ಪ್ರಧಾನಿ ಮೋದಿ ವಿರುದ್ಧ ಕೆಟ್ಟ ಭಾಷೆ ಬಳಸುವುದನ್ನು ಸಹಿಸಲು ಸಾಧ್ಯವಿಲ್ಲ: ಸಚಿವ ಪ್ರಲ್ಹಾದ್ ಜೋಶಿ
ನವದೆಹಲಿ, ಮೇ. 03: ವಿಧಾನಸಭಾ ಚುನಾವನೆ ಹಿನ್ನೆಲೆ ರಾಜ್ಯದಲ್ಲಿ ಸ್ಟಾರ್ ಪ್ರಚಾರಕರ ದಂಡೇ ನೆರೆದಿದೆ. ಒಂದಲ್ಲ ಒಂದು ಪಕ್ಷ ಮತ್ತೊಂದು ಪಕ್ಷದ ನಾಯಕರನ್ನು ಹಂಗಿಸಿಯೋ, ಲೇವಡಿ ಮಾಡಿಯೋ ಮಾತಾಡುವುದು ನಡೆಯುತ್ತಿದೆ. ಇಂತಹ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ "ಕೊಳಕು ಭಾಷೆ" ಬಳಸುತ್ತಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಮುಂದಿನ ವಾರ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಸಚಿವ ಪ್ರಲ್ಹಾದ್ ಜೋಶಿ, ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿ, "ಪ್ರಧಾನಿಯವರ ಜನಪ್ರಿಯತೆ ಮತ್ತು ಯಶಸ್ಸನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ, ಆದ್ದರಿಂದ ಅವರು ಹೊಲಸು ಭಾಷೆಯ ಮೂಲಕ ತಮ್ಮನ್ನು ತೃಪ್ತಿಪಡಿಸಿಕೊಳ್ಳಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಜನರು ಇದನ್ನು ಸಹಿಸುವುದಿಲ್ಲ. ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ" ಎಂದಿದ್ದಾರೆ.

ಕಲಬುರಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ "ಮೋದಿ ವಿಷಪೂರಿತ ಹಾವು" ಹೇಳಿಕೆಯ ಒಂದು ವಾರದ ನಂತರ ಪ್ರಲ್ಹಾದ್ ಜೋಶಿಯವರ ಈ ಹೇಳಿಕೆಗಳು ಬಂದಿವೆ. ಟೀಕೆಗಳು ವ್ಯಕ್ತವಾದ ಬೆನ್ನಲ್ಲೆ ಮಲ್ಲಿಕಾರ್ಜುನ ಖರ್ಗೆ ಅವರು ಭಾರತೀಯ ಜನತಾ ಪಕ್ಷದ ಸಿದ್ಧಾಂತವನ್ನು ಉಲ್ಲೇಖಿಸುತ್ತಿದ್ದಾರೆಯೇ ಹೊರತು ಪ್ರಧಾನಿ ಅಲ್ಲ ಎಂದು ಹೇಳಿದ್ದರು. ಆದರೆ ಆ ಹೊತ್ತಿಗೆ ಈ ಹೇಳಿಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತೀವ್ರ ಪ್ರತಿಕ್ರಿಯೆ ನೀಡಿದ್ದರು.
ಕೆಲವು ದಿನಗಳ ನಂತರ ಸ್ವತಃ ಪ್ರಧಾನ ಮಂತ್ರಿಯೇ ಕಾಂಗ್ರೆಸ್ ನಾಯಕನ ವಿಷಕಾರಿ ಮಾತುಗಳಿಗೆ ಪ್ರತಿಕ್ರಿಯಿಸಿದರು. ಈ ಚುನಾವಣೆಯಲ್ಲಿ ತಾವು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಖ್ಯ ವಿಷಯವನ್ನಾಗಿಸಿಕೊಂಡಿದ್ದು, ಹೀಗಾಗಿ ವಿರೋಧ ಪಕ್ಷವು ಅವರನ್ನು ದ್ವೇಷಿಸುತ್ತಿದೆ ಎಂದು ಘೋಷಿಸಿದರು.

"ನನ್ನ ಸರ್ಕಾರವು ಬಲಿಷ್ಠ ರಾಷ್ಟ್ರವನ್ನು ಮಾಡಲು ಮತ್ತು ಭ್ರಷ್ಟಾಚಾರವನ್ನು ಅದರ ಬೇರುಗಳಿಂದ ನಿರ್ಮೂಲನೆ ಮಾಡಲು ಶ್ರಮಿಸುತ್ತಿದೆ. ಕಾಂಗ್ರೆಸ್ ಅದನ್ನು ಇಷ್ಟಪಡುತ್ತಿಲ್ಲ. ಅದಕ್ಕೆ ಪ್ರತಿಯಾಗಿ ಅವರು ನನ್ನನ್ನು ವಿಷಪೂರಿತ ಹಾವು ಎಂದು ಕರೆಯುತ್ತಿದ್ದಾರೆ" ಎಂದು ಕೋಲಾರದ ಮತದಾರರಿಗೆ ಮೋದಿ ಹೇಳಿದ್ದರು. ಜೊತೆಗೆ ಈಶ್ವರನ ಕೊರಳಲ್ಲಿರುವ ಹಾವಿಗೆ ಹೋಲಿಸಿಕೊಂಡಿದ್ದರು.
ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ "ವಿಷಪೂರಿತ ಹಾವು" ಮತ್ತು ವಿಷಕನ್ಯೆ ಹೇಳಿಕೆಗಳನ್ನು ಚುನಾವಣಾ ಆಯೋಗವು ಮನಿಸಿದ್ದು, ಕರ್ನಾಟಕದ ಎಲ್ಲಾ ಪಕ್ಷಗಳಿಗೆ ಮತ್ತು ಸ್ಟಾರ್ ಪ್ರಚಾರಕರಿಗೆ ತಮ್ಮ ಮಾತುಗಳಲ್ಲಿ ಗಮನಹರಿಸುವಂತೆ ಮತ್ತು "ಅನುಚಿತ ಶಬ್ದಗಳು ಮತ್ತು ಭಾಷೆಯ ಬಳಕೆಯನ್ನು ಮಾಡದಂತೆ ಸೂಚನೆ ನೀಡಿದೆ.
ಈ ವರ್ಷ ಚುನಾವಣೆ ನಡೆಯಲಿರುವ ಮೊದಲ ದೊಡ್ಡ ರಾಜ್ಯ ಕರ್ನಾಟಕ, ನಂತರ ರಾಜಸ್ಥಾನ ಮತ್ತು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಚುನಾವಣೆ ನಡೆಯಲಿದೆ. ಸದ್ಯ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನಿಕಟ ಸ್ಪರ್ಧೆ ವ್ಯಾಪಕವಾಗಿ ಕಂಡುಬರುತ್ತಿದೆ. ಇದರ ಜೊತೆಗೆ ಜಾತ್ಯತೀತ ಜನತಾ ದಳ ಕೂಡ ಕಣದಲ್ಲಿದೆ.












Click it and Unblock the Notifications