Vande Bharat Express :ಆರನೇ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಮುಂಬೈ, ಡಿ.11: ನಾಗಪುರ - ಬಿಲಾಸ್‌ಪುರ ಮಾರ್ಗದಲ್ಲಿ ಭಾರತದ ಆರನೇ ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದರು.
ಮಹಾರಾಷ್ಟ್ರ ಮತ್ತು ಗೋವಾ ಎರಡು ರಾಜ್ಯಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವಾರು ದೊಡ್ಡ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮಹಾರಾಷ್ಟ್ರದ ನಾಗಪುರದಲ್ಲಿ, ಪ್ರಧಾನಿ ದೇಶದ ಆರನೇ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ನಾಗ್ಪುರ ಮೆಟ್ರೋಗೆ ಚಾಲನೆ ನೀಡಿದರು.
ಸುಮಾರು 75,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುವುದು ಎಂದು ಶನಿವಾರ ಸರ್ಕಾರ ಹೇಳಿಕೆ ನೀಡಿದೆ. ಇದರ ಭಾಗವಾಗಿ ಹಲವಾರು ಯೋಜನೆಗಳು ಆರಂಭವಾಗಲಿವೆ.
ಗೋವಾದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಸಿದ್ಧವಾಗಿರುವ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಭಾರತದ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್
ಭಾರತದ ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ಬಿಲಾಸ್‌ಪುರ (ಛತ್ತೀಸ್ಗಢ) - ನಾಗ್ಪುರ (ಮಹಾರಾಷ್ಟ್ರ) ಮಾರ್ಗಗಳ ನಡುವೆ ಓಡಲಿದೆ. ಪ್ರಧಾನಿ ಮೋದಿ ಜೊತೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಶತಾಬ್ದಿ ರೈಲಿನಂತಹ ಪ್ರಯಾಣ ತರಗತಿಗಳನ್ನು ಹೊಂದಿದ್ದು, ಉತ್ತಮ ಸೌಲಭ್ಯಗಳನ್ನು ಹೊಂದಿದೆ. ಈ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ಸಂಪೂರ್ಣವಾಗಿ ಹೊಸ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ವಾರದಲ್ಲಿ ಆರು ದಿನ ವಂದೇ ಭಾರತ್ ರೈಲು
ಆರನೇ ವಂದೇ ಭಾರತ್ ಎಕ್ಸ್ಪ್ರೆಸ್ ಬಿಲಾಸ್‌ಪುರ (ಛತ್ತೀಸ್ಗಢ)-ನಾಗ್ಪುರ (ಮಹಾರಾಷ್ಟ್ರ) ಮಾರ್ಗದಲ್ಲಿ ವಾರದಲ್ಲಿ ಆರು ದಿನಗಳು ಓಡುತ್ತವೆ. ಈ ರೈಲು ಬಿಲಾಸ್‌ಪುರದಿಂದ ಬೆಳಗ್ಗೆ 6.45ಕ್ಕೆ ಹೊರಟು ಮಧ್ಯಾಹ್ನ 12.15ಕ್ಕೆ ನಾಗಪುರ ತಲುಪಲಿದೆ.
ಅದೇ ರೀತಿ, ಮಹಾರಾಷ್ಟ್ರದ ನಾಗಪುರದಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ರಾತ್ರಿ 7.35 ಕ್ಕೆ ಬಿಲಾಸ್‌ಪುರ ತಲುಪಲಿದೆ. ಈ ರೈಲು ಸುಮಾರು ಐದೂವರೆ ಗಂಟೆಗಳಲ್ಲಿ ದೂರವನ್ನು ತಲುಪುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುವ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲು. ಇದು ಪ್ರಯಾಣದ ಸಮಯವನ್ನು 25 ಪ್ರತಿಶತದಿಂದ 45 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ.

ಟಿಕೆಟ್ ಪಡೆದು ಮೆಟ್ರೋ ಹತ್ತಿದ್ದ ಪ್ರಧಾನಿ
ಪ್ರಧಾನಿ ನರೇದ್ರ ಮೋದಿ ಭಾನುವಾರ ನಾಗ್ಪುರ ಮೆಟ್ರೋದ ಹಂತ-1ನ್ನು ಸಹ ಉದ್ಘಾಟಿಸಿದ್ದಾರೆ. ಖಾಪ್ರಿಯಿಂದ ಆಟೋಮೋಟಿವ್ ಸ್ಕ್ವೇರ್ (ಆರೆಂಜ್ ಲೈನ್) ಮತ್ತು ಪ್ರಜಾಪತಿ ನಗರದಿಂದ ಲೋಕಮಾನ್ಯ ನಗರ (ಆಕ್ವಾ ಲೈನ್) ವರೆಗೆ ಎರಡು ಮೆಟ್ರೋ ರೈಲುಗಳಿಗೆ ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಿದರು.
ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಗಪುರ ಮೆಟ್ರೋದ ಫ್ರೀಡಂ ಪಾರ್ಕ್ ನಿಲ್ದಾಣದಲ್ಲಿ ಪ್ರಧಾನಿ ತಮ್ಮ ಟಿಕೆಟ್ ಖರೀದಿಸಿ, ಫ್ರೀಡಂ ಪಾರ್ಕ್‌ನಿಂದ ಖಾಪ್ರಿವರೆಗೆ ನಾಗ್ಪುರ ಮೆಟ್ರೋದಲ್ಲಿ ಪ್ರಯಾಣ ಮಾಡಿದರು, ಜೊತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ನಾಗಪುರಕ್ಕೆ ಪ್ರಧಾನಿ ಭೇಟಿ ನೀಡಿರುವ ಕಾರಣ ವಿವಿಧ ಘಟಕಗಳ ಸುಮಾರು 4,000 ಪೊಲೀಸ್ ಸಿಬ್ಬಂದಿ ಭದ್ರತಾ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್‌ನ ಮೊದಲ ಹಂತದ ಉದ್ಘಾಟನೆ
ಪ್ರಧಾನಿ ಮೋದಿ ಹಿಂದೂ ಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್‌ನ ಮೊದಲ ಹಂತವನ್ನು ಉದ್ಘಾಟಿಸಿದರು. ಇದು 520 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಜೊತೆಗೆ ನಾಗಪುರ ಮತ್ತು ಶಿರಡಿಯನ್ನು ಸಂಪರ್ಕಿಸುತ್ತದೆ.
55,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇದು ಅಮರಾವತಿ, ಔರಂಗಾಬಾದ್ ಮತ್ತು ನಾಸಿಕ್ ಸೇರಿದಂತೆ ಮಹಾರಾಷ್ಟ್ರದ 10 ಜಿಲ್ಲೆಗಳ ಮೂಲಕ ಹಾದುಹೋಗುವ ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ.
ಸಮೃದ್ಧಿ ಮಹಾಮಾರ್ಗ್ ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ, ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್ ಮತ್ತು ಅಜಂತಾ ಎಲ್ಲೋರಾ ಗುಹೆಗಳು, ಶಿರಡಿ, ವೆರುಲ್, ಲೋನಾರ್ ಮುಂತಾದ ಪ್ರವಾಸಿ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಇದಲ್ಲದೇ, ನಾಗಪುರದಲ್ಲಿ ನಾಗ್ ನದಿಯ ಮಾಲಿನ್ಯ ತಗ್ಗಿಸುವ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆ (ಎನ್‌ಆರ್‌ಸಿಪಿ) ಅಡಿಯಲ್ಲಿ ಈ ಯೋಜನೆಯು 1925 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಡೆಯಲಿದೆ.












Click it and Unblock the Notifications