PM CARES Fund: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 8,452 ಕೋಟಿ ರೂ. ಬಳಕೆ ಮಾಡಿ ಎಂದ ಸಿಜೆಪಿ ಅಭಿಜೀತ್ ದೀಪ್ಕೆ
PM CARES Fund: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಇದೀಗ "ಪಿಎಂ ಕೇರ್ಸ್ ನಿಧಿಯ" ವಿಷಯವನ್ನು ಪ್ರಸ್ತಾಪಿಸಿದ್ದಾರೆ. 2024-25ರಲ್ಲಿ ಪಿಎಂ ಕೇರ್ಸ್ ನಿಧಿಯ (ಕೊರೊನಾ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಪ್ರಾರಂಭವಾಗಿತ್ತು) ಬರೋಬ್ಬರಿ 8,452 ಕೋಟಿ ರೂ. ನಿಧಿಯು ಗಣನೀಯವಾಗಿ ಏರಿಕೆಯಾಗಿದೆ ಎಂದು ಈಚೆಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಭಾರತದಲ್ಲಿನ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಸುಧಾರಿಸುವುದಕ್ಕೆ ಪಿಎಂ ಕೇರ್ಸ್ ನಿಧಿಯ ಹಣವನ್ನು ಬಳಕೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ ಈ ಹಣವನ್ನು ಯಾಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿಯು ಪದೇ ಪದೇ ಪಿಎಂ ಕೇರ್ಸ್ ನಿಧಿಯ ಹಣದ ಬಗ್ಗೆ ಚರ್ಚೆ ಮಾಡುತ್ತಿದೆ. ಟಿವಿಯ ಸಂದರ್ಶನವೊಂದರಲ್ಲಿ ಕಾಕ್ರೋಚ್ ಜನತಾ ಪಾರ್ಟಿಗೆ ಹಣ ಎಲ್ಲಿಂದ ಬರುತ್ತಿದೆ ಎನ್ನುವ ಆಂಕರ್‌ವೊಬ್ಬರ ಪ್ರಶ್ನೆಗೆ ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರರು ನಮಗೆ ಪಿಎಂ ಕೇರ್ಸ್ ನಿಧಿಯ
ಫಂಡ್ ಬರುತ್ತಿದೆ.

ಅದರಲ್ಲಿ ಎಷ್ಟು ಹಣ ಖರ್ಚಾಗಿದೆ ಹಾಗೂ ಬಾಕಿ ಎಷ್ಟು ಉಳಿದಿದೆ ಎನ್ನುವ ಬಗ್ಗೆ ತನಿಖೆ ಮಾಡಿ ಎಂದೂ ಹೇಳಿದ್ದರು. ಪಿಎಂ ಕೇರ್ಸ್ ನಿಧಿಯಲ್ಲಿ ಸುಮಾರು 8,500 ಕೋಟಿ ರೂಪಾಯಿ ಇದೆ. ಆದರೆ ಪಿಎಂ ಕೇರ್ಸ್ ನಿಧಿಯ ಹಣವನ್ನು ಎಲ್ಲಿಯೂ ಬಳಸಲಾಗುತ್ತಿಲ್ಲ ಎನ್ನಲಾಗುತ್ತಿದೆ ಎಂದು ಅಭಿಜಿತ್ ದೀಪ್ಕೆ ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಪಿಎಂ ಕೇರ್ಸ್ ನಿಧಿಗೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಮಾಡಿದ್ದು, ಅದನ್ನು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
PM CARES Fund: ಪಿಎಂ ಕೇರ್ಸ್ ನಿಧಿಯಲ್ಲಿ ಭಾರೀ ಏರಿಕೆ
ಇನ್ನು ಪಿಎಂ ಕೇರ್ಸ್ ನಿಧಿಯಲ್ಲಿ ಭಾರೀ ಏರಿಕೆ ಆಗಿದೆ. 2023-24ರಲ್ಲಿ ₹7,173.03 ಕೋಟಿ ಇದ್ದ ನಿಧಿ ಮೊತ್ತವು 2024-25ರಲ್ಲಿ ₹8,452.07 ಕೋಟಿಗೆ ಏರಿಕೆಯಾಗಿದೆ. ಅಂದರೆ ಶೇ.17.8ರಷ್ಟು ಹೆಚ್ಚಳವಾಗಿದೆ ಎಂದು ಸೋಮವಾರ ಬಿಡುಗಡೆಯಾದ ಆಡಿಟ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.
PM CARES Fund: ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆಗ್ರಹ
ಭಾರತದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಿಎಂ ಕೇರ್ಸ್ ನಿಧಿಯಲ್ಲಿರುವ ಹಣವನ್ನು ಬಳಕೆ ಮಾಡಬೇಕು ಎಂದು ಅಭಿಜಿತ್ ದೀಪ್ಕೆ ಅವರು ಆಗ್ರಹಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಹಳ್ಳಿಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ಸರ್ಕಾರಿ ಶಾಲೆಗಳ ಸ್ಥಿತಿ ತುಂಬಾ ಕೆಟ್ಟದಾಗಿದೆ. ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಸಹ ಪರದಾಡುತ್ತಿದ್ದಾರೆ.
ಶಾಲೆಗಳಲ್ಲಿ ಕುಡಿಯುವ ನೀರು ಪಡೆಯಲು ಸಹ ಮಕ್ಕಳು ಕಷ್ಟಪಡುತ್ತಿರುವಾಗ ಈ ಹಣವನ್ನು ಆ ಮಕ್ಕಳ ಶಾಲೆಗಳಿಗೆ ಏಕೆ ಬಳಸುತ್ತಿಲ್ಲ, ಹೊಸ ಶಾಲೆಗಳನ್ನು ನಿರ್ಮಿಸಲು ಈ ಹಣವನ್ನು ಏಕೆ ಬಳಕೆ ಮಾಡಬಾರದು ಎಂದು ಅವರು ಪ್ರಶ್ನೆ ಮಾಡಿದ್ದಾರೆ, ಹಣಕಾಸಿನ ಕೊರತೆಯಿಂದಾಗಿ ಹಲವಾರು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದೂ ಅಭಿಜಿತ್ ದೀಪ್ಕೆ ಅವರು ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
2024-25ರಲ್ಲಿ ಪಿಎಂ ಕೇರ್ಸ್ ನಿಧಿಯಲ್ಲಿ ದೇಶೀಯ ದೇಣಿಗೆಗಳು ಸುಮಾರು 30% ರಷ್ಟು ಕುಸಿದಿದ್ದರೂ ಮತ್ತು ವಿದೇಶಿ ದೇಣಿಗೆಗಳು 18% ಕ್ಕಿಂತ ಹೆಚ್ಚು ಕುಸಿದಿದ್ದರೂ ಸಹ PM CARES ನಿಧಿಯ ನಿಧಿಯಲ್ಲಿ ಹೆಚ್ಚಳ ಕಂಡುಬಂದಿದೆ. ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಆದಾಯ ಮತ್ತು ಅನುಷ್ಠಾನ ಸಂಸ್ಥೆಗಳಿಂದ ಮರುಪಾವತಿಗಳಿಂದ ಈ ಏರಿಕೆ ಹೆಚ್ಚಾಗಿ ಸಂಭವಿಸಿದೆ ಎನ್ನಲಾಗಿದೆ. ಆದರೆ ವರ್ಷದಲ್ಲಿ ಖರ್ಚು ಅತ್ಯಲ್ಪವಾಗಿತ್ತು. ಸುಸಜ್ಜಿತ ಮಾದರಿ ಶಾಲೆಗೆ ಸುಮಾರು 8 ಕೋಟಿ ರೂಪಾಯಿ ವೆಚ್ಚವಾಗಬಹುದು ಮತ್ತು ಈ ನಿಧಿಯು ಅಂತಹ 1,000 ಕ್ಕೂ ಹೆಚ್ಚು ಶಾಲೆಗಳಿಗೆ ಹಣಕಾಸು ಒದಗಿಸಬಹುದು ಎಂದು ಅಭಿಜಿತ್ ದೀಪ್ಕೆ ಅವರು ಹೇಳಿದ್ದಾರೆ.
PM CARES ನಿಧಿ ಎಂದರೇನು - ಯಾಕಿಷ್ಟು ಚರ್ಚೆ
PM CARES ನಿಧಿಯನ್ನು ಮಾರ್ಚ್ 27, 2020 ರಂದು ಕೋವಿಡ್ -19 ಸಾಂಕ್ರಾಮಿಕ ರೋಗದಂತಹ ತುರ್ತು ಪರಿಸ್ಥಿತಿಗಳಿಗಾಗಿ ಸ್ಥಾಪಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಇದರ ಅಧ್ಯಕ್ಷರಾಗಿದ್ದಾರೆ. ರಕ್ಷಣಾ, ಗೃಹ ಮತ್ತು ಹಣಕಾಸು ಸಚಿವರು ಟ್ರಸ್ಟಿಗಳಾಗಿ ಕಾರ್ಯನಿರ್ವಹಿಸುತ್ತಾರೆ.


Click it and Unblock the Notifications
