ್ಟಲು ಹಿಂದೆ ಮುಂದೆ ನೋಡದ ಅದೇ ಕುಟುಂಬಗಳು, ಹೆಣ್ಣು ಮಗು ಜನಿಸಿದಾಗ ಆಸ್ಪತ್ರೆಯ ಬಿಲ್ ಕಟ್ಟಲು ರಿಯಾಯಿತಿ ಕೇಳುತ್ತಿದ್ದರು. ಗಂಡು-ಹೆಣ್ಣಿನ ನಡುವಿನ ಈ ತಾರತಮ್ಯ ಡಾ. ಗಣೇಶ್ ಅವರ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿತ್ತು.
2011ರ ಜನಗಣತಿ ಮತ್ತು ಬದಲಾವಣೆಯ ಕಿಡಿ
ನಮ್ಮ ದೇಶದಲ್ಲಿ ಈ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣುಮಕ್ಕಳ ಮೇಲಿನ ನಿರ್ಲಕ್ಷ್ಯ ಹೊಸದೇನಲ್ಲ. ಆದರೆ, 2011ರ ಜನಗಣತಿಯ ವರದಿಗಳು ಭಾರತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿರುವುದನ್ನ ಬಿಚ್ಚಿಟ್ಟಿತ್ತು. ಈ ಅಂಕಿ-ಅಂಶಗಳು ಡಾ. ಗಣೇಶ್ ಅವರನ್ನ ಬೆಚ್ಚಿಬೀಳಿಸಿದವು.
ಒಂಬತ್ತು ವರ್ಷದ ಒಂದು ಹೆಣ್ಣುಮಗಳ ತಂದೆಯಾಗಿರುವ ಡಾ. ಗಣೇಶ್ ಅವರಿಗೆ, ತಮ್ಮ ಮಗಳ ಮೇಲಿನ ಅಪಾರ ಪ್ರೀತಿಯೇ ಸಮಾಜದ ಈ ದೃಷ್ಟಿಕೋನವನ್ನ ಬದಲಾಯಿಸುವಂತೆ ಪ್ರೇರೇಪಿಸಿತು. ಹೆಣ್ಣು ಮಗುವಿನ ಜನನವನ್ನ ಶಾಪವಲ್ಲ, ಅದೊಂದು ವರ ಎಂದು ಸಾಬೀತುಪಡಿಸಲು ಅವರು ನಿರ್ಧರಿಸಿದರು.
ಮುಲ್ಗಿ ವಾಚ್ವಾ ಅಭಿಯಾನದ ಆರಂಭ
ತಮ್ಮ ಈ ಆಲೋಚನೆಗೆ ಜೀವ ತುಂಬಲು ಡಾ. ಗಣೇಶ್ ರಾಖ್ ಅವರು ಪುಣೆಯಲ್ಲಿ ಮೆಡಿಕೇರ್ ಆಸ್ಪತ್ರೆಯನ್ನ ಸ್ಥಾಪಿಸಿದರು. ಇದರ ಜೊತೆಗೆ ಮುಲ್ಗಿ ವಾಚ್ವಾ ಅಭಿಯಾನ ಅಂದರೆ ಹೆಣ್ಣು ಮಗುವನ್ನು ಉಳಿಸಿ ಎಂಬ ವಿಶಿಷ್ಟ ಉಪಕ್ರಮವನ್ನ ಪ್ರಾರಂಭಿಸಿದರು.
ಈ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ, ತಮ್ಮ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ ಆ ಕುಟುಂಬದಿಂದ ಹೆರಿಗೆಗಾಗಿ ಯಾವುದೇ ಶುಲ್ಕವನ್ನ ವಿಧಿಸದಿರುವುದು. ಇದು ಕೇವಲ ಉಚಿತ ಹೆರಿಗೆಯಲ್ಲ, ಬದಲಾಗಿ ಹೆಣ್ಣುಮಕ್ಕಳ ಜನನವನ್ನ ಸಂಭ್ರಮಿಸುವ ಒಂದು ಹೊಸ ಪರಂಪರೆಯ ಆರಂಭವಾಗಿತ್ತು.
3000ಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಉಚಿತ ಜನನ
ಈ ಅಭಿಯಾನದ ಮೂಲಕ ಡಾ. ಗಣೇಶ್ ಅವರು ಇದುವರೆಗೆ ಸುಮಾರು 3,000ಕ್ಕೂ ಹೆಚ್ಚು ಉಚಿತ ಹೆಣ್ಣುಮಕ್ಕಳ ಜನನಕ್ಕೆ ಕಾರಣರಾಗಿದ್ದಾರೆ. ಅವರ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದರೆ, ಆಸ್ಪತ್ರೆಯ ವಾತಾವರಣವೇ ಬದಲಾಗುತ್ತದೆ. ಸಿಬ್ಬಂದಿ ಕೇಕ್ ಕತ್ತರಿಸಿ, ಸಿಹಿ ಹಂಚಿ, ಪೋಷಕರಿಗೆ ಹೂವುಗಳನ್ನ ನೀಡಿ ಆ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಇಡೀ ಆಸ್ಪತ್ರೆಯಲ್ಲಿ ಹರ್ಷೋದ್ಗಾರ ಮುಗಿಲುಮುಟ್ಟುತ್ತದೆ.
ಹೆಣ್ಣು ಮಗು ಎಂಬುದು ಹೊರೆಯಲ್ಲ, ಅದೊಂದು ಮನೆಗೆ ಬಂದ ಮಹಾಲಕ್ಷ್ಮಿ ಹಾಗೂ ಸಂಭ್ರಮದ ಸಂಕೇತ ಎಂಬುದನ್ನ ಸಮಾಜಕ್ಕೆ ಸಾರುವುದೇ ಡಾ. ಗಣೇಶ್ ಅವರ ಈ ಸೇವೆಯ ಹಿಂದಿನ ಮೂಲ ಉದ್ದೇಶ. ಅವರ ಈ ಕೆಲಸ ಕೇವಲ ಪುಣೆಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಇಡೀ ದೇಶದಾದ್ಯಂತ ಅನೇಕ ವೈದ್ಯರಿಗೆ ಹಾಗೂ ಜನಸಾಮಾನ್ಯರಿಗೆ ದೊಡ್ಡ ಮಟ್ಟದ ಪ್ರೇರಣೆಯಾಗಿದೆ.
ಹೆಣ್ಣುಮಕ್ಕಳನ್ನ ಗೌರವಿಸುವ ಮತ್ತು ಸಂಭ್ರಮಿಸುವ ಇಂತಹ ಕೆಲಸಗಳೂ ಇಂದಿನ ಸಮಾಜಕ್ಕೆ ತುಂಬ ಮುಖ್ಯ.


Click it and Unblock the Notifications
