ಧಾರವಾಡ ಬೆಂಗಳೂರು ಸೇರಿದಂತೆ ಏಕಕಾಲಕ್ಕೆ 5 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಭೋಪಾಲ್, ಜೂನ್ 27: ಧಾರವಾಡ- ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿದಂತೆ 5 ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಚಾಲನೆ ನೀಡಿದರು.
ರೈಲುಗಳ ಚಾಲನೆ ಸಮಾರಂಭಕ್ಕೂ ಮೊದಲು ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿನಲ್ಲಿದ್ದ ರೈಲಿನ ಸಿಬ್ಬಂದಿ ಮತ್ತು ಕೆಲವು ಮಕ್ಕಳೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದರು.

ಪ್ರಧಾನ ಮಂತ್ರಿಯವರು ಚಾಲನೆ ನೀಡಿದ ಈ 5 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳೆಂದರೆ 1. ರಾಣಿ ಕಮಲಾಪತಿ-ಜಬಲ್‌ಪುರ ವಂದೇ ಭಾರತ್ ಎಕ್ಸ್‌ಪ್ರೆಸ್, 2. ಖಜುರಾಹೊ-ಭೋಪಾಲ್-ಇಂದೋರ್ ವಂದೇ ಭಾರತ್ ಎಕ್ಸ್‌ಪ್ರೆಸ್, 3. ಮಡಗಾಂವ್ (ಗೋವಾ)-ಮುಂಬೈ ವಂದೇ ಭಾರತ್ ಎಕ್ಸ್‌ಪ್ರೆಸ್, 4. ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು 5. ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ.
ಈ ವೇಳೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಜ್ಯೋತಿರಾದಿತ್ಯ ಶಿಂಧಿಯಾ ಉಪಸ್ಥಿತರಿದ್ದರು. ಇತ್ತ ಧಾರವಾಡದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದ್ದರು.
ರಾಣಿ ಕಮಲಾಪತಿ (ಭೋಪಾಲ್)-ಜಬಲ್ಪುರ್ ವಂದೇ ಭಾರತ್ ಎಕ್ಸ್‌ಪ್ರೆಸ್ ಮಧ್ಯಪ್ರದೇಶದ ಮಹಾಕೌಶಲ್ ಪ್ರದೇಶವನ್ನು (ಜಬಲ್‌ಪುರ) ಮಧ್ಯ ಪ್ರದೇಶಕ್ಕೆ (ಭೋಪಾಲ್) ಸಂಪರ್ಕಿಸುತ್ತದೆ. ಮಧ್ಯಪ್ರದೇಶದ ಎರಡನೇ ಸೆಮಿ-ಹೈ ಸ್ಪೀಡ್ ಎರಡು ನಗರಗಳ ನಡುವೆ ಗಂಟೆಗೆ 130 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ಇಲ್ಲಿ ಸಂಚರಿಸುತ್ತಿರುವ ವೇಗದ ರೈಲಿಗೆ ಹೋಲಿಸಿದರೆ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿ ಸಂಚರಿಸುತ್ತದೆ.

ಮಧ್ಯಪ್ರದೇಶದ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ರಾಜ್ಯದ ಮಾಲ್ವಾ ಪ್ರದೇಶ (ಇಂಧೋರ್), ಬುಂದೇಲ್‌ಖಂಡ್ ಪ್ರದೇಶ (ಖಜುರಾಹೊ) ಮತ್ತು ಮಧ್ಯ ಪ್ರದೇಶ (ಭೋಪಾಲ್) ನಡುವೆ ಕಾರ್ಯನಿರ್ವಹಿಸುತ್ತದೆ. ಮಹಾಕಾಳೇಶ್ವರ, ಮಂಡು, ಮಹೇಶ್ವರ, ಖಜುರಾಹೊ, ಪನ್ನಾ ಮುಂತಾದ ಪ್ರವಾಸಿ ತಾಣಗಳಿಗೆ ಈ ರೈಲು ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ರೈಲು ಮಾರ್ಗದಲ್ಲಿ ಅಸ್ತಿತ್ವದಲ್ಲಿರುವ ವೇಗದ ರೈಲಿಗಿಂತ ಸುಮಾರು ಎರಡು ಗಂಟೆ ಮೂವತ್ತು ನಿಮಿಷಗಳ ವೇಗದಲ್ಲಿ ತಲುಪುತ್ತದೆ.
ಮುಂಬೈ-ಮಡ್ಗಾಂವ್ (ಗೋವಾ) ವಂದೇ ಭಾರತ್ ಎಕ್ಸ್‌ಪ್ರೆಸ್- ಇದು ಗೋವಾದ ಮೊದಲ ವಂದೇ ಭಾರತ್ ರೈಲು, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ಕಾರ್ಯನಿರ್ವಹಿಸುತ್ತದೆ. ಶುಕ್ರವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲು ಕಾರ್ಯನಿರ್ವಹಿಸಲಿದೆ. ರೈಲು ಮಾರ್ಗದಲ್ಲಿ ಪ್ರಸ್ತುತ ಇರುವ ರೈಲುಗಳಿಗೆ ಹೋಲಿಸಿದರೆ ಸುಮಾರು ಒಂದು ಗಂಟೆ ಪ್ರಯಾಣದ ಸಮಯವನ್ನು ಉಳಿಸುವ ನಿರೀಕ್ಷೆಯಿದೆ. ಒಡಿಶಾ ದುರಂತದ ನಂತರ ರೈಲ್ವೆ ಸಚಿವಾಲಯವು ಮುಂಬೈ-ಗೋವಾ ವಂದೇ ಭಾರತ್ ರೈಲಿನ ಲೋಕಾರ್ಪಣೆಯನ್ನು ರದ್ದುಗೊಳಿಸಿತ್ತು.
ಕರ್ನಾಟಕದ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಧಾರವಾಡ, ಹುಬ್ಬಳ್ಳಿ ಮತ್ತು ದಾವಣಗೆರೆಯಂತಹ ಪ್ರಮುಖ ನಗರಗಳನ್ನು ರಾಜ್ಯ ರಾಜಧಾನಿ ಬೆಂಗಳೂರಿನೊಂದಿಗೆ ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಸಂಚರಿಸುವ ಅತಿ ವೇಗದ ರೈಲಿಗೆ ಹೋಲಿಸಿದರೆ ರೈಲು ಸುಮಾರು ಮೂವತ್ತು ನಿಮಿಷಗಳಷ್ಟು ವೇಗವಾಗಿರುತ್ತದೆ. ಇದು ಕರ್ನಾಟಕಕ್ಕೆ ಎರಡನೇ ವಂದೇ ಭಾರತ್ ರೈಲು ಆಗಿದ್ದು, ಮೊದಲನೆಯದು ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಡುವೆ ಓಡುತ್ತದೆ.

ಹಟಿಯಾ-ಪಾಟ್ನಾ ವಂದೇ ಭಾರತ್ ಎಕ್ಸ್‌ಪ್ರೆಸ್ ಜಾರ್ಖಂಡ್ ಮತ್ತು ಬಿಹಾರಕ್ಕೆ ಮೊದಲ ವಂದೇ ಭಾರತ್ ಆಗಿರುತ್ತದೆ. ಪಾಟ್ನಾ ಮತ್ತು ರಾಂಚಿ ನಡುವಿನ ಸಂಪರ್ಕವನ್ನು ಹೆಚ್ಚಿಸುವ ರೈಲು ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ವರದಾನವಾಗಲಿದೆ. ಎರಡು ಸ್ಥಳಗಳನ್ನು ಸಂಪರ್ಕಿಸುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಇದು ಸುಮಾರು ಒಂದು ಗಂಟೆ ಇಪ್ಪತ್ತೈದು ನಿಮಿಷಗಳ ಪ್ರಯಾಣದ ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಧಾನಿ "ನಾನು ನಾಳೆ, ಜೂನ್ 27 ರಂದು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭೋಪಾಲ್‌ಗೆ ಬರುತ್ತೇನೆ. ಮೊದಲಿಗೆ, ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ 5 ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗುವುದು. ಈ ರೈಲುಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ಗೋವಾ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.












Click it and Unblock the Notifications