ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ- ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಗೆ ರೂಪುರೇಷೆ
ನವದೆಹಲಿ, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಸೋಮವಾರ ಸಂಜೆ 6:30ಕ್ಕೆ ಆರಂಭವಾಗಿದೆ. ಪಾರ್ಲಿಮೆಂಟ್‌ನ ಅನೆಕ್ಸ್ ಕಟ್ಟಡದಲ್ಲಿ ಈ ಮಹತ್ವದ ಸಭೆ ನಡೆಯುತ್ತಿದೆ. ಸಂಸತ್ತಿನ ವಿಶೇಷ ಅಧಿವೇಶನದ ಕಾರ್ಯಸೂಚಿಗೆ ಸಂಬಂಧಿಸಿದಂತೆ ಈ ಸಭೆಯಲ್ಲಿ ಚರ್ಚೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಪ್ರಲ್ಹಾದ್ ಜೋಶಿ ಮತ್ತು ಇತರ ಸಚಿವರು ಸಂಪುಟ ಸಭೆಗೂ ಮುನ್ನ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸಭೆಯ ಅಜೆಂಡಾ ಏನೆಂಬುದು ಇನ್ನೂ ತಿಳಿದುಬಂದಿಲ್ಲ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸೋಮವಾರ ಬೆಳಿಗ್ಗೆ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಐದು ದಿನಗಳ ಅಧಿವೇಶನದಲ್ಲಿ ಎಲ್ಲಾ ಪಕ್ಷಗಳ ಸದಸ್ಯರು ಪಾಲ್ಗೊಳ್ಳಲು ನಿರ್ಧರಿಸಲಾಗಿದೆ. ಬೆಲೆ ಏರಿಕೆ, ನಿರುದ್ಯೋಗ, ಮಣಿಪುರ ಹಿಂಸಾಚಾರ ಮತ್ತು ಗಡಿಯಲ್ಲಿನ ಚೀನಾದ ಉಲ್ಲಂಘನೆಯ ವಿಚಾರಗಳ ಕುರಿತು ಇಂಡಿಯಾ ಮೈತ್ರಿಕೂಟ ನಾಯಕರು ಅಧಿವೇಶನದಲ್ಲಿ ಮಾತನಾಡಲಿದ್ದಾರೆ.
ಅದಾನಿ ಹಗರಣ, ರೈತರ ಸಂಕಷ್ಟ, ದೇಶದ ಆರ್ಥಿಕ ಪರಿಸ್ಥಿತಿ ಮತ್ತು ಜಾತಿ ಗಣತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಅವರು ನಿರ್ಧರಿಸಿದ್ದಾರೆ.
ಈಗಾಗಲೇ ರಾಜ್ಯಸಭೆಯಲ್ಲಿ ಮಂಡಿಸಲಾಗಿರುವ ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ನೇಮಕಾತಿ ಮಸೂದೆಯನ್ನು ವಿರೋಧಿಸಲು ಮೈತ್ರಿಕೂಟ ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದ ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ, ಎನ್‌ಸಿಪಿ, ಎಡಪಕ್ಷಗಳು, ಜೆಎಂಎಂ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ವಿಸಿಕೆ ಸೇರಿದಂತೆ ಇತರ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವ ವಿಷಯಗಳ ಪಟ್ಟಿಯನ್ನು ಪ್ರಸ್ತಾಪಿಸುವ ಬಗ್ಗೆ ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಈಗಾಗಲೇ ಮೋದಿಗೆ ಪತ್ರ ಬರೆದಿದ್ದಾರೆ.
ಇಂದು ಬೆಳಿಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಐತಿಹಾಸಿಕವೆಂದು ಬಣ್ಣಿಸಿದ್ದಾರೆ.












Click it and Unblock the Notifications