ಮೋದಿ ಆಡಳಿತದಲ್ಲಿ ಮುಸ್ಲಿಮರ ಏಳಿಗೆ ಸಾಧ್ಯವಿಲ್ಲವೇ?
ಲಕ್ನೋ, ಆ 28: ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಮುಸ್ಲಿಮರ ಏಳಿಗೆಯನ್ನು ಸಹಿಸುವುದಿಲ್ಲ ಎಂದು ಉತ್ತರಪ್ರದೇಶದ ಕ್ಯಾಬಿನೆಟ್ ಸಚಿವ ಅಜಂ ಖಾನ್ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಸದಾ ಒಂದಲ್ಲಾ ಒಂದು ವಿವಾದದಿಂದಲೇ ಖ್ಯಾ(ಕು)ತಿ ಪಡೆದಿರುವ ಅಜಂಖಾನ್ ಅದೆಷ್ಟೋ ಬಾರಿ ತನ್ನ ಬೇಕಾಬಿಟ್ಟಿ ಹೇಳಿಕೆಯಿಂದ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಪಕ್ಷದ ಪ್ರಮುಖರು ಮುಜುಗರಕ್ಕೀಡಾಗುವಂತೆ ಮಾಡಿದ್ದರು.
ಮೋದಿ ಮೇಲಿನ ಹೇಳಿಕೆಯ ಜೊತೆಗೆ ಅಜಂಖಾನ್, ಭಾರತದಲ್ಲಿ ಮುಸ್ಲಿಮರ ಜೀವನ ಅತ್ಯಂತ ದುಸ್ತರವಾಗಿದೆ ಎನ್ನುವ ಮೂಲಕ ಮತ್ತೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
ಉತ್ತರಪ್ರದೇಶದ ಗ್ರಾಮೀಣಾಭಿವೃದ್ದಿ ಸಚಿವರಾಗಿರುವ ಅಜಂಖಾನ್, ಕಳೆದ ಲೋಕಸಭಾ ಚುನಾವಣೆಯ ವೇಳೆ ಜಾರ್ಖಂಡ್ ನಲ್ಲಿ ಬಿಜೆಪಿಯ ಮುಖಂಡ ಗಿರಿರಾಜ್ ಸಿಂಗ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂದು ಗಿರಿರಾಜ್ ಸಿಂಗ್ ಚುನಾವಣೆಯ ಪ್ರಚಾರದ ವೇಳೆ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಅಜಂಖಾನ್ ಆಲಿಯಾಸ್ 'ಎಮ್ಮೆ ಸಚಿವ'ರ ಈ ರೀತಿಯ ಬೇಕಾಬಿಟ್ಟಿಯ ಕೆಲವೊಂದು ಸ್ಯಾಂಪಲ್, ಸ್ಲೈಡಿನಲ್ಲಿ...

ಮುಸ್ಲಿಮರು ಪಾಕಿಸ್ತಾನದಲ್ಲಿ ನೆಲೆಸುವುದು ಹೇಗೆ?
ತನ್ನ ಮಾತನ್ನು ಮುಂದುವರಿಸುತ್ತಾ ಅಜಂಖಾನ್, ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗುವುದು ಹೇಗೆ ಎಂದು ಮೋದಿ ಸರಕಾರ ಮೊದಲು ರೂಪುರೇಷೆಯನ್ನು ಸಿದ್ದಪಡಿಸಲಿ - ಅಜಂಖಾನ್.

ಮೋದಿ ಅಲೆ ಏನಾಯಿತು?
ಕೆಲವೇ ತಿಂಗಳ ಹಿಂದೆ ಇದ್ದ ಮೋದಿ ಅಲೆ ಏನಾಯಿತು? ಢೋಂಗಿ ಸರಕಾರದ ಬಣ್ಣವನ್ನು ಮೂರೇ ತಿಂಗಳಲ್ಲಿ ಬಯಲಾಗಿದ್ದಕ್ಕೆ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿ. ಮೋದಿಗೆ ಭಾರತದಲ್ಲಿನ ಮುಸ್ಲಿಮರು ಉದ್ದಾರವಾಗುವುದು ಬೇಕಾಗಿಲ್ಲ, ಅದು ಅವರ ಹಿಡನ್ ಅಜೆಂಡಾ - ಅಜಂಖಾನ್.

ಗಿರಿರಾಜ್ ಸಿಂಗ್
ಬಿಹಾರದಲ್ಲಿ ನಿತೀಶ್ ಸರಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಚುನಾವಣೆಯ ವೇಳೆ ಸಮಾಜದಲ್ಲಿ ವಿಷಬೀಜ ಬಿತ್ತುವ ಭಾಷಣಕ್ಕಾಗಿ ಅವರ ಮೇಲೆ ಮೂರು FIR ದಾಖಲಾಗಿತ್ತು.

ಕೊಲೆಗಡುಕರಿಗೆ ದೇಶದ ಆಡಳಿತ ನೀಡಬೇಡಿ
ದೇಶದ ಚುಕ್ಕಾಣಿಯನ್ನು 'ಕೊಲೆಗಡುಕರಿಗೆ' ನೀಡಬೇಡಿ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಮುಜಫರ್ ನಗರದ ಕೋಮುಗಲಭೆಯ ಕೊಲೆಗಡುಕರ ವಿರುದ್ಧ ಮುಯ್ಯಿ ತೀರಿಸಿಕೊಳ್ಳಿ - ಅಜಂಖಾನ್.

ದೇಶಕ್ಕೆ ಮುಸ್ಲಿಮರ ಕೊಡುಗೆ ಕಮ್ಮಿಯಿಲ್ಲ
ದೇಶಕ್ಕೆ ಮುಸ್ಲಿಮರ ಕೊಡುಗೆ ಕಮ್ಮಿಯಿಲ್ಲ. ಕಾರ್ಗಿಲ್ ಯುದ್ದದಲ್ಲಿ ಭಾರತಕ್ಕೆ ಜಯ ತಂದು ಕೊಟ್ಟವರು ಮುಸ್ಲಿಮರು. ಇದನ್ನು ಬಹುಸಂಖ್ಯಾತರು ಮರೆಯಬಾರದು - ಅಜಂಖಾನ್

ಮೋದಿಯನ್ನು ಚುಚ್ಚಿದ್ದ ಅಜಂಖಾನ್
ಜನತೆಯ ಮಾರಣಹೋಮ ನಡೆಸಿ ಕಳಂಕ ಹೊತ್ತಿಕೊಂಡಿರುವ ವ್ಯಕ್ತಿ ಎಂದಿಗೂ ಹಿಂದೂಸ್ತಾನದ ರಾಜ ಆಗಲು ಬಿಡಬಾರದು. ಈ ದೇಶದ ರಾಜನಾಗುವ ಕನಸು ಕಾಣುತ್ತಿರುವ ವ್ಯಕ್ತಿಯು ನನ್ನಂತಹ ನಾಯಕನ ಬಳಿ ಇರುವ ಎಮ್ಮೆಗಳನ್ನು ಹಿಂಪಡೆಯುವ ಸಣ್ಣತನದ ವಿಷಯಗಳನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಾನೆ - ಅಜಂಖಾನ್












Click it and Unblock the Notifications