ಮಹಾಶಿವರಾತ್ರಿ 2023: ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಆಧುನಿಕ ಕಾಲದ ಋಷಿ ಎಂದ ರಾಷ್ಟ್ರಪತಿ ದ್ರೌಪದಿ ಮುರ್ಮು
'ಅಸಂಖ್ಯಾತ ಜನರು, ವಿಶೇಷವಾಗಿ ಭಾರತ ಮತ್ತು ವಿದೇಶಗಳ ಯುವಕರು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಸದ್ಗುರು ಸ್ಫೂರ್ತಿ ತುಂಬಿದ್ದಾರೆ
ಕೊಯಮತ್ತೂರು, ಫೆಬ್ರವರಿ. 19: ಇಶಾ ಫೌಂಡೇಶನ್ ಸಂಸ್ಥಾಪಕ ಜಗ್ಗಿ ವಾಸುದೇವ ಅವರು ಆಧುನಿಕ ಕಾಲದ ಋಷಿ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಈಶಾ ಯೋಗ ಕೇಂದ್ರದ ಸಾಂಸ್ಕೃತಿಕ ಸಂಭ್ರಮದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುತು ಜೊತೆಗೆ ಗೌರವ ಅತಿಥಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ರವೀಂದ್ರ ನಾರಾಯಣ ರವಿ, ತಮಿಳುನಾಡು ಐಟಿ ಸಚಿವ ಮನೋ ತಂಗರಾಜ್ ಟಿ ಕೂಡ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾದ ಬಗ್ಗೆ ಸಂತಸ ಹಂಚಿಕೊಂಡಿರುವ ಅವರು, ಆದಿಯೋಗಿಗಳ ಸಮ್ಮುಖದಲ್ಲಿ ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಇಲ್ಲಿಗೆ ಬಂದಿರುವುದು ನನಗೆ ದೊಡ್ಡ ಆಶೀರ್ವಾದ. ಜೀವನದ ಉನ್ನತ ಆದರ್ಶಗಳನ್ನು ಹುಡುಕುತ್ತಿರುವವರಿಗೆ ಇಂದು ವಿಶೇಷವಾಗಿ ಮಹತ್ವದ ಸಂದರ್ಭ. ಮಹಾಶಿವರಾತ್ರಿಯ ರಾತ್ರಿ ಅಜ್ಞಾನದ ಕತ್ತಲೆಯ ಅಂತ್ಯ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಮುಕ್ತಿಯ ದ್ವಾರವಾಗಿ ಪ್ರತಿಷ್ಠಾಪಿಸಲಾದ ಶಕ್ತಿಶಾಲಿ ಮತ್ತು ಅನನ್ಯ ಶಕ್ತಿ ರೂಪವಾದ ಧ್ಯಾನಲಿಂಗದಲ್ಲಿ ಸದ್ಗುರು ನಡೆಸಿದ ಪಂಚ ಭೂತ ಕ್ರಿಯೆಯಲ್ಲಿ ದ್ರೌಪದಿ ಮುರ್ಮು ಭಾಗವಹಿಸಿದ್ದರು. ಇದೇ ವೇಳೆ ಜಗತ್ತಿನಾದ್ಯಂತ ಯೋಗದ ಹರಡುವಿಕೆಯನ್ನು ಸಂಕೇತಿಸಲು ದ್ರೌಪದಿ ಮುರ್ಮು ಆದಿಯೋಗಿಯ ಮುಂದೆ ಮಹಾಯೋಗ ಯಜ್ಞವನ್ನು ಬೆಳಗಿಸಿದ್ದಾರೆ.
ಸದ್ಗುರುವನ್ನು "ಆಧುನಿಕ ಕಾಲದ ಹೆಸರಾಂತ ಋಷಿ" ಎಂದು ಉಲ್ಲೇಖಿಸಿದ ರಾಷ್ಟ್ರಪತಿಗಳು, "ಅಸಂಖ್ಯಾತ ಜನರು, ವಿಶೇಷವಾಗಿ ಭಾರತ ಮತ್ತು ವಿದೇಶಗಳ ಯುವಕರು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಲು ಸದ್ಗುರು ಸ್ಫೂರ್ತಿ ತುಂಬಿದ್ದಾರೆ" ಎಂದು ಪ್ರಶಂಸಿಸಿದ್ದಾರೆ.
"ಮುಂದಿನ 24 ತಿಂಗಳುಗಳಲ್ಲಿ, ಭೂಮಿಯ ಮೇಲಿನ ಕನಿಷ್ಠ 2 ಬಿಲಿಯನ್ ಜನರಿಗೆ ಯೋಗದ ಸರಳ ರೂಪವನ್ನು ಕಲಿಸಿಕೊಡಲು ನಾವು ಬದ್ಧರಾಗಿದ್ದೇವೆ. ಇದು ಮಾನವೀಯತೆಯ ಯೋಗಕ್ಷೇಮಕ್ಕಾಗಿ ನಡೆಯಲೇ ಬೇಕಾಗಿದೆ" ಎಂದು ಸದ್ಗುರು ಈ ವೇಳೆ ಹೇಳಿದ್ದಾರೆ.

ಓಂ ನಮಃ ಶಿವಾಯದ ಮಹತ್ವವನ್ನು ವಿವರಿಸಿದ ಸದ್ಗುರು "ಇದು ಶಬ್ದಗಳ ಅದ್ಭುತ ರೇಖಾಗಣಿತವಾಗಿದೆ. ಇದನ್ನು ಬಳಸಲು ಕಲಿತರೆ, ಅದು ನಿಮ್ಮನ್ನು ಜೀವನದ ಹಲವು ಸಂಕಷ್ಟದ ವಿಷಯಗಳಿಂದ ದೂರವಿಡುತ್ತದೆ. ಜೀವನದ ಪ್ರಕ್ರಿಯೆಯು ನಿಮ್ಮ ಅನುಭವದಲ್ಲಿ ಎಂದಿಗೂ ಹೊರೆಯಾಗದಂತೆ ಆನಂದಮಯ ಅಸ್ತಿತ್ವದ ಕಡೆಗೆ ಆಂತರಿಕ ಅಭಿವೃದ್ಧಿ ನೇರ ಹಾದಿಯಲ್ಲಿ ಸಾಗುತ್ತದೆ" ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಸಂಗೀತಗಾರರು, ನೃತ್ಯಗಾರರು, ಗಾಯಕರು ಮತ್ತು ಕಲಾವಿದರ ಕಾರ್ಯಕ್ರಮ ಮತ್ತು ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುಸಿದ್ದರು. ಸಂಪ್ರದಾಯದಂತೆ, ಸೌಂಡ್ಸ್ ಆಫ್ ಇಶಾ, ಇಶಾ ಅವರ ಸ್ವದೇಶಿ ಸಂಗೀತ ಬ್ಯಾಂಡ್, ರಾಮ್ ಮಿರ್ಜಾಲ, ವೇಲ್ಮುರುಗನ್, ಕುಟ್ಲೆ ಖಾನ್, ಮಾಂಗ್ಲಿ, ಅನನ್ಯ ಚಕ್ರವರ್ತಿ, ಮೀನಲ್ ಜೈನ್, ನಿಹಾರ್ ಶೆಂಬೆಕರ್ ಮತ್ತು ಕನ್ನಡ ಜಾನಪದ ಗಾಯಕರು ಸೇರಿದಂತೆ ಹಲವಾರು ಕಲಾವಿದರೊಂದಿಗೆ ರಾತ್ರಿಯಿಡೀ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ.












Click it and Unblock the Notifications