ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆ ತಲೆಕೆಡಿಸಿಕೊಂಡಿರುವ ಪ್ರಧಾನಿ ಮೋದಿ
ಐಜ್ವಾಲ್, ಅಕ್ಟೋಬರ್ 16: ಜನಾಂಗೀಯ ಸಂಘರ್ಷದಿಂದ ನಲುಗುತ್ತಿರುವ ಮಣಿಪುರಕ್ಕಿಂತ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಪ್ರಧಾನಿ ಮೋದಿ ತಲೆಕೆಡಿಸಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಮಿಜೋರಾಂನ ಐಜ್ವಾಲ್ ನಗರದ ರಸ್ತೆಗಳಲ್ಲಿ 2 ಕಿಮೀ ಉದ್ದದ ಪಾದಯಾತ್ರೆ ಕೈಗೊಂಡ ನಂತರ ರಾಜಭವನದ ಬಳಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ನೆರೆಯ ಮಣಿಪುರ ಇನ್ನು ಮುಂದೆ ಏಕ ರಾಜ್ಯವಾಗಿ ಉಳಿದಿರುವುದಿಲ್ಲ. ಅದು ಜನಾಂಗೀಯ ಆಧಾರದ ಮೇಲೆ ಎರಡು ರಾಜ್ಯಗಳಾಗಿ ವಿಭಜನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಮುಂಬರುವ ವಿಧಾನಸಭೆ ಚುನಾವಣೆಗೆ ಪ್ರಚಾರ ಕೈಗೊಂಡಿರುವ ಅವರು ಮಿಜೋರಾಂಗೆ ಎರಡು ದಿನಗಳ ಭೇಟಿಯನ್ನು ನೀಡಿದ್ದಾರೆ.
1986ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈಗ ದಂಗೆ ಪೀಡಿತ ಮಿಜೋರಾಂನಲ್ಲಿ ಶಾಂತಿ ನೆಲೆಸಿದೆ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.
'ಪ್ರಧಾನಿ ಮತ್ತು ಭಾರತ ಸರ್ಕಾರವು ಇಸ್ರೇಲ್‌ನಲ್ಲಿ (ಇಸ್ರೇಲ್-ಹಮಾಸ್ ಸಂಘರ್ಷ) ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಅಲ್ಲಿ ಜನರು ಹತ್ಯೆಗೀಡಾದರು. ಮಹಿಳೆಯರಿಗೆ ಕಿರುಕುಳ ನೀಡಲಾಗಿದೆ ಮತ್ತು ಶಿಶುಗಳು ಕೊಲ್ಲಲ್ಪಟ್ಟವು' ಎಂದು ಅವರು ಆರೋಪಿಸಿದರು.

'ಕೆಲವು ತಿಂಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ. ಮಣಿಪುರದ ಕಲ್ಪನೆಯನ್ನು ಬಿಜೆಪಿ ನಾಶ ಮಾಡಿದೆ. ಇದು ಇನ್ನು ಮುಂದೆ ಒಂದು ರಾಜ್ಯವಲ್ಲ. ಆದರೆ ಎರಡು ರಾಜ್ಯಗಳಾಗಿ ವಿಭಜನೆಯಾಗಿದೆ' ಎಂದು ಅವರು ಹೇಳಿದರು.
'ಪರಸ್ಪರ ಗೌರವಿಸುವ ಭಾರತದ ಕಲ್ಪನೆಯು ಸಹಿಷ್ಣುವಾಗಿದೆ. ಇತರ ವಿಚಾರಗಳು, ಧರ್ಮಗಳು ಮತ್ತು ಭಾಷೆಗಳಿಂದ ನಾವು ಕಲಿಯುತ್ತೇವೆ. ಒಟ್ಟಾರೆಯಾಗಿ ಭಾರತವು ತನ್ನನ್ನು ತಾನು ಪ್ರೀತಿಸುತ್ತದೆ. ಆದರೆ, ಈ ಪರಿಕಲ್ಪನೆ ಹೊಂದಿರುವ ಭಾರತವು ಬಿಜೆಪಿಯಿಂದ ತೀವ್ರ ಆಕ್ರಮಣಕ್ಕೆ ಒಳಗಾಗಿದೆ' ಎಂದು ಹೇಳಿದರು.
'ಅವರು (ಬಿಜೆಪಿ) ವಿವಿಧ ಸಮುದಾಯಗಳು, ಧರ್ಮಗಳು ಮತ್ತು ಭಾಷೆಗಳ ಮೇಲೆ ದಾಳಿ ಮಾಡುತ್ತಾರೆ. ಅವರು ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಾರೆ. ಅವರು ದುರಹಂಕಾರವನ್ನು ಹರಡುತ್ತಾರೆ. ಅವರಿಗೆ ತಿಳುವಳಿಕೆಯ ಕೊರತೆ ಇದೆ. ಇದು ಭಾರತದ ಕಲ್ಪನೆಗೆ ಸಂಪೂರ್ಣವಾಗಿ ವಿರುದ್ಧವಾಗಿದೆ' ಎಂದು ಅವರು ತಿಳಿಸಿದರು.
40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7 ರಂದು ಚುನಾವಣೆ ನಿಗದಿಯಾಗಿದೆ.
ಮೇ 3ರಂದು ಮಣಿಪುರದಲ್ಲಿ ಸಂಘರ್ಷ ಶುರುವಾಯಿತು. ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಗಲಭೆಯಲ್ಲಿ ಸುಮಾರು 185 ಜನರು ಹತ್ಯೆಗೀಡಾಗಿದ್ದಾರೆ. ಸಾವಿರಾರು ಜನರು ಮನೆಗಳನ್ನು ತೊರೆದಿದ್ದಾರೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವಾಗಿರುವ ಕುರಿತು ವರದಿಯಾಗಿದೆ.












Click it and Unblock the Notifications