ಬಿಹಾರದ ಜನರಿಗೆ ಜೆಪಿ ನಡ್ಡಾ ಬಗ್ಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದ ಬಿಹಾರ ಡಿಸಿಎಂ ತೇಜಸ್ವಿ ಯಾದವ್
ನವದೆಹಲಿ, ಜ. 03: ಬಿಹಾರದ ಜನರಿಗೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಬಗ್ಗೆ ತಿಳಿದಿಲ್ಲ ಎಂದು ರಾಜ್ಯದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮಂಗಳವಾರ ವ್ಯಂಗ್ಯವಾಡಿದ್ದಾರೆ.
ಬಿಹಾರ ರಾಜ್ಯದಲ್ಲಿ ಕಳೆದ ವರ್ಷ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದ ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಮೈತ್ರಿ ಮುರಿದುಕೊಂಡು ತೇಜಸ್ವಿ ಯಾದವ್ ಅವರ ಆರ್‌ಜೆಡಿ ಜೊತೆಗೆ ಸಮ್ಮಿಶ್ರ ಸರ್ಕಾರ ರಚಿಸಿದ್ದಾರೆ. ಈ ಬಗ್ಗೆ ಜೆಪಿ ನಡ್ಡಾ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವಿನ ಕೆಸರೆರಚಾಟ ನಡೆಯುತ್ತಿದೆ. ಈ ಬೆನ್ನಲ್ಲೇ ಜಸ್ವಿ ಯಾದವ್ ಹೇಳಿಕೆ ಬಂದಿದೆ.
ಮುಜಾಫರ್‌ಪುರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದ ಜೆಪಿ ನಡ್ಡಾ, ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಯೊಂದಿಗೆ ಮಹಾಘಟಬಂಧನ್ ರಚಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವ್ಯಂಗ್ಯವಾಡಿದರು.

"ನಿತೀಶ್ ಕುಮಾರ್ ಅವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ. ಮುಖ್ಯಮಂತ್ರಿ ಬಿಹಾರದ ಜನರಿಗೆ ಅಗೌರವ ತೋರಿದ್ದಾರೆ. ರಾಜ್ಯದಲ್ಲಿ ಈಗಲೂ ಜಂಗಲ್ ರಾಜ್ ಅಸ್ತಿತ್ವದಲ್ಲಿದೆ" ಎಂದು ಆರೋಪಿಸಿದ್ದರು.
ಜೊತೆಗೆ ''ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ. ಬಿಹಾರವನ್ನು ಬಿಜೆಪಿ ಮುನ್ನಡೆಸಬೇಕಾದ ಸಮಯ ಬಂದಿದೆ" ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಹೇಳಿದ್ದರು.
ಜೆಪಿ ನಡ್ಡಾ ಟೀಕೆಗೆ ಪ್ರತಿಕ್ರಿಯಿಸಿರುವ ತೇಜಶ್ವಿ ಯಾದವ್, ಬಿಹಾರದ ಜನರು ಈ ಹಿಂದೆಯೇ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಈಗಲಾದರೂ ಪಕ್ಷವು ಸತ್ಯಗಳನ್ನು ಮಾತನಾಡಬೇಕು ಎಂದಿದ್ದಾರೆ.

'ಬಿಜೆಪಿ ಅವರಿಗೆ ಮಾತನಾಡಲು ಏನೂ ಇಲ್ಲ. ಅವರು ಈಗ ಹೇಳುತ್ತಿರುವುದನ್ನೇ ಮೊದಲೂ ಹೇಳಿದ್ದರು. ಆದರೆ ಜನ ಅವರನ್ನು ತಿರಸ್ಕರಿಸಿದ್ದರು. ಅವರು ಸತ್ಯಗಳ ಬಗ್ಗೆ ಮಾತನಾಡಬೇಕು. ಬಿಹಾರದ ಜನರಿಗೆ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಬಗ್ಗೆ ಏನೂ ತಿಳಿದಿಲ್ಲ' ಎಂದು ಹೇಳಿದ್ದಾರೆ.
ಈ ಹಿಂದೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಜೆಪಿ ನಡ್ಡಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದರು. 'ಬಿಜೆಪಿ ದೇಶಕ್ಕಾಗಿ ಕೆಲಸ ಮಾಡುವುದಿಲ್ಲ. ಅವರು ತಮಗಾಗಿ ಕೆಲಸ ಮಾಡುತ್ತಾರೆ. ಹೀಗಾಗಿಯೇ ನಮ್ಮ ಪಕ್ಷವು ಅವರೊಂದಿಗಿನ ಮೈತ್ರಿಯನ್ನು ಮುರಿದುಕೊಂಡಿದೆ' ಎಂದು ಹೇಳಿದ್ದರು.












Click it and Unblock the Notifications