ಸತತ 3 ದಿನದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಇಲ್ಲ!
ನವದೆಹಲಿ, ನವೆಂಬರ್ 07; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ ಮೇಲೆ ಭಾರತದ 15 ರಾಜ್ಯ/ ಕೇಂದ್ರಾಡಳಿತ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿಂತ ಕಡಿಮೆಯಾಗಿದೆ.
ಸರ್ಕಾರಗಳು ತೆರಿಗೆ ಹೊರೆಯನ್ನು ಕಡಿಮೆ ಮಾಡಿದ ಬಳಿಕ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ನವೆಂಬರ್ 7ರಂದು ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಪಾಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ
ಸತತ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯ ವಿಧಾನವನ್ನು ಅನುಸರಿಸುತ್ತವೆ. ಆದರೆ ಮೂರು ದಿನದಿಂದ ಬೆಲೆ ಹೆಚ್ಚಳವಾಗಿಲ್ಲ.
ಸುಂಕ ಇಳಿಕೆ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ?
ಭಾನುವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103.97 ಪೈಸೆ ಆಗಿದೆ. ಡೀಸೆಲ್ ದರ ಲೀಟರ್‌ಗೆ 86.67 ರೂ. ಆಗಿದೆ. ಬುಧವಾರ 110.04 ಇದ್ದ ಪೆಟ್ರೋಲ್ ದರ ತೆರಿಗೆ ಕಡಿತದ ಬಳಿಕ 103.97 ರೂ.ಗಳಿಗೆ ಕುಸಿತವಾಗಿದೆ.
ರಾಜ್ಯ ಸರ್ಕಾರದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ತಲಾ 7 ರೂ ಇಳಿಕೆ
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂ. ಇದೆ. ಡೀಸೆಲ್ ದರ 94.14 ರೂ. ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆಯನ್ನು ಕಡಿತಗೊಳಿಸಿದ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಕೊಂಚ ನೆಮ್ಮದಿ ಸಿಕ್ಕಿದೆ.
ಭಾನುವಾರ ಬೆಂಗಳೂರು ನಗರದಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂ. ಆಗಿದೆ. ಡೀಸೆಲ್ ದರ 85.01 ರೂ. ಆಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದ ಬಳಿಕ ಕರ್ನಾಟಕ ಸರ್ಕಾರವೂ ತೆರಿಗೆ ಕಡಿತಗೊಳಿಸಿತ್ತು. ರಾಜ್ಯ ಸರ್ಕಾರವೂ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ. ಗಳಷ್ಟು ಕಡಿಮೆ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಅಂದಾಜು 2,100 ಕೋಟಿ ರೂ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ, ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದರು.
ಎಲ್ಲಿ, ಎಷ್ಟು ದರವಿದೆ?; ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 101.40 ರೂ. ಇದೆ. ಡೀಸೆಲ್ ದರ ಲೀಟರ್‌ಗೆ 91.43 ರೂ. ಆಗಿದೆ.
ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ. ಆಗಿದ್ದರೆ, ಡೀಸೆಲ್ ದರ 89.79 ರೂ. ಆಗಿದೆ.
ಹೈದರಾಬಾದ್ ನಗರದಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.20 ರೂ. ಆಗಿದೆ. ಡೀಸೆಲ್ ದರ ಲೀಟರ್‌ಗೆ 94.62 ಆಗಿದೆ.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂ. ಆಗಿದೆ. ಡೀಸೆಲ್ ದರ 86.80 ರೂ. ಆಗಿದೆ.
ಗುಜರಾತ್‌ನ ಗಾಂಧಿ ನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂ. ಇದೆ. ಡೀಸೆಲ್ ಲೀಟರ್‌ಗೆ 89.33 ರೂ. ಆಗಿದೆ.
ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ ದರ 106.36 ರೂ. ಆಗಿದೆ. ಡೀಸೆಲ್ ದರ ಲೀಟರ್ ದರ 93.47 ರೂ. ಆಗಿದೆ.
ನವೆಂಬರ್ 14 ರಿಂದ ಕಾಂಗ್ರೆಸ್ ಹೋರಾಟ; ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿವೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ನವೆಂಬರ್ 14ರಿಂದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಅಡುಗೆ ಅನಿಲ ಸೇರಿ ಎಲ್ಲಾ ವಸ್ತುಗಳ ಬೆಲೆ ಇಳಿಸುವ ತನಕ ಕಾಂಗ್ರೆಸ್ ಹೋರಾಟ ಮುಂದುವರೆಸಲಿದೆ. ನವೆಂಬರ್ 14 ರಿಂದ ಜನಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ" ಎಂದು ಹೇಳಿದ್ದಾರೆ.