ಪ್ರಯಾಗರಾಜ್‌ನಲ್ಲಿ ಕುಂಭ ಮೇಳಕ್ಕೆ ಸಕಲ ಸಿದ್ಧತೆ: ಇಲ್ಲಿದೆ ವಿವರ
ಉತ್ತರ ಪ್ರದೇಶ, ಡಿಸೆಂಬರ್ 12: ಪ್ರತಿ 12 ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತದೆ. ಜನವರಿ 10 ರಿಂದ ಫೆಬ್ರವರಿ 28ರವರೆಗೆ ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಐಆರ್‌ಸಿಟಿಸಿಯು (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಪ್ರಯಾಗರಾಜ್‌ನಲ್ಲಿ ಟೆಂಟ್ ಸಿಟಿ ನಿರ್ಮಾಣ ಮಾಡಿದೆ ಎಂದು ಐಆರ್‌ಸಿಟಿಸಿ ಟೂರಿಸಂ ಕಾರ್ಪೊರೇಷನ್ ಮೇಲ್ವಿಚಾರಕರಾದ ಹರ್ಷದೀಪ್ ಹಾಗೂ ನವೀನ್ ಅವರು ಮಾಹಿತಿ ನೀಡಿದ್ದಾರೆ.
ಗುರುವಾರ ನಾಡಿನ ವಿವಿಧ ಕಡೆಗಳಿಂದ ಜನಸಾಗರ ಹರಿದು ಬರುತ್ತಿದ್ದು, ಇದಕ್ಕೆ ಉತ್ತರ ಪ್ರದೇಶ ಸರಕಾರ ಹಾಗೂ ಪ್ರಯಾಗ್ ರಾಜ್ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮಹಾ ಕುಂಭಮೇಳವು ನಾಲ್ಕು ಪವಿತ್ರ ಸ್ಥಳಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಹಿಂದೂಗಳ ತೀರ್ಥಯಾತ್ರೆಯಾಗಿದೆ. ಹೀಗಾಗಿ, ಈ ಬಾರಿ ಪ್ರಯಾಗ್ ರಾಜ್‌ಗೆ ಲಕ್ಷಾಂತರ ಜನ ಬರುತ್ತಾರೆ.

ಸಂಗಮದಲ್ಲಿ ಸ್ನಾನ ಮಾಡಿ ಪಾಪ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಐಆರ್‌ಸಿಟಿಸಿ ಸುಸಜ್ಜಿತವಾದ ಅತ್ಯಾಧುನಿಕ ಟೆಂಟ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಎರಡು ವಿಧದ ಟೆಂಟ್ ವ್ಯವಸ್ಥೆ ಇದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಬೆಳಗಿನ ಉಪಹಾರ, ಭೋಜನವೂ ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ತೀರ್ಥ ಸ್ನಾನಕ್ಕಾಗಿ 1300 ವಿಶೇಷ ರೈಲುಗಳ ವ್ಯವಸ್ಥೆ
ಮುಂದಿನ ವರ್ಷ ಜರುಗುವ ವಿಶೇಷ ತೀರ್ಥಸ್ನಾನಕ್ಕಾಗಿ ದೇಶದ ವಿವಿಧೆಡೆಯಿಂದ 40 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದರಲ್ಲಿ 2ಕೋಟಿ ಎನ್‌ಸಿಆರ್ ನಿರ್ವಹಣೆ ಮಾಡುತ್ತಾರೆ. ಪ್ರತಿ ಸಲ 4 ಲಕ್ಷ ಜನ ಪ್ರಯಾಣ ಮಾಡುತ್ತಾರೆ ಎಂದರು.

ಹೀಗಾಗಿ ಎಲ್ಲರ ಪ್ರಯಾಣಕ್ಕಾಗಿ ಈ ಬಾರಿ 1300 ರೈಲುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಜನದಟ್ಟಣೆ ನಿಯಂತ್ರಣದ ಬಗ್ಗೆಯೂ ಕ್ರಮ ವಹಿಸಲಾಗುವುದು. ಪ್ರಯಾಗ್ರಾಜ್ ಜಂಕ್ಷನ್‌ಅನ್ನು ಅಮೃತ್ ಭಾರತ್ ನಿಲ್ದಾಣವನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ನಡೆದ ಕುಂಭಮೇಳದ ವೇಳೆ 650 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿದ್ದವು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮುಂಬರುವ ಕುಂಭಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಸಿನ್ಹಾ, ತೀರ್ಥಸ್ನಾನ ಆರಂಭಕ್ಕೂ ಮುನ್ನ ಜನರಿಗೆ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.












Click it and Unblock the Notifications