ಆರೆಸ್ಸೆಸ್ ತೃತೀಯ ವರ್ಷ ಸಮಾರಂಭಕ್ಕೆ ಪ್ರಣಬ್ ಮುಖರ್ಜಿ ಅತಿಥಿ!
ನಾಗ್ಪುರ್, ಮೇ 28: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆ)ನ ಮೂರನೇ ವರ್ಷದ ವರ್ಗ ಸಮಾರಂಭದ ಸಮಾರೋಪಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜೂನ್ ತಿಂಗಳಿನಲ್ಲಿ ಅರೆಸ್ಸೆಸ್ ನ ಮುಖ್ಯ ಕೇಂದ್ರ ಇಲ್ಲಿನ ರೇಷಿಮ್ ಭಾಗ್ ನಲ್ಲಿ ನಡೆಯಲಿರುವ ನಡೆಯಲಿರುವ ಈ ಸಮಾರಂಭಕ್ಕೆ ಪ್ರತಿವರ್ಷವೂ ವಿವಿಧ ರಂಗದ ಗಣ್ಯರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರಮುಖ್ ಅರುಣ್ ಕುಮಾರ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಕಾರ್ಯಕ್ರಮಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಜೂನ್ 7ರಂದು ನಡೆಯಬಹುದಾದ ಈ ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಅತಿಥಿಗಳಿಂದ ಭಾಷಣ ಕೂಡಾ ಇರುತ್ತದೆ. ಭಾರತದ ರಾಜಕೀಯ ತಜ್ಞರ ಪೈಕಿ ಒಬ್ಬರೆನಿಸಿರುವ ಪ್ರಣಬ್ ಮುಖರ್ಜಿ ಅವರು ತಮ್ಮ ಸಕ್ರಿಯ ರಾಜಕಾರಣದಲ್ಲಿ ಅಪ್ಪಟ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡವರು.
ಮಹಾತ್ಮಾ ಗಾಂಧೀಜಿ ಹತ್ಯೆ ಸಂಬಂಧ ಆರೆಸ್ಸೆಸ್ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹರಿಹಾಯ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯುವಾಗಲೆಲ್ಲ ಆರೆಸ್ಸೆಸ್ ವಿರುದ್ಧ ಕಾಂಗ್ರೆಸ್ ಕಿಡಿಕಾರುತ್ತಾ ಬಂದಿದೆ. ಹೀಗಿರುವಾಗ ಪ್ರಣಬ್ ಮುಖರ್ಜಿ ಅವರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದು ಹಲವರ ಹುಬ್ಬೇರಿಸಿದೆ.












Click it and Unblock the Notifications