ಹೊಸ ಸಂಸತ್ ಭವನ ಉದ್ಘಾಟನೆ; ಪೂಜೆಯಲ್ಲಿ ಮೋದಿ ಭಾಗಿ
ನವದೆಹಲಿ, ಮೇ 28; ಭಾರತದ ನೂತನ ಸಂಸತ್ ಭವನ ಇಂದು ಉದ್ಘಾಟನೆಯಾಗುತ್ತಿದೆ. ಇದರ ಪ್ರಾಥಮಿಕ ಹಂತವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.
ಭಾನುವಾರ ಬೆಳಗ್ಗೆ 7.15ಕ್ಕೆ ನೂತನ ಸಂಸತ್ ಭವನದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನದ ಕಟ್ಟಡಕ್ಕೆ ಆಗಮಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು.

1200 ಕೋಟಿ ರೂ. ವೆಚ್ಚದಲ್ಲಿ 39.6 ಮೀಟರ್ ಎತ್ತರದಲ್ಲಿ ನಾಲ್ಕು ಅಂತಸ್ತಿನ ನೂತನ ಸಂಸತ್ ಭವನ ನಿರ್ಮಾಣ ಮಾಡಲಾಗಿದೆ. 1272 ಆಸನ ಸಾಮರ್ಥ್ಯವನ್ನು ಇದು ಹೊಂದಿದೆ. ಲೋಕಸಭೆಯನ್ನು ಗರಿಬಿಚ್ಚಿರುವ ನವಿಲಿನ ವಿನ್ಯಾಸದಲ್ಲಿ ನಿರ್ಮಾಣ ಮಾಡಲಾಗಿದೆ.
ಎರಡು ಹಂತದಲ್ಲಿ ಉದ್ಘಾಟನೆ; ಭಾನುವಾರ ನೂತನ ಸಂಸತ್ ಭವನದ ಉದ್ಘಾಟನೆ ಒಟ್ಟು 2 ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಧಾರ್ಮಿಕ ಕಾರ್ಯಕ್ರಮ, ಸೆಂಗೋಲ್ ಪ್ರತಿಷ್ಠಾಪನೆ ನಡೆಯಲಿದೆ. ಎರಡನೇ ಹಂತದಲ್ಲಿ ರಾಜ್ಯಸಭೆ ಸಭಾಪತಿ, ಲೋಕಸಭೆ ಸ್ಪೀಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಷಣ ಇರಲಿದೆ.

ಹೊಸ ಸಂಸತ್ ಭವನದಲ್ಲಿ ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ನಡೆಸುತ್ತಿದ್ದಾರೆ. ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ, ಎಸ್. ಜೈಶಂಕರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಸ್ವಾಮೀಜಿಗಳ ನಿಯೋಗ ಚಿನ್ನದ 'ಸೆಂಗೋಲ್' ಅನ್ನು ತಮಿಳುನಾಡಿನ ಸ್ವಾಮೀಜಿಗಳ ವಿಶೇಷ ನಿಯೋಗ ಪ್ರಧಾನಿ ನರೇಂದ್ರ ಮೋದಿಗೆ ಶನಿವಾರ ರಾತ್ರಿ ಹಸ್ತಾಂತರ ಮಾಡಿತ್ತು. ಭಾನುವಾರ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ ಲೋಕಸಭೆ ಸ್ಪೀಕರ್ ಸೀಟಿನ ಪಕ್ಕದಲ್ಲಿ ಅದನ್ನು ಪ್ರತಿಷ್ಠಾಪನೆ ಮಾಡಿದರು.
New Parliament inauguration: PM Modi installs sacred 'Sengol' in Lok Sabha chamber
— ANI Digital (@ani_digital) May 28, 2023
Read @ANI Story | https://t.co/1qyt8EUbOv#PMModi #NewParliamentBuilding #NewParliament pic.twitter.com/N48gcoi9yp
ನರೇಂದ್ರ ಮೋದಿ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರಿಗೆ ಸನ್ಮಾನ ಮಾಡಲಿದ್ದಾರೆ ಸುಮಾರು 6 ಸಾವಿರ ಕಾರ್ಮಿಕರು ಈ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಮೋದಿ ಶಂಕುಸ್ಥಾಪನೆ; ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ 2020ರ ಡಿಸೆಂಬರ್‌ನಲ್ಲಿ ಶಂಕು ಸ್ಥಾಪನೆ ಮಾಡಿದ್ದರು. "ಹೊಸ ಸಂಸತ್ ಭವನ ಸ್ವಾವಲಂಬಿ ಭಾರತದ ಒಂದು ಆಂತರಿಕ ಭಾಗವಾಗಿದೆ ಮತ್ತು ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಜನರನ್ನು ಸಂಕೇತಿಸುವ ಸಂಸತ್ತನ್ನು ನಿರ್ಮಿಸಲು ದೊರೆತ ಸದಾವಕಾಶವಾಗಿದೆ" ಎಂದು ಮೋದಿ ಹೇಳಿದ್ದರು.
"ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ, ಭಾರತೀಯತೆಯ ಕಲ್ಪನೆಯನ್ನು ತುಂಬಿದ ಇಂದು ಒಂದು ಮೈಲಿಗಲ್ಲಾಗಿದೆ. ಭಾರತದ ಸಂಸತ್ ಭವನದ ನಿರ್ಮಾಣದ ಪ್ರಾರಂಭ ನಮ್ಮ ಪ್ರಜಾಪ್ರಭುತ್ವದ ಸಂಪ್ರದಾಯಗಳಲ್ಲಿ ಅತಿ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಭಾರತ ತನ್ನ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವುದನ್ನು ಈ ಹೊಸ ಸಂಸತ್ ಭವನದಿಂದ ನೋಡುವುದಕ್ಕಿಂತ ಅತಿ ಸುಂದರವಾದದ್ದು ಮತ್ತೊಂದಿಲ್ಲ" ಎಂದು ತಿಳಿಸಿದ್ದರು.
ಈಗ ನರೇಂದ್ರ ಮೋದಿ ಅವರ ಕನಸಿನಂತೆ ಹೊಸ ಸಂಸತ್ ಭವನ ಕಟ್ಟಡ ನಿರ್ಮಾಣವಾಗಿದೆ. ಶನಿವಾರ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ,"ನೂತನ ಭವನವು ಪ್ರಜಾಪ್ರಭುತ್ವದ ದೇವಾಲಯ ಇದ್ದಂತೆ. ಇದು ಭಾರತದ ಅಭಿವೃದ್ಧಿ ಪಥವನ್ನು ಇನ್ನಷ್ಟು ಬಲಗೊಳಿಸುವುದು ಮತ್ತು ದೇಶದ ಕೋಟಿ ಕೋಟಿ ಜನರನ್ನು ಸಶಕ್ತಗೊಳಿಸುವುದನ್ನು ಮುಂದುವರೆಸುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications