ಕತಾರ್ ರಾಜನ ಸ್ವಾಗತಿಸಲು ಸ್ವತಃ ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ
ಅಪರೂಪದ ಘಟನೆ ಎನ್ನುವಂತೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಬರಮಾಡಿಕೊಂಡಿದ್ದಾರೆ. ಕತಾರ್ ದೊರೆ ಎರಡು ದಿನಗಳ ಭಾರತ ಭೇಟಿಗಾಗಿ ಸೋಮವಾರ ದೆಹಲಿಗೆ ಆಗಮಿಸಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಕತಾರ್ ದೊರೆಯನ್ನು ಸ್ವಾಗತಿಸಿದರು. ಕತಾರ್ ದೊರೆ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಮಂಗಳವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದು, ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಕತಾರ್ ದೊರೆ ಭಾರತಕ್ಕೆ ಬಂದಿದ್ದಾರೆ. ಕತಾರ್‌ನ ಅಮೀರ್ ಎರಡನೇ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ. 2015ರ ಮಾರ್ಚ್ ತಿಂಗಳಿನಲ್ಲಿ ಅವರು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಪ್ರಧಾನಿ ಮೋದಿ ಟ್ವೀಟ್
"ನನ್ನ ಸಹೋದರ, ಕತಾರ್ ಅಮೀರ್ ಎಚ್.ಎಚ್. ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಿದ್ದೆ. ಅವರ ಭಾರತದ ಭೇಟಿ ಫಲಪ್ರದವಾಗಲಿ ಎಂದು ಹಾರೈಸುತ್ತೇನೆ. ನಾಳೆ ನಮ್ಮಿಬ್ಬರ ಭೇಟಿಯನ್ನು ಎದುರು ನೋಡುತ್ತಿದ್ದೇನೆ" ಎಂದು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಎರಡೂ ದೇಶಗಳ ನಡುವೆ ಸ್ನೇಹವನ್ನು ಬಲಪಡಿಸಲು ಈ ಭೇಟಿ ಮತ್ತಷ್ಟು ಸಹಕಾರಿಯಾಗಲಿದೆ. ಭಾರತ ಮತ್ತು ಕತಾರ್ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿವೆ. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಸಂಸ್ಕೃತಿ ಮತ್ತು ಎರಡೂ ದೇಶಗಳ ನಡುವೆ ಜನರ ನಡುವಿನ ಸಂಬಂಧ ಬಲಗೊಳ್ಳುತ್ತಿದೆ.












Click it and Unblock the Notifications