Republic day: 'ಒಂದು ದೇಶ ಒಂದು ಚುನಾವಣೆ'ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಬೆಂಬಲ
76ನೇ ಗಣರಾಜ್ಯೋತ್ಸವ ಆಚರಣೆಗಾಗಿ ಇಡೀ ದೇಶವೇ ಸಜ್ಜಾಗಿದೆ. ಗಣರಾಜ್ಯೋತ್ಸವಕ್ಕೆ ಮುನ್ನಾದಿನದ ಭಾಷಣದಲ್ಲಿ ಮಾತನಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಒಂದು ದೇಶ ಒಂದು ಚುನಾವಣೆಗೆ ಬಗ್ಗೆ ಮಾತನಾಡಿದ್ದು, ಉತ್ತಮ ಆಡಳಿತ ನೀಡುವ ದೃಷ್ಟಿಯಿಂದ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಒಂದು ದೇಶ ಒಂದು ಚುನಾವಣೆ ಉತ್ತಮ ಆಡಳಿತದ ನಿಯಮಗಳನ್ನು ಮರು ವ್ಯಾಖ್ಯಾನಿಸುವ ಸುಧಾರಣೆಯಾಗಿದೆ. ಹೆಚ್ಚಿನ ಚುನಾವಣಾ ವೆಚ್ಚವನ್ನು ಕಡಿಮೆ ಮಾಡಲು ಇದು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇಂತಹ ಸುಧಾರಣೆಗಳಿಗೆ ದೂರದೃಷ್ಟಿಯ ದಿಟ್ಟತನದ ಅಗತ್ಯವಿದೆ. ಆಡಳಿತದ ನಿಯಮಗಳನ್ನು ಬದಲಾಯಿಸುವ ಸುಧಾರಣೆ ಇದಾಗಿದೆ. ಒಂದು ರಾಷ್ಟ್ರ ಒಂದು ಚುನಾವಣೆ ಯೋಜನೆಯು ಆಡಳಿತದಲ್ಲಿ ಸ್ಥಿರತೆಯನ್ನು ಉತ್ತೇಜಿಸುತ್ತದೆ. ಸಂಪನ್ಮೂಲಗಳ ವೆಚ್ಚವನ್ನು ತಗ್ಗಿಸುತ್ತದೆ, ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಜೊತೆಗೆ ಇನ್ನೂ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಒಂದು ದೇಶ ಒಂದು ಚುನಾವಣೆ ಕುರಿತ ಸಮಿತಿಯ ನೇತೃತ್ವ ವಹಿಸಿದ್ದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಸಂವಿಧಾನ ರಚನೆಯ ಸಮಯದಲ್ಲೇ ಪ್ರಸ್ತಾಪಿಸಲಾಗಿದೆ. ಆದ್ದರಿಂದ ಅದು ಸಂವಿಧಾನಬಾಹಿರವಾಗಲು ಸಾಧ್ಯವಿಲ್ಲ ಎಂದಿದ್ದಾರೆ.
1967 ರವರೆಗೆ ಮೊದಲ ನಾಲ್ಕು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಒಟ್ಟಿಗೆ ನಡೆಸಲಾಯಿತು ಅವರು ನೆನಪಿಸಿದ್ದಾರೆ. ಏಕಕಾಲದಲ್ಲಿ ಚುನಾವಣೆಗಳನ್ನು ಅಸಾಂವಿಧಾನಿಕ ಎಂದು ಹೇಗೆ ಕರೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಒಂದು ದೇಶ, ಒಂದು ಚುನಾವಣೆ ಕಲ್ಪನೆಯನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಒಕ್ಕೂಟ ವಿರೋಧಿ ಎಂದು ಕಾಂಗ್ರೆಸ್ ವಿರೋಧಿಸಿದೆ.
ಬ್ರಿಟೀಷ್ ಯುಗದಿಂದ ಜಾರಿಯಲ್ಲಿರುವ ಕ್ರಿಮಿನಲ್ ಕಾನೂನುಗಳನ್ನು ಮೂರು ಹೊಸ ಕಾನೂನುಗಳೊಂದಿಗೆ ಬದಲಾಯಿಸುವುದನ್ನು ಉಲ್ಲೇಖಿಸಿದ ಅವರು, ದಶಕಗಳಿಂದ ದೇಶದಲ್ಲಿ ಉಳಿದಿರುವ ವಸಾಹತುಶಾಹಿ ಮನಸ್ಥಿತಿಯ ಅವಶೇಷಗಳನ್ನು ತೊಡೆದುಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಶ್ಲಾಘಿಸಿದರು.
ಶಿಕ್ಷೆಗಿಂತ ನ್ಯಾಯ ಹಂಚಿಕೆಗೆ ಆದ್ಯತೆ ನೀಡುವ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ನಿಲ್ಲಿಸುವ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ರಾಷ್ಟ್ರಪತಿಗಳು ಉಲ್ಲೇಖಿಸಿದರು.
ಹಲವು ವರ್ಷಗಳಿಂದ ಆರ್ಥಿಕ ಬೆಳವಣಿಗೆ ನಿರಂತರವಾಗಿ ಹೆಚ್ಚುತ್ತಿರುವ ಬಗ್ಗೆ ಕೂಡ ದ್ರೌಪದಿ ಮುರ್ಮು ಮಾತನಾಡಿದರು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಿವೆ, ರೈತರ ಮತ್ತು ಕಾರ್ಮಿಕರ ಆದಾಯ ಹೆಚ್ಚಾಗಿದ್ದು ಅನೇಕರು ಬಡತನದಿಂದ ಹೊರಬಂದಿದ್ದಾರೆ ಎಂದು ಹೇಳಿದರು.












Click it and Unblock the Notifications