ರಾಂಚಿ - ಐಎಂ ಭಯೋತ್ಪಾದಕರ ಹೊಸ ನೆಲವೀಡು
ಪಾಟ್ನಾ ಅ.29: ಇತ್ತ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಯೋತ್ಪಾದಕ ಉತ್ಪಾದನಾ ಕಾರ್ಖಾನೆಯಾಗಿದ್ದರೆ ಅತ್ತ ಜಾರ್ಖಂಡ್ ರಾಜಧಾನಿ ರಾಂಚಿಯ ಆಜುಬಾಜು ಸಿತಿಯೋ ಪ್ರದೇಶ ಇಂಡಿಯನ್ ಮುಜಾಹಿದ್ದೀನ್ (ಐಎಂ) ಭಯೋತ್ಪಾದಕ ಸಂಘಟನೆಯ ನೆಲೆವೀಡು ಆಗುತ್ತಿದೆ. ಈ ಮೊದಲು ಉತ್ತರ ಪ್ರದೇಶದ ಅಜಂಗಢ ಈ ಭಾಗದ ಉಗ್ರರಿಗೆ ಪ್ರಶಸ್ತ ಸ್ಥಳವಾಗಿತ್ತು.
Indian Mujahideen Ranchi Module: ಭಾನುವಾರ ನಡೆದ ಪಾಟ್ನಾ ಸರಣಿ ಸ್ಫೋಟದ ಬೆನ್ನುಹತ್ತಿರುವ ಪೊಲೀಸರು ಈ ಸತ್ಯವನ್ನು ಕಂಡುಕೊಂಡಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಭೆಯ ವೇಳೆ ಪಾಟ್ನಾದ ವಿವಿಧೆಡೆ ನಡೆಸಲಾದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿರುವ ನಾಲ್ಕೂ ಮಂದಿ ಶಂಕಿತ ಉಗ್ರರು ರಾಂಚಿಯಿಂದ ಕೇವಲ ಎರಡು ಕಿಮೀ ದೂರದಲ್ಲಿರುವ ಸಿತಿಯೋ ಹಳ್ಳಿಯ ನಿವಾಸಿಗಳು!

ಪಾಟ್ನಾ ಸ್ಫೋಟದ ಸ್ಕೆಚ್ ಸಿದ್ಧವಾಗಿದ್ದು ಈ ಗ್ರಾಮದಲ್ಲೇ. ನಾಲ್ವರು ಬಂಧಿತ ಆರೋಪಿಗಳು ಯಾರೆಂದರೆ ಮೊಹ್ಮದ್ ಇಮ್ತಿಯಾಜ್ ಅನ್ಸಾರಿ, ಮೊಹಮ್ಮದ್ ತಾರಿಖ್ ಅನ್ಸಾರಿ, ಮೊಹಮ್ಮದ್ ತೌಫೀಕ್ ಅನ್ಸಾರಿ ಮತ್ತು ಮೊಹ್ಮದ್ ನೋಮನ್.
ಈ ಗುಂಪಿನ ಮುಖ್ಯಸ್ಥ ಇಂಡಿಯನ್ ಮುಜಾಹಿದ್ದೀನ್ ಗೆ ಸೇರಿದ ಮೊಹಮ್ಮದ್ ತೆಹಸೀನ್ ಅಖ್ತರ್ ಎಂದು ಹೇಳಲಾಗಿದೆ. ಇವನೂ ಕೂಡ ಬಿಹಾರದ ಸಮೀಪದ ಹಳ್ಳಿಯವನು ಮತ್ತು ಐಎಂ ಸಂಸ್ಥಾಪಕ ಯಾಸೀನ್ ಭಟ್ಕಳ್ ಸಹಚರ. ಇವನೇ ಈ ರಾಂಚಿ ಹುಡುಗರಿಗೆ ಸ್ಫೋಟಕಗಳ ಬಗ್ಗೆ ಪಾಠ ಕಲಿಸಿರುವವನು ಎಂದು ಪೊಲೀಸ್ ಮೂಲಗಳು ಹೇಳಿವೆ.
ಸ್ಫೋಟದ ದಿನ ಪಾಟ್ನಾದಲ್ಲಿ ಬಂಧಿಸಲಾದ ಇಮ್ತಿಯಾಜ್ ಅನೇಕ ಅಚ್ಚರಿಯ ವಿಷಯಗಳನ್ನು ಪೊಲೀಸರಿಗೆ ನೀಡಿರುವ ಪ್ರಮುಖ ಆರೋಪಿ. ಇವನ ಬಂಧನ ಪ್ರಕರಣದ ಮೇಲೆ ಸಾಕಷ್ಟು ಬೆಳಕು ಚೆಲ್ಲಿದೆ. ಅದೇ ದಿನ ಸಂಜೆ ರಾಂಚಿ ಸಮೀಪದ ಸಿತಿಯೋ ಗ್ರಾಮದಲ್ಲಿ ಇಮ್ತಿಯಾಜ್ ಮನೆ ಮೇಲೆ ದಾಳಿ ನಡೆಸಲಾಗಿದೆ.
ಈ ವೇಳೆ ಅವನ ಮನೆಯಲ್ಲಿ ವಿದ್ಯುತ್ ಫ್ಯೂಸ್ ವೈರ್, ಪ್ರೆಷರ್ ಕುಕ್ಕರ್ ಬಾಂಬ್ ತಯಾರಿಸುವ ವಿಧಾನವನ್ನೊಳಗೊಂಡ ಕೈಪಿಡಿ, ಜಿಹಾದಿಗೆ ಸಂಬಂಧಿಸಿದ ಲೇಖನ- ಸಾಹಿತ್ಯಗಳು ಹಾಗೂ ಅಲ್ ಖೈದಾ ಮುಖಂಡ ಒಸಾಮಾ ಬಿನ್ ಲಾಡೆನ್ ಭಾವ ಚಿತ್ರ, ಪೆನ್ ಡ್ರೈವ್ ಹಾಗೂ ಕೆಲವು ಸಿ.ಡಿ. ಗಳು ಲಭ್ಯವಾಗಿವೆ. ಇದರಲ್ಲಿ ಏನೇನಿದೆ ಎಂಬ ಬಗ್ಗೆ ತಜ್ಞರು ಪರಿಶೀಲನೆ ನಡೆಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್ಎನ್ ಪ್ರಧಾನ್ ಹೇಳಿದ್ದಾರೆ.
ಇಮ್ತಿಯಾಜ್ ಹೇಳಿಕೆ ಆಧರಿಸಿಯೇ ತೌಫೀಕ್ ತಾರಿಖ್ ನನ್ನು ಬಂಧಿಸಲಾಯಿತು. ಈ ಸ್ಫೋಟದ ವೇಳೆ ಗಾಯಗೊಂಡಿದ್ದ ತಾರೀಖ್ ಸೋಮವಾರ ಬೆಳಗ್ಗೆ ಮರಣಹೊಂದಿದ. ಇವರ ಗುರು ಅಖ್ತರ್ ಪದೇ ಪದೇ ರಾಂಚಿಗೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಎರಡು ತಿಂಗಳ ಹಿಂದೆ ಬಂದು ಇಮ್ತಿಯಾಜ್ ನನ್ನು ಭೇಟಿ ಮಾಡಿ ಹೋಗಿದ್ದ ಎಂದೂ ಅವರು ತಿಳಿಸಿದ್ದಾರೆ.
ಇವರಲ್ಲದೆ ಇನ್ನೂ 8 ಮಂದಿ ಅಪರಿಚಿತರು ಪಾಟ್ನಾ ಸರಣಿ ಸ್ಫೋಟಕ್ಕೆ ಸಹಕರಿಸಿದ್ದಾರೆ. ರಾಂಚಿಯಲ್ಲಿ ಪಾಕ್ ಮೂಲದ ಉಗ್ರರು ಬೀಡು ಬಿಟ್ಟಿರುವ ಬಗ್ಗೆ 2002ರಲ್ಲೇ ಮಾಹಿತಿ ಸಿಕ್ಕಿತ್ತು. ಇಲ್ಲಿ ನೆಲೆಸಿದ್ದ ಪಾಕಿನ ಜಾಹೀದ್ ಮತ್ತು ಸಲೀಂ ಎಂಬ ಉಗ್ರರು ಕೋಲ್ಕತ್ತಾದ ಅಮೆರಿಕ ಕೇಂದ್ರದ ಮೇಲೆ ದಾಳಿ ಮಾಡಿದ್ದರು. ಇವರು ಹಜಾರಿಬಾಗ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು.
ಸಿಮಿ ಮುಖಂಡ ಅಬು ಫೈಜಲ್ ಬಂಧಿಸಿದ್ದೂ ಇಲ್ಲಯೇ 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ಆರೋಪಿ ಮಂಜಾರ್ ಇಮಾಮ್ ನನ್ನು ಕೂಡ ರಾಂಚಿಯಲ್ಲೇ ಬಂಧಿಸಲಾಗಿತ್ತು. ಇದಕ್ಕೂ ಮುನ್ನ 2012ರಲ್ಲಿ ದೆಹಲಿಯಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಕಾಶ್ಮೀರಿ ಯುವಕನೊಬ್ಬನನ್ನು ಹಜಾರಿಬಾಗ್ ನ ಪಲ್ವಾಲ್ ನಲ್ಲಿ ಬಂಧಿಸಲಾಗಿತ್ತು.












Click it and Unblock the Notifications