ದೊಡ್ಡ ತಪ್ಪು ಮಾಡಿದ್ದೀರಿ, ಅದಕ್ಕೂ ದೊಡ್ಡ ಬೆಲೆ ತೆರುತ್ತೀರಿ: ಪಾಕ್‌ಗೆ ಮೋದಿ ಎಚ್ಚರಿಕೆ
ನವದೆಹಲಿ, ಫೆಬ್ರವರಿ 15: ಪುಲ್ವಾಮಾದಲ್ಲಿ ನಡೆದ ಸೈನಿಕರ ಮೇಲಿನ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆಯೇ ಸಂಪುಟ ಸದಸ್ಯರ ಸಭೆ ನಡೆಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಚರ್ಚಿಸಿದರು.
ಬಳಿಕ ವಂದೇ ಮಾತರಂ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ನಮ್ಮ ಭದ್ರತಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಧೈರ್ಯ ಸಾಮರ್ಥ್ಯದಲ್ಲಿ ನಮಗೆ ನಂಬಿಕೆ ಇದೆ ಎಂದು ಮೋದಿ ಹೇಳಿದರು.
ಈ ಭಯೋತ್ಪದನಾ ಕೃತ್ಯದ ಹಿಂದೆ ಇರುವ ಶಕ್ತಿಗಳು ಮತ್ತು ಅದಕ್ಕೆ ಹೊಣೆಗಾರರಾದವರು ಖಂಡಿತವಾಗಿಯೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದರು.
ಘಟನೆಯ ಹೊಣೆಯನ್ನು ಜೈಶ್ ಎ ಮೊಹಮ್ಮದ್ ಸಂಘಟನೆ ಹೊತ್ತುಕೊಂಡಿದೆ. ಪಾಕಿಸ್ತಾನವು ಈ ದಾಳಿಗೂ ತನಗೂ ಸಂಬಂಧ ಇಲ್ಲ ಎಂದು ಹೇಳಿಕೊಂಡಿದೆ. ಆದರೆ, ಭಾರತವು ಪಾಕಿಸ್ತಾನವೇ ಇದಕ್ಕೆ ಮೂಲ ಹೊಣೆಗಾರ ಎಂದು ಆರೋಪಿಸಿದ್ದು, ನೆರೆ ದೇಶದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಪಾಕಿಸ್ತಾನಕ್ಕೆ ನೀಡಿದ್ದ ಅತಿ ಆಪ್ತ ದೇಶ ಎಂಬ ಸ್ಥಾನಮಾನವನ್ನು ಹಿಂದಕ್ಕೆ ಪಡೆದುಕೊಂಡಿದೆ.

ದೊಡ್ಡ ತಪ್ಪು ಮಾಡಿದ್ದೀರಿ
ಭಯೋತ್ಪಾದನಾ ಸಂಘಟನೆಗಳು ಮತ್ತು ಅವುಗಳ ಪೋಷಕರಿಗೆ ಹೇಳಲು ಬಯಸುತ್ತೇನೆ, ನೀವು ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ಅದಕ್ಕಿಂತಲೂ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇಡೀ ಜಗತ್ತಿನಿಂದ ಏಕಾಂಗಿಯಾಗಿರುವ ನಮ್ಮ ನೆರೆಯ ದೇಶವು ತನ್ನ ತಂತ್ರಗಳು ಮತ್ತು ಸಂಚಿನಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ದೊಡ್ಡ ಪ್ರಮಾದವಾಗಲಿದೆ. ಇದರಿಂದ ಭಾರತ ಇನ್ನಷ್ಟು ಪ್ರಬಲಗೊಳ್ಳಲಿದೆ ಎಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ರಾಜಕೀಯ ಕೆಸರೆರಚಾಟ ಬೇಡ
ಇದು ಅತ್ಯಂತ ಸೂಕ್ಷ್ಮ ಮತ್ತು ಭಾವನಾತ್ಮಕ ಸನ್ನಿವೇಶ. ಇಲ್ಲಿ ದಯವಿಟ್ಟು ರಾಜಕೀಯ ಕೆಸರೆರಚಾಟ ಬೇಡ ಎಂದು ನನ್ನ ಸ್ನೇಹಿತರಿಗೆ ಮನವಿ ಮಾಡುತ್ತೇನೆ. ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಹೋರಾಟ ನಡೆಸುವ ಸಂಬಂಧ ಜಗತ್ತಿಗೆ ಸಂದೇಶ ರವಾನಿಸಬೇಕಿದೆ. ನಮ್ಮನ್ನು ಟೀಕಿಸುತ್ತಿರುವವರ ಭಾವನೆಗಳು ನನಗೆ ಅರ್ಥವಾಗುತ್ತದೆ. ಅವರಿಗೆ ಅದನ್ನು ಹೇಳುವ ಎಲ್ಲ ಹಕ್ಕೂ ಇವೆ ಎಂದು ಮೋದಿ ತಿಳಿಸಿದರು.

ಭಾರತ ಒಗ್ಗಟ್ಟಿನಿಂದ ಇದೆ
ಭಯೋತ್ಪಾದನೆ ವಿರುದ್ಧ ಎಲ್ಲ ದೇಶಗಳೂ ಯಾವಾಗ ಒಟ್ಟಾಗಿ ಹೋರಾಟ ನಡೆಸುತ್ತವೆಯೋ ಆಗ ಅದನ್ನು ನಿರ್ಮೂಲನೆ ಮಾಡಲು ಸಾಧ್ಯ. ಸೈನಿಕರು ಈ ದೇಶಕ್ಕಾಗಿ ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ದಾಳಿಕೋರರಿಗೆ ತಕ್ಕ ಶಾಸ್ತಿ ಮಾಡಲು ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಲ್ಲರಿಗೂ ಭರವಸೆ ನೀಡುತ್ತೇನೆ.
ನೆರೆ ದೇಶದವರು ಭಾರತದ ನಾಶದ ಬಗ್ಗೆ ಕನಸು ಕಾಣುತ್ತಿದ್ದಾರೆ. ಪಾಕಿಸ್ತಾನ ಆರ್ಥಿಕವಾಗಿ ಈಗಾಗಲೇ ದುರ್ಬಲವಾಗಿದೆ. ಅದು ವಿನಾಶದ ಹಾದಿಯಲ್ಲಿದೆ. ಭಾರತ ಒಗ್ಗಟ್ಟಿನಿಂದಿದೆ. ನಮ್ಮ ಶತ್ರುವನ್ನು ಸೋಲಿಸಲು ನಮ್ಮಲ್ಲಿ ಒಗ್ಗಟ್ಟು ಮಹತ್ವದ ಪಾತ್ರ ವಹಿಸಲಿದೆ.

ಯೋಧರ ಕನಸು ನನಸಾಗಿಸುತ್ತೇವೆ
ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಭಾವನೆ ಎಲ್ಲರಲ್ಲಿಯೂ ತೀವ್ರವಾಗಿದೆ. ಎಲ್ಲರಲ್ಲಿಯೂ ಆಕ್ರೋಶ ಹೆಚ್ಚಾಗಿದೆ. ರಕ್ತ ಕುದಿಯುತ್ತಿದೆ. ಇಂತಹ ದಾಳಿಗಳಿಂದ ಭಾರತ ಹೆದರುವುದಿಲ್ಲ. ಎಲ್ಲರೂ ಒಂದಾಗಿ ಉಗ್ರರ ವಿರುದ್ಧ ಹೋರಾಡಬೇಕು. ನಾವು ಹುತಾತ್ಮ ಯೋಧರ ಕನಸನ್ನು ನನಸು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡಿದರು.
ಈ ಘಟನೆಯನ್ನು ಬಲವಾಗಿ ಖಂಡಿಸಿದ ಮತ್ತು ನಮಗೆ ಬೆಂಬಲ ನೀಡಿದ ಎಲ್ಲ ದೇಶಗಳಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ದಾಳಿಗೆ ಕಠಿಣವಾದ ಪ್ರತಿಕ್ರಿಯೆ ನೀಡಲಾಗುವುದು ಎಂದು ಮೋದಿ ತಿಳಿಸಿದರು.












Click it and Unblock the Notifications