Narendra Modi: ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಭೇಟಿ ಮಾಡಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ಮಹಾಕುಂಭಮೇಳದಲ್ಲಿ ಸಂಗ್ರಹಿಸಿದ್ದ ಗಂಗಾ ಜಲವನ್ನು ತುಳಸಿ ಗಬ್ಬಾರ್ಡ್ ಅವರಿಗೆ ನೀಡಿದರು. ಈ ಭೇಟಿಯನ್ನು ಎರಡೂ ರಾಷ್ಟ್ರಗಳು ಭಯೋತ್ಪಾದನೆ ವಿರುದ್ಧದ ದನಿ ಎತ್ತಲು ಬಳಸಿಕೊಂಡಿವೆ.
ಪ್ರಧಾನಿ ಮೋದಿ ಭೇಟಿಗೆ ಮೊದಲು ತುಳಸಿ ಗಬ್ಬಾರ್ಡ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ ನಿಷೇಧಿತ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ಅಮೆರಿಕದ ನೆಲದಲ್ಲಿ ನಡೆಸುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಮಾತನಾಡಲು ಕೇಂದ್ರ ಸರ್ಕಾರ ಬಳಸಿಕೊಂಡಿದೆ.

ತುಳಸಿ ಗಬ್ಬಾರ್ಡ್ ಭೇಟಿಯಾದ ಫೋಟೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಗಬ್ಬಾರ್ಡ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷಪಡುವುದಾಗಿ ಹೇಳಿದರು. ಅಮೆರಿಕ ಮತ್ತು ಭಾರತ ಎರಡೂ ಭಯೋತ್ಪಾದನೆಯನ್ನು ಎದುರಿಸಲು ಮತ್ತು ಕಡಲ ಮತ್ತು ಸೈಬರ್ ಭದ್ರತಾ ಸಹಕಾರವನ್ನು ಹೆಚ್ಚಿಸಲು ಬದ್ಧವಾಗಿವೆ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಹಾ ಕುಂಭಮೇಳದ ಬಗ್ಗೆ ಕೂಡ ಮಾತನಾಡಿದ್ದು, ಫೆಬ್ರವರಿ 26ರಂದು ಮುಕ್ತಾಯವಾದ ಮಹಾಕುಂಭಮೇಳದಲ್ಲಿ 66 ಕೋಟಿಗೂ ಹೆಚ್ಚು ಜನ ಪಾಲ್ಗೊಂಡಿದ್ದು, ಇದು ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದೆ ಎಂದು ತುಳಸಿ ಗಬ್ಬಾರ್ಡ್ ಅವರಿಗೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿಗೆ ತುಳಸಿ ಮಾಲೆ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ತುಳಸಿ ಗಬ್ಬಾರ್ಡ್ ಅವರು ತುಳಸಿ ಮಾಲೆಯನ್ನು ಉಡುಗೊರೆಯಾಗಿ ನೀಡಿದರು. ತುಳಸಿ ಮಾಲೆಗೆ ಹಿಂದೂ ಧರ್ಮದಲ್ಲಿ ಅದರದ್ದೇ ವಿಶೇಷ ಸ್ಥಾನಮಾನವಿದೆ. ಅದರಲ್ಲೂ ಕೃಷ್ಣನ ಅನುಯಾಯಿಗಳು ತುಳಸಿ ಮಾಲೆ ವಿಶೇಷವಾಗಿದೆ. ವಿಷ್ಣು ಪ್ರಿಯ ಎಂದು ಕರೆಯಲ್ಪಡುವ ಶ್ರೀಕೃಷ್ಣನ ಭಕ್ತರು ತಮ್ಮ ಭಕ್ತಿಯ ಸಂಕೇತವಾಗಿ ತುಳಸಿ ಮಣಿಗಳನ್ನು ಧರಿಸುತ್ತಾರೆ. ಈ ತುಳಸಿ ಮಣಿಗಳು ನಕಾರಾತ್ಮಕ ಶಕ್ತಿಗಳು ಮತ್ತು ಕೆಟ್ಟ ಕನಸುಗಳಿಂದ ರಕ್ಷಣೆ ನೀಡುತ್ತವೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ತುಳಸಿ ಗಬ್ಬಾರ್ಡ್ ಹಿಂದೂ ಧರ್ಮವನ್ನು ಆಚರಣೆ ಮಾಡುತ್ತೇನೆ ಎಂದು ಈ ಹಿಂದೆ ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದರು. ಒಳ್ಳೆಯ ಮತ್ತು ಕಷ್ಟದ ಸಮಯದಲ್ಲಿ ಭಗವದ್ಗೀತೆಯಲ್ಲಿ ಶ್ರೀಕೃಷ್ಣನ ಬೋಧನೆಗಳಿಂದ ಶಕ್ತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತೇನೆ ಎಂದು ಅವರು ಹೇಳಿದ್ದರು.
ತುಳಸಿ ಗಬ್ಬಾರ್ಡ್ ಹಲವು ದೇಶಗಳ ಪ್ರವಾಸ ಕೈಗೊಂಡಿದ್ದು ಭಾರತದಲ್ಲಿ ಎರಡೂವರೆ ದಿನ ಇರಲಿದ್ದಾರೆ. ಭಾನುವಾರ ಮುಂಜಾನೆ ದೆಹಲಿಗೆ ಆಗಮಿಸಿದ ಅವರು, ಗುಪ್ತಚರ ಸಹಕಾರ, ಸೈಬರ್ ಭದ್ರತೆ ಮತ್ತು ರಕ್ಷಣಾ ಸಂಬಂಧಗಳ ಕುರಿತು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್‌ಗೆ ಭೇಟಿ ನೀಡಿದ ಬಳಿಕ ತುಳಸಿ ಗಬ್ಬಾರ್ಡ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಅಮೆರಿಕ ಭೇಟಿ ವೇಳೆ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಭಾರತ-ಯುಎಸ್ ಸಂಬಂಧಗಳ ಬಲವಾದ ಬೆಂಬಲಿಗರು ಎಂದು ಹೊಗಳಿದ್ದರು.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಭದ್ರತಾ ಸಹಕಾರವನ್ನು ಹೆಚ್ಚಿಸುವತ್ತ ಸಭೆಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಅವರು ಸುಮಾರು 20 ದೇಶಗಳ ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸೇರಿ ಚರ್ಚೆ ನಡೆಸಿದರು. ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯವು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು 2022 ರಿಂದ ರೈಸಿನಾ ಸಂವಾದದ ಜೊತೆಗೆ ನಡೆಸಲಾಗುತ್ತಿದೆ.
ಭಯೋತ್ಪಾದನೆ ಜಾಗತಿಕ ಶತ್ರು
ತುಳಸಿ ಗಬ್ಬಾರ್ಡ್ ಇಸ್ಲಾಮಿಕ್ ಭಯೋತ್ಪಾದನೆಯನ್ನು ಜಾಗತಿಕ ಬೆದರಿಕೆ ಎಂದು ಹೇಳಿದ್ದಾರೆ. ಇದು ಭಾರತ, ಅಮೆರಿಕೆ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು. ಭಾರತದ ಮೇಲೆ ಪಾಕಿಸ್ತಾನದ ಭಯೋತ್ಪಾದಕ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಇದೊಂದು ಗಂಭೀರವಾದ ಸಮಸ್ಯೆ ಎಂದರು, ಭಯೋತ್ಪಾದನೆಯನ್ನು ಎದುರಿಸಲು ಅಮೆರಿಕ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಸೋಮವಾರ ಬೆಳಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾದ ಗಬ್ಬಾರ್ಡ್, ಭಯೋತ್ಪಾದನೆಯನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಂಟಿ ಪ್ರಯತ್ನ ಮಾಡುತ್ತಿರುವುದನ್ನು ಶ್ಲಾಘಿಸಿದರು.
ಪಾಕಿಸ್ತಾನ ಪದೇ ಪದೇ ಭಾರತದ ಮೇಲೆ ಭಯೋತ್ಪಾದಕ ದಾಳಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಉಗ್ರವಾದವನ್ನು ಎದುರಿಸಲು ಅಮೆರಿಕ ಬದ್ದವಾಗಿದೆ ಎಂದು ಒತ್ತಿ ಹೇಳಿದರು. ಉಗ್ರಗಾಮಿ ಸಂಘಟನೆಗಳು ಭಾರತ ಮತ್ತು ಬಾಂಗ್ಲಾದೇಶದ ಮೇಲೆ ಮಾತ್ರವಲ್ಲದೆ ಸಿರಿಯಾ, ಇಸ್ರೇಲ್ ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೂ ಪರಿಣಾಮ ಬೀರುತ್ತಿವೆ. ಭಾರತ ಮತ್ತು ಅಮೆರಿಕ ಈ ಸಂಘಟನೆಗಳನ್ನು ಬೇರು ಸಮೇತ ಕಿತ್ತುಹಾಕುವ ಗುರಿಯನ್ನು ಹೊಂದಿವೆ ಎಂದು ಹೇಳಿದರು.
ಭಾರತ ಮತ್ತು ಅಮೆರಿಕ ಎರಡೂ ದೇಶಗಳು ಗುಪ್ತಚರ ಹಂಚಿಕೆ ಮತ್ತು ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಹೆಚ್ಚಿಸುವ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭದ್ರತಾ ಕಾಳಜಿ ನಡುವೆ ಈ ಚರ್ಚೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ರಾಜನಾಥ್ ಸಿಂಗ್ ಭೇಟಿಯಾದ ಗಬ್ಬಾರ್ಡ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕೂಡ ಗಬ್ಬಾರ್ಡ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪು ಸಿಖ್ಸ್ ಫಾರ್ ಜಸ್ಟೀಸ್ (SFJ) ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜನಾಥ್ ಸಿಂಗ್ ಅದನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಣೆ ಮಾಡುವಂತೆ ಯುಎಸ್ ಸರ್ಕಾರಕ್ಕೆ ಒತ್ತಾಯಿಸಿದರು.
ರೈಸಿನಾ ಹಿಲ್ಸ್‌ನಲ್ಲಿರುವ ರಾಜನಾಥ್ ಸಿಂಗ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ರಾಜನಾಥ್ ಸಿಂಗ್ ಅವರು ಎಸ್‌ಎಫ್‌ಜೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ನೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಮತ್ತು ಬಬ್ಬರ್ ಖಲ್ಸಾ ಉಗ್ರಗಾಮಿ ಗುಂಪಿನೊಂದಿಗೆ ಕೈಜೋಡಿಸಿರುವ ಬಗ್ಗೆ ತುಳಸಿ ಗಬ್ಬಾರ್ಡ್ ಅವರಿಗೆ ಮಾಹಿತಿ ನೀಡಿದರು.
ಎಸ್‌ಎಫ್‌ಜೆ ಅಮೆರಿಕದಲ್ಲಿ ವಿವಿಧ ಹಿಂದೂ ಧಾರ್ಮಿಕ ರಚನೆಗಳನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ರಾಜನಾಥ್ ಸಿಂಗ್ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ಅಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು ಅಮೆರಿಕ ಸರ್ಕಾರಕ್ಕೆ ಒತ್ತಾಯಿಸಿದರು.












Click it and Unblock the Notifications