PM SVANidhi scheme; ಪ್ರಧಾನಿ ಸ್ವನಿಧಿ ಸಾಲ ಪಡೆಯೋದು ಹೇಗೆ, ಏನಿದು ಸಾಲ ಯೋಜನೆ? ಯಾರು ಅರ್ಹರು?
PM SVANidhi scheme: ಬೀದಿಬದಿ ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ (PM SVANidhi) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ಬೀದಿಬದಿ ವ್ಯಾಪಾರಿಗಳು ಯಾವುದೇ ಅಡಮಾನ ನೀಡದೆ ಕಾರ್ಯನಿರ್ವಹಣಾ ಬಂಡವಾಳ ಸಾಲ ಪಡೆಯಬಹುದು.
PM SVANidhi Scheme: ಏನಿದು PM ಸ್ವನಿಧಿ ಯೋಜನೆ?
ಬೀದಿಬದಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಮುಂದುವರಿಸಲು ಅಥವಾ ವಿಸ್ತರಿಸಲು ಅಗತ್ಯವಿರುವ ಕಾರ್ಯನಿರ್ವಹಣಾ ಬಂಡವಾಳ ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶ. ಆರಂಭಿಕ ಹಂತದಲ್ಲಿ ₹10,000 ವರೆಗೆ ಸಾಲ ಪಡೆಯಬಹುದು. ಸಾಲವನ್ನು ಸಾಮಾನ್ಯವಾಗಿ ಒಂದು ವರ್ಷದ ಅವಧಿಯಲ್ಲಿ ಮರುಪಾವತಿ ಮಾಡಬೇಕು.

ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸುವವರಿಗೆ ಮುಂದಿನ ಹಂತದಲ್ಲಿ ಹೆಚ್ಚಿನ ಮೊತ್ತದ ಸಾಲ ಪಡೆಯುವ ಅವಕಾಶವಿದೆ. ಯೋಜನೆಯ ಮೂಲ ವಿನ್ಯಾಸದಲ್ಲಿ ಎರಡನೇ ಹಂತದಲ್ಲಿ ₹20,000 ಮತ್ತು ಮೂರನೇ ಹಂತದಲ್ಲಿ ₹50,000 ವರೆಗೆ ಸಾಲದ ಅವಕಾಶವಿದೆ.
PM SVANidhi Scheme: ಯಾರು ಅರ್ಜಿ ಸಲ್ಲಿಸಬಹುದು?
ಬೀದಿಬದಿ ವ್ಯಾಪಾರಿಗಳು, ಹಣ್ಣು-ತರಕಾರಿ ಮಾರಾಟಗಾರರು, ಆಹಾರ ಮಾರಾಟಗಾರರು ಸೇರಿದಂತೆ ನಗರ ಪ್ರದೇಶಗಳಲ್ಲಿ ವ್ಯಾಪಾರ ನಡೆಸುವ ಅರ್ಹ ಮಾರಾಟಗಾರರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ನಗರಗಳ ಸುತ್ತಮುತ್ತಲಿನ ಗ್ರಾಮೀಣ ಹಾಗೂ ಪೆರಿಅರ್ಬನ್ ಪ್ರದೇಶಗಳಿಂದ ನಗರ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುವವರಿಗೂ ಯೋಜನೆ ಅನ್ವಯಿಸುತ್ತದೆ.
ನಗರ ಸ್ಥಳೀಯ ಸಂಸ್ಥೆಯ Certificate of Vending ಅಥವಾ ಗುರುತಿನ ಚೀಟಿ ಇದ್ದರೆ ಅರ್ಜಿ ಸಲ್ಲಿಸಬಹುದು. ಸಮೀಕ್ಷೆಯಲ್ಲಿ ಹೆಸರು ಇದ್ದರೂ ಗುರುತಿನ ಚೀಟಿ ಇಲ್ಲದಿದ್ದರೆ ತಾತ್ಕಾಲಿಕ ಪ್ರಮಾಣಪತ್ರದ ಮೂಲಕವೂ ಪ್ರಕ್ರಿಯೆ ಮುಂದುವರಿಸಬಹುದು.
ಬೇಕಾಗುವ ದಾಖಲೆಗಳು
* ಆಧಾರ್ ಕಾರ್ಡ್
* ವೆಂಡಿಂಗ್ ಸರ್ಟಿಫಿಕೇಟ್/ಗುರುತಿನ ಚೀಟಿ
* ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಗುರುತಿನ ಚೀಟಿ ಇಲ್ಲದಿದ್ದರೆ ಸಂಬಂಧಿತ ನಗರ ಸ್ಥಳೀಯ ಸಂಸ್ಥೆ/ಟೌನ್ ವೆಂಡಿಂಗ್ ಸಮಿತಿಯಿಂದ ಶಿಫಾರಸು ಪತ್ರ
ಅರ್ಹತೆಯನ್ನು ಸಾಬೀತುಪಡಿಸಲು ಬ್ಯಾಂಕ್/NBFC/MFI ಸಾಲದ ದಾಖಲೆ ಅಥವಾ ಬೀದಿ ವ್ಯಾಪಾರಿಗಳ ಸಂಘದ ಸದಸ್ಯತ್ವದಂತಹ ದಾಖಲೆಗಳನ್ನೂ ಕೆಲವು ಸಂದರ್ಭಗಳಲ್ಲಿ ಬಳಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
PM SVANidhi ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕರೆಸ್ಪಾಂಡೆಂಟ್ (BC) ಅಥವಾ ಮೈಕ್ರೋ ಫೈನಾನ್ಸ್ ಸಂಸ್ಥೆಯ (MFI) ಏಜೆಂಟ್‌ಗಳ ಸಹಾಯದಿಂದಲೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವ ವ್ಯವಸ್ಥೆಯೂ ಇದೆ.
ಸಿಗುವ ಪ್ರಮುಖ ಪ್ರಯೋಜನಗಳು
ಬಡ್ಡಿ ಸಬ್ಸಿಡಿ: ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ಶೇ.7ರಷ್ಟು ಬಡ್ಡಿ ಸಬ್ಸಿಡಿ ದೊರೆಯುತ್ತದೆ. ₹10,000 ಸಾಲವನ್ನು ಎಲ್ಲಾ ಕಂತುಗಳನ್ನು ಸಮಯಕ್ಕೆ ಪಾವತಿಸಿದರೆ ಸುಮಾರು ₹400 ಬಡ್ಡಿ ಸಬ್ಸಿಡಿ ದೊರೆಯಬಹುದು.
ಡಿಜಿಟಲ್ ವಹಿವಾಟಿಗೆ ಕ್ಯಾಶ್‌ಬ್ಯಾಕ್: ಡಿಜಿಟಲ್ ವಹಿವಾಟು ನಡೆಸುವ ಅರ್ಹ ವ್ಯಾಪಾರಿಗಳಿಗೆ ನಿಯಮಾನುಸಾರ ವರ್ಷಕ್ಕೆ ₹1,200 ವರೆಗೆ ಕ್ಯಾಶ್‌ಬ್ಯಾಕ್ ಸಿಗಬಹುದು.
ಅಡಮಾನ ಅಗತ್ಯವಿಲ್ಲ: PM SVANidhi ಸಾಲ ಪಡೆಯಲು ಯಾವುದೇ collateral security ನೀಡುವ ಅಗತ್ಯವಿಲ್ಲ.
ಹೀಗಾಗಿ, ಸಣ್ಣ ಪ್ರಮಾಣದಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ಕಡಿಮೆ ಮೊತ್ತದ ಕಾರ್ಯನಿರ್ವಹಣಾ ಬಂಡವಾಳ ಪಡೆಯಲು PM SVANidhi ಯೋಜನೆ ನೆರವಾಗುತ್ತದೆ.


Click it and Unblock the Notifications
