Narendra Modi: ನಾನು ದೇವರಲ್ಲ ಮನುಷ್ಯ; ಗೋಧ್ರಾ ಗಲಭೆ ಬಗ್ಗೆ ಕನ್ನಡಿಗನ ಬಳಿ ಪ್ರಧಾನಿ ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ ಝೆರೋಧಾ ಸಹ ಸಂಸ್ಥಾಪಕ ಕರ್ನಾಟಕದ ನಿಖಿಲ್ ಕಾಮತ್ ಅವರ ಜೊತೆ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ಮಾತನಾಡಿದ್ದು, ಅವರು ಮಾತನಾಡಿದ ವಿಚಾರಗಳ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಗೋಧ್ರಾ ಗಲಭೆಯಿಂದ, ಅಮೆರಿಕ ವೀಸಾ ನಿರಾಕರಣೆವರೆಗೆ ಅನೇಕ ವಿಚಾರಗಳನ್ನು ಮೋದಿ ಹಂಚಿಕೊಂಡಿದ್ದಾರೆ.
2002ರಲ್ಲಿ ನಡೆದ ಗೋಧ್ರಾ ಗಲಭೆಗಳು ಮತ್ತು 2005ರಲ್ಲಿ ನಡೆದ ಅಮೆರಿಕ ವೀಸಾ ನಿರಾಕರಣೆ ಸೇರಿದಂತೆ ಅವರು ಎದುರಿಸಿದ ಪ್ರಮುಖ ವಿವಾದಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನೇನು ದೇವರಲ್ಲಿ, ನಾನು ಕೂಡ ಮನುಷ್ಯ ಸಹಜ ತಪ್ಪುಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಫೆಬ್ರವರಿ 24, 2002 ರಂದು ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೆ, ಫೆಬ್ರವರಿ 27ರಂದು ವಿಧಾನಸಭೆಗೆ ಹೋಗಿದ್ದೆ. ಗೋಧ್ರಾ ಗಲಭೆ ನಡೆದಾಗ ನಾನು ಶಾಸಕನಾಗಿ ಮೂರು ದಿನವಾಗಿತ್ತು. ಮೊದಲು ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ಬಂದವು, ಬಳಿಕ ಅನೇಕ ಸಾವು ನೋವಿನ ವರದಿಗಳು ಬರತೊಡಗಿದವು. ನಾನು ವಿಧಾನಸಭೆಯಲ್ಲಿದ್ದೆ, ನನಗೆ ಆತಂಕವಿತ್ತು, ಸದನ ಮುಗಿದ ಬಳಿಕ ಹೊರಬಂದೆ ನಾನು ತಕ್ಷಣ ಗೋಧ್ರಾಕ್ಕೆ ಹೋಗಬೇಕು ಎಂದು ಹೇಳಿದೆ. ಒಂದೇ ಒಂದು ಹೆಲಿಕಾಪ್ಟರ್ ಇತ್ತು, ಅದು ಒಂದೇ ಎಂಜಿನ್ ಹೆಲಿಕಾಪ್ಟರ್ ಆಗಿದ್ದರಿಂದ ಅದರಲ್ಲಿ ವಿಐಪಿಯನ್ನು ಕರೆದೊಯ್ಯಲು ಅನುಮತಿ ಇಲ್ಲ ಎಂದರು. ನಾನು ವಾದ ಮಾಡಿದೆ, ಎಲ್ಲದಕ್ಕೂ ನಾನೇ ಹೊಣೆ ಎಂದೆ ಬಳಿಕ ಹೆಲಿಕಾಪ್ಟರ್ ನಲ್ಲಿ ಗೋಧ್ರಾಗೆ ಪ್ರಯಾಣಿಸಿದೆ ಎಂದರು.
ಗೋಧ್ರಾಗೆ ಹೋದ ಬಳಿಕ ಮೃತ ದೇಹಗಳ ನೋವಿನ ದೃಶ್ಯವನ್ನು ನೋಡಿದ್ದೇನೆ, ಎಲ್ಲವನ್ನೂ ಅನುಭವಿಸಿದ್ದೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದರಿಂದ ನನ್ನ ಭಾವನೆಗಳನ್ನು ನಿಯಂತ್ರಿಸಲು ಎಲ್ಲವನ್ನೂ ಮಾಡಿದೆ ಎಂದು ನಿಖಿಲ್ ಕಾಮತ್ ಅವರಿಗೆ ಹೇಳಿದರು.
ಅಮೆರಿಕ ವೀಸಾ ನಿರಾಕರಣೆ ಬಗ್ಗೆ...
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಮೆರಿಕ ಅವರಿಗೆ ವೀಸಾ ನಿರಾಕರಿಸಿದ್ದನ್ನು ನೆನಪಿಸಿಕೊಂಡರು. ಅಮೆರಿಕ ಸರ್ಕಾರ ನನಗೆ ವೀಸಾ ನೀಡಲು ನಿರಾಕರಿಸಿದಾಗ ನಾನಿನ್ನೂ ಶಾಸಕನಾಗಿದ್ದೆ, ಒಬ್ಬ ವ್ಯಕ್ತಿಯಾಗಿ ಅಮೆರಿಕೆ ದೇಶಕ್ಕೆ ಹೋಗುವುದು ದೊಡ್ಡ ವಿಚಾರವಲ್ಲ, ಈ ಹಿಂದೆಯೂ ನಾನು ಅಲ್ಲಿಗೆ ಭೇಟಿ ನೀಡಿದ್ದೆ. ಭಾರತದ ಬಗ್ಗೆ ಅಗೌರವದಿಂದ ನೋಡುವುದನ್ನು ನನಗೆ ಸಹಿಸಲು ಆಗಲಿಲ್ಲ. ಮುಂದೊಂದು ದಿನ ಭಾರತದ ವೀಸಾ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದು ಹೇಳಿದೆ 2005ರಲ್ಲಿ ನಾನು ಅದನ್ನು ಹೇಳಿದ್ದೆ ಈಗ 2025ರಲ್ಲಿ ಭಾರತಕ್ಕೆ ಆ ಸಮಯ ಬಂದಿದೆ ಎಂದರು.
ಜಾಗತಿಕ ವ್ಯವಹಾರಗಳಲ್ಲಿ ಭಾರತ ದ್ವಂದ್ವ ನೀತಿಯನ್ನು ಅನುಸರಿಸದ ಕಾರಣ ಜಗತ್ತಿನ ದೇಶಗಳು ಭಾರತವನ್ನು ನಂಬುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಏನು ಹೇಳಿದರೂ ಅದಕ್ಕೆ ಬದ್ದರಾಗಿರುತ್ತೇವೆ. ನಾವು ತಟಸ್ಥರಲ್ಲ ಎಂದು ಪದೇ ಪದೇ ಹೇಳಿದ್ದೇನೆ. ನಾನು ಶಾಂತಿಯ ಪರವಾಗಿರುತ್ತೇನೆ. ಅದಕ್ಕಾಗಿ ನಾನು ನನ್ನ ಪ್ರಯತ್ನ ಮಾಡುತ್ತೇನೆ ರಷ್ಯಾ, ಉಕ್ರೇನ್, ಇರಾನ್, ಪ್ಯಾಲೆಸ್ಟೈನ್ ಮತ್ತು ಇಸ್ರೇಲ್‌ಗೆ ನಾನು ಇದನ್ನೇ ಹೇಳುತ್ತೇನೆ ಎಂದರು.












Click it and Unblock the Notifications