Narendra Modi: ರಾಷ್ಟ್ರಪತಿ ಬಗ್ಗೆ ಹೇಳಿಕೆ; ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ನೀಡಿದ್ದ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸೋನಿಯಾ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ಟೀಕಿಸಿದ್ದು, ಎಲ್ಲಾ ಬಿಜೆಪಿ ನಾಯಕರು ಸೋನಿಯಾ ಗಾಂಧಿ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಸೋನಿಯಾ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡಿದ್ದು ರಾಜಮನೆತನದವರು ಬುಡಕಟ್ಟು ಜನಾಂಗದ ಮಗಳನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ರಾಜಕೀಯ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದ್ರೌಪದಿ ಮುರ್ಮು ಅವರು ಬುಡಕಟ್ಟು ಕುಟುಂಬದಿಂದ ಬಂದವರು. ಅವರ ಮಾತೃಭಾಷೆ ಹಿಂದಿ ಅಲ್ಲ, ಒಡಿಯಾ. ಅವರು ಸಂಸತ್ತನ್ನು ಉದ್ದೇಶಿಸಿ ಅದ್ಭುತವಾದ ಭಾಷಣ ಮಾಡಿದರು. ಆದರೆ ಕಾಂಗ್ರೆಸ್‌ನ ರಾಜಮನೆತನದವರು ಅವರನ್ನು ಅವಮಾನಿಸುತ್ತಿದ್ದಾರೆ ಎಂದರು.

ಬುಡಕಟ್ಟು ಜನಾಂಗಕ್ಕೆ ಸೇರಿದ ಮಗಳು ನೀರಸ ಭಾಷಣ ಮಾಡಿದರು ಎಂದು ರಾಜಮನೆತನದ ಸದಸ್ಯರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ರಾಷ್ಟ್ರಪತಿಯನ್ನು ಕಳಪೆ ವಿಚಾರ ಎಂದು ಕರೆದಿದ್ದಾರೆ. ಬುಡಕಟ್ಟು ಮಗಳ ಭಾಷಣ ಅವರಿಗೆ ನೀರಸ ಎನಿಸುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರ ಈ ಹೇಳಿಕೆಯಿಂದ ದೇಶದ 10 ಕೋಟಿ ಬುಡಕಟ್ಟು ಸಹೋದರ, ಸಹೋದರಿಯರಿಗೆ ಅವಮಾನ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ಬಡವರಿಗೂ ಮಾಡಿದ ಅವಮಾನ, ಭಾರತದ ಜನರನ್ನು ನಿಂದಿಸುವುದು, ವಿದೇಶದಲ್ಲಿ ಭಾರತದ ವಿರುದ್ಧ ದೂರುವುದು ಮತ್ತು ನಗರ ನಕ್ಸಲರನ್ನು ಹೊಗಳುವುದನ್ನು ಇಷ್ಟಪಡುತ್ತಾರೆ ಎಂದು ಹೇಳಿದರು.
ದೆಹಲಿಯ ಜನತೆ ತುಂಬಾ ಜಾಗರೂಕರಾಗಿರಬೇಕು, ಸೋಲುವ ಭಯದಿಂದ ಇಬ್ಬರು ಅಹಂಕಾರಿಗಳು ಒಂದಾಗಿದ್ದಾರೆ ಎಂದು ಹೇಳಿದ್ದು, ಉತ್ತಮ ಆಡಳಿತಕ್ಕಾಗಿ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಹೇಳಿದ್ದೇನು?
ಬಜೆಟ್‌ಗೆ ಮುನ್ನಾದಿನದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಜಂಟಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿ, "ರಾಷ್ಟ್ರಪತಿಗಳು ಭಾಷಣದ ಕೊನೆಯಲ್ಲಿ ತುಂಬಾ ದಣಿದಿದ್ದರು, ಅವರು ಮಾತನಾಡಲು ಕಷ್ಟಪಡುತ್ತಿದ್ದರು." ಎಂದು ಹೇಳಿದ್ದಾರೆ.
ಜೆಪಿ ನಡ್ಡಾ ವಾಗ್ದಾಳಿ
ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬಡವ ಎನ್ನುವ ಪದವನ್ನು ಬಳಸುವ ಮೂಲಕ, ಕಾಂಗ್ರೆಸ್ ಪಕ್ಷದ ನಾಯಕರ ಬಡವರ ವಿರೋಧಿ ಮತ್ತು ಬುಡಕಟ್ಟು ವಿರೋಧಿ ಸ್ವಭಾವವನ್ನು ತೋರಿಸಿದ್ದಾರೆ ಎಂದರು . ಸೋನಿಯಾ ಗಾಂಧಿ ಹೇಳಿಕೆಯನ್ನು ರಾಷ್ಟ್ರಪತಿ ಭವನ ಕೂಡ ಟೀಕಿಸಿದ್ದು, ಅದು ಕೆಟ್ಟ ಅಭಿರುಚಿ ಎಂದು ಹೇಳಿದೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಹುದ್ದೆಗೆ ಅವಮಾನ ಮಾಡುವಂತ ಹೇಳಿಕೆ ನೀಡಿದ್ದಾರೆ ಎಂದು ಹೇಳಿದೆ.












Click it and Unblock the Notifications