Narendra Modi: ಪ್ರಧಾನಿ ಮೋದಿ ಎಷ್ಟು ಕೋಟಿಯ ಒಡೆಯ ಗೊತ್ತಾ? ಇವರ ಹೆಸರಿನಲ್ಲಿ ಏನೆಲ್ಲಾ ಆಸ್ತಿ ಇವೆ ಇಲ್ಲಿದೆ ಕಂಪ್ಲೀಟ್ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದಾರೆ. ಸತತ ಮೂರನೇ ಬಾರಿಗೆ ಈ ಕ್ಷೇತ್ರದಿಂದ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಈಗಾಗಲೇ ಸ್ಪರ್ಧಿಸಿರುವ ಎರಡೂ ಚುನಾವಣೆಗಳಲ್ಲಿ ಗೆಲುವು ದಾಖಲಿಸಿರುವ ಮೋದಿ, ಹ್ಯಾಟ್ರಿಕ್ ಗೆಲುವಿನ ಕನಸಿನೊಂದಿಗೆ ನಾಮ ಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸುವ ವೇಳೆ ಎನ್‌ಡಿಎ ಮೈತ್ರಿ ಕೂಟದ ಪ್ರಮುಖ ನಾಯಕರು, ಕೇಂದ್ರದ ಸಚಿವರು ಹಾಗೂ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಥ್ ನೀಡಿದರು. ಈ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಅನ್ನು ಪರಿಶೀಲಿಸಿದ ನಂತರ, ಪ್ರಧಾನಿಯವರ ಒಟ್ಟು ಆಸ್ತಿ ಎಷ್ಟು ಎಂಬುದು ಬಹಿರಂಗವಾಗಿದೆ.

ಒಟ್ಟು ಸಂಪತ್ತು ಎಷ್ಟು?
ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 9 ಲಕ್ಷ 12 ಸಾವಿರ ರೂ ಹೂಡಿಕೆ ಮಾಡಿದ್ದಾರೆ. ಅಲ್ಲದೆ ಇವರ ಬಳಿ ನಾಲ್ಕು ಚಿನ್ನದ ಉಂಗುರಗಳಿವೆ. ಈ ಉಂಗುರಗಳ ತೂಕ 45 ಗ್ರಾಂ ಆಗಿದ್ದು, 2 ಲಕ್ಷ 67 ಸಾವಿರದ 750 ರೂಪಾಯಿಯ ಮೌಲ್ಯವನ್ನು ಹೊಂದಿವೆ. ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ಪ್ರಕಾರ ಮೋದಿ ಅವರ ಬಳಿ ಮನೆ ಅಥವಾ ಕಾರ್, ಜಮೀನು ಇಲ್ಲ. ಇನ್ನು ಅವರ ಒಟ್ಟು ಆಸ್ತಿ 3 ಕೋಟಿ 2 ಲಕ್ಷ 6 ಸಾವಿರದ 889 ರೂ. ಆಗಿದೆ.
ಚರ ಆಸ್ತಿ ಎಷ್ಟು?
ಪಿಎಂ ಮೋದಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 2014 ಮತ್ತು 2019 ರ ನಡುವೆ ಅವರ ಚರ ಆಸ್ತಿಯು ಶೇಕಡಾ 52 ರಷ್ಟು ಹೆಚ್ಚಾಗಿದೆ. ಅವರ ಬಹುತೇಕ ಚರ ಆಸ್ತಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1.27 ಕೋಟಿ ರೂಪಾಯಿಗಳ ಸ್ಥಿರ ಠೇವಣಿ ರೂಪದಲ್ಲಿವೆ. ಅಫಿಡವಿಟ್‌ನಲ್ಲಿ ತಾವು ಎಷ್ಟು ಆದಾಯ ತೆರಿಗೆ ಪಾವತಿಸಿರುವ ಬಗ್ಗೆಯೂ ಮಾಹಿತಿಯನ್ನು ನೀಡಿದ್ದಾರೆ.

ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಇವುಗಳಲ್ಲಿ ಒಂದು ಖಾತೆಯು ಗುಜರಾತ್‌ನ ಗಾಂಧಿನಗರದಲ್ಲಿದೆ ಮತ್ತು ಇನ್ನೊಂದು ಖಾತೆ ವಾರಣಾಸಿಯ ಶಿವಾಜಿ ನಗರ ಶಾಖೆಯಲ್ಲಿದೆ. ಪ್ರಧಾನಿ ಮೋದಿ ಅವರ ಗುಜರಾತ್ ಬ್ಯಾಂಕ್ ಖಾತೆಯಲ್ಲಿ 73 ಸಾವಿರದ 304 ಮತ್ತು ವಾರಣಾಸಿ ಖಾತೆಯಲ್ಲಿ ಕೇವಲ ಏಳು ಸಾವಿರ ರೂಪಾಯಿ ಇದೆ. ಪ್ರಧಾನಿ ಮೋದಿಯವರು ಎಸ್‌ಬಿಐನಲ್ಲಿಯೇ 2 ಕೋಟಿ 85 ಲಕ್ಷದ 60 ಸಾವಿರದ 338 ರೂಪಾಯಿ ಮೌಲ್ಯದ ಎಫ್‌ಡಿ ಹೊಂದಿದ್ದಾರೆ.
ಐದು ವರ್ಷದಲ್ಲಿ ಪ್ರಧಾನಿ ಗಳಿಕೆ
5 ವರ್ಷಗಳ ಆದಾಯದ ಬಗ್ಗೆಯೂ ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ. 2018-19ರಲ್ಲಿ ಮೋದಿ ಆದಾಯ 11,14,230 ರೂ. ಆಗಿದ್ದು, ಇದು 2019-20ರಲ್ಲಿ 17,20,760ಕ್ಕೆ ಏರಿಕೆಯಾಗಿದೆ. 2020-21ರಲ್ಲಿ ಪ್ರಧಾನಿಯವರ ಆದಾಯ 17,07,930 ರೂ. ಇಳಿದಿದೆ. ನಂತರ 2021-22ರಲ್ಲಿ ಈ ಆದಾಯ 15,41,870 ರೂ.ಕುಸಿತ ಕಂಡಿದ್ದು, 2022-23ನೇ ಸಾಲಿನಲ್ಲಿ ಪ್ರಧಾನಿ ಮೋದಿಯವರ ಆದಾಯ 23,56,080 ರೂ. ಏರಿಕೆ ಕಂಡಿದೆ.
ಮೋದಿ ಓದಿದ್ದು ಎಷ್ಟು?
ಪ್ರಧಾನಿ ನರೇಂದ್ರ ಮೋದಿ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಅವರು 1967 ರಲ್ಲಿ ಗುಜರಾತ್ ಬೋರ್ಡ್‌ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇದರ ನಂತರ ಅವರು 1978 ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ಪದವಿ ಪಡೆದರು. ಪ್ರಧಾನಿ ಮೋದಿ ಅವರು 1983 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಕಲೆಯ ಸ್ನಾತಕೋತ್ತರ ಪದವಿ ಪಡೆದರು.












Click it and Unblock the Notifications