ಗಾಂಧಿಗಳು ಇದಕ್ಕೆಲ್ಲ ಕೇರ್ ಮಾಡೊಲ್ಲ: ಪಂಜಾಬ್ ಅತ್ಯಾಚಾರ ಘಟನೆ ಬಗ್ಗೆ ಬಿಜೆಪಿ ವಾಗ್ದಾಳಿ
ನವದೆಹಲಿ, ಅಕ್ಟೋಬರ್ 24: ಪಂಜಾಬ್‌ನ ಹೋಶಿಯಾರ್‌ಪುರದ ಗ್ರಾಮದಲ್ಲಿ ಆರು ವರ್ಷ ಬಾಲಕಿಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಪಕ್ಷದ ಯಾವುದೇ ಪ್ರಮುಖ ಮುಖಂಡರು ಏಕೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದೆ.
'ಹೋಶಿಯಾರ್‌ಪುರದ ತಾಂಡಾ ಗ್ರಾಮದಲ್ಲಿ ಬಿಹಾರದ ಆರು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತೀವ್ರ ಆಘಾತಕಾರಿಯಾಗಿದೆ. ರಾಜಕೀಯ ಪ್ರವಾಸಗಳನ್ನು ಮಾಡುವ ಬದಲು ರಾಹುಲ್ ಗಾಂಧಿ ತಾಂಡಾ, ಪಂಜಾಬ್ ಮತ್ತು ರಾಜಸ್ಥಾನಗಳಿಗೆ ಭೇಟಿ ನೀಡಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು' ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
'ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಥವಾ ಪ್ರಿಯಾಂಕಾ ಗಾಂಧಿಯಾಗಲಿ, ಯಾರೊಬ್ಬರೂ ತಾಂಡಾದಲ್ಲಿನ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುವ ಕಾಳಜಿ ತೋರಿಸಿಲ್ಲ. ಅವರು ತಮ್ಮದೇ ಪಕ್ಷದ ಆಡಳಿತ ಇರುವ ರಾಜ್ಯಗಳಲ್ಲಿ ಮಹಿಳೆಯ ವಿರುದ್ಧದ ಅನ್ಯಾಯಗಳ ಬಗ್ಗೆ ಗಮನ ಕೊಡುವುದಿಲ್ಲ. ಆದರೆ ಹತ್ರಾಸ್ ಮತ್ತು ಇತರೆ ಪ್ರದೇಶಗಳಿಗೆ ತೆರಳಿ ಸಂತ್ರಸ್ತೆಯ ಕುಟುಂಬದವರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ' ಎಂದು ಟೀಕಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಪಂಜಾಬ್‌ನಲ್ಲಿ ವಲಸೆ ಹೋಗಿದ್ದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಘಟನೆ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ಬಿಹಾರದಿಂದ ವಲಸೆ ಹೋಗಿದ್ದ ದಲಿತ ಕಾರ್ಮಿಕ ಕುಟುಂಬದ ಆರು ವರ್ಷದ ಮಗುವನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿದೆ. ದೇಹವನ್ನು ಅರ್ಧ ಸುಟ್ಟುಹಾಕಲಾಗಿದೆ. ಆದರೆ ತಮಗೆ ರಾಜಕೀಯವಾಗಿ ಲಾಭ ನೀಡುವಂತಹ ಬೇರೆ ಎಲ್ಲ ಜಾಗಗಳಿಗೂ ಓಡುವ ಸಹೋದರ-ಸಹೋದರಿಯ ಜೋಡಿಯ ಆತ್ಮಸಾಕ್ಷಿಯನ್ನು ಇದು ಅಲುಗಾಡಿಸಿಲ್ಲ' ಎಂದು ನಿರ್ಮಲಾ ಸೀತಾರಾಮನ್ ಟೀಕಿಸಿದ್ದಾರೆ.
'ಟ್ವೀಟ್ ಸ್ನೇಹಿ ಮುಖಂಡ ಶ್ರೀ ರಾಹುಲ್ ಗಾಂಧಿ ಅವರಿಂದ ಒಂದೇ ಒಂದು ಪದವಿಲ್ಲ. ಹೋಶಿಯಾರ್‌ಪುರ ಅತ್ಯಾಚಾರ ಘಟನೆ ಬಗ್ಗೆ ಒಂದೂ ಟ್ವೀಟ್ ಮಾಡಿಲ್ಲ. ಇದರ ಬಗ್ಗೆ ಆಕ್ರೋಶವಿಲ್ಲ, ಪ್ರವಾಸವಿಲ್ಲ. ಹೌದು ನೀವು ಹೋಗಬಹುದು. ಆದರೆ ಹೋಶಿಯಾರ್‌ಪುರಕ್ಕೆ ಏಕಿಲ್ಲ? ರಾಜಸ್ಥಾನಕ್ಕೆ ಏಕೆ ಹೋಗಿಲ್ಲ? ಘಟನೆಗಳ ಕುರಿತು ಅವರ ಆಯ್ದ ಅಳು ಸಂಪೂರ್ಣವಾಗಿ ಬೆತ್ತಲಾಗಿದೆ' ಎಂದು ಕಿಡಿಕಾರಿದ್ದಾರೆ.












Click it and Unblock the Notifications