ಒಂದೇ ವೇದಿಕೆಯಲ್ಲಿ ದಳಪತಿ ವಿಜಯ್-ಪ್ರಶಾಂತ್ ಕಿಶೋರ್, ತಮಿಳುನಾಡು ಪಕ್ಷಗಳಿಗೆ ನಡುಕ
ತಮಿಳು ಚಿತ್ರರಂಗದ ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೊದಲ ವಾರ್ಷಿಕೋತ್ಸವ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಭಾರತದ ರಾಜಕೀಯ ವಲಯದಲ್ಲಿ ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಗಳಿಸಿರುವ ಪ್ರಶಾಂತ್ ಕಿಶೋರ್ ಕಾಣಿಸಿಕೊಳ್ಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಚುನಾವಣಾ ತಂತ್ರಗಾರ ಹಾಗೂ ಜನ್ ಸುರಾಜ್ ಪಕ್ಷದ ಸಂಸ್ಥಾಪಕರೂ ಆಗಿರುವ ಪ್ರಶಾಂತ್ ಕಿಶೋರ್ ದಿಢೀರನೆ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು ಅಲ್ಲಿನ ಇತರೆ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಮಹಾಬಲಿಪುರಂನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಾಂತ್ ಕಿಶೋರ್ ಅವರ ಉಪಸ್ಥಿತಿಯು ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಾಬಲ್ಯವಿರುವ ತಮಿಳುನಾಡಿನಲ್ಲಿ ಲೆಕ್ಕಾಚಾರದ ಚುನಾವಣಾ ತಂತ್ರ ಎಂದು ಹೇಳಲಾಗುತ್ತಿದೆ.

ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಶಾಂತ್ ಕಿಶೋರ್ ಅವರು ವಿಜಯ್ ಅವರೊಂದಿಗೆ ತಂತ್ರಗಾರಿಕೆ ರೂಪಿಸುತ್ತಿದ್ದಾರಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ವಿಜಯ್ ಅವರು ತಮ್ಮ ಪಕ್ಷಕ್ಕೆ ಚುನಾವಣಾ ತಂತ್ರ ರೂಪಿಸಲು ಪ್ರಶಾಂತ್ ಕಿಶೋರ್ ಅವರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಕಿಶೋರ್ ಅವರು ಬಿಹಾರದ ವಿಧಾನಸಭಾ ಚುನಾವಣೆ ಮೇಲೆ ಇತ್ತೀಚೆಗೆ ಹೆಚ್ಚಾಗಿ ಗಮನ ಹರಿಸಿದ್ದಾರೆ. ಅಲ್ಲದೆ ಅವರು ಭಾರತದಾದ್ಯಂತ ಯಶಸ್ವಿ ರಾಜಕೀಯ ಪ್ರಚಾರಗಳನ್ನು ರೂಪಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಗಾಗಿ ಟಿವಿಕೆ ತನ್ನ ಕಾರ್ಯತಂತ್ರ ರೂಪಿಸಲು ಕಿಶೋರ್ ನೆರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಕ್ಷದ ಗೆಲುವಿನ ಕಾರ್ಯತಂತ್ರ ರೂಪಿಸಲು ಕಿಶೋರ್ ಈ ತಿಂಗಳ ಆರಂಭದಲ್ಲಿ ಟಿವಿಕೆ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಕಿಶೋರ್ ಅವರು ತಮಿಳುನಾಡಿನ ರಾಜಕೀಯ ಸನ್ನಿವೇಶ ಮತ್ತು ದ್ರಾವಿಡ ದಿಗ್ಗಜರನ್ನು ದೂರವಿಡಲು ಇತರ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಾರ್ಯಸಾಧ್ಯತೆ ಸೇರಿದಂತೆ ಪ್ರಮುಖ ಅಂಶಗಳನ್ನು ಈಗಾಗಲೇ ವಿಶ್ಲೇಷಿಸಿದ್ದಾರಂತೆ. ಅಲ್ಲದೆ ಪ್ರಶಾಂತ್ ಕಿಶೋರ್ ಅವರು ಟಿವಿಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ಹಾಗೂ ಚುನಾವಣಾ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ಮತ್ತು ಪಕ್ಷದ ರಾಜಕೀಯ ತಂತ್ರಜ್ಞ ಜಾನ್ ಆರೋಕಿಯಸಾಮಿ ಅವರೊಂದಿಗೆ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಕೂಡ ನಡೆಸಿದ್ದಾರೆ.

ಇಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್ ಅವರು ವಿಜಯ್ ಹಾಗೂ ಟಿವಿಕೆ ಪಕ್ಷಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಪಕ್ಷವನ್ನು "ಬದಲಾವಣೆಯ ಚಳುವಳಿ" ಎಂದು ಕರೆದಿರುವ ಅವರು ನಟ-ರಾಜಕಾರಣಿಯಾಗಿರುವ ವಿಜಯ್ ಅವರನ್ನು ʼತಮಿಳುನಾಡಿಗೆ ಹೊಸ ಭರವಸೆʼ ಎಂದು ಬಣ್ಣಿಸಿದ್ದಾರೆ.
ಕಿಶೋರ್ ಮತ್ತು ಅವರ ತಂಡವು 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಧುನಿಕ ಜಾಹೀರಾತು ಪ್ರಚಾರ ಕಾರ್ಯತಂತ್ರ ರೂಪಿಸಿದ್ದರು. ಬಿಜೆಪಿಯ ಚಾಯ್ ಪೇ ಚರ್ಚಾ, 3ಡಿ ರ್ಯಾಲಿಗಳು, ರನ್ ಫಾರ್ ಯೂನಿಟಿ, ಮಂಥನ್ ಸೇರಿದಂತೆ ಹಲವು ಕಾರ್ಯಕ್ರಮಗಳ ರೂಪಾಯಿ ಕೂಡ ಪ್ರಶಾಂತ್ ಕಿಶೋರ್. ಹಾಗಾಗಿ ವಿಜಯ್ ಅವರ ಪಕ್ಷ ಕೂಡ ಮುಂದಿನ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ತಂತ್ರದಿಂದ ಗೆಲ್ಲುವುದು ಫಿಕ್ಸ್ ಎಂದು ಹೇಳಲಾಗುತ್ತಿದೆ.












Click it and Unblock the Notifications