Winter Session Day 4 Roundup; 4ನೇ ದಿನದ ಮುಖ್ಯಾಂಶಗಳು
ನವದೆಹಲಿ, ಡಿಸೆಂಬರ್ 02; ರಾಜ್ಯಸಭೆಯ 12 ಸದಸ್ಯರನ್ನು ಅಮಾನತು ಮಾಡಿರುವ ವಿಚಾರದಲ್ಲಿ ಸರ್ಕಾರ, ಪ್ರತಿಪಕ್ಷಗಳ ನಡುವೆ ಜಟಾಪಟಿ ಮುಂದುವರೆದಿದೆ. ಲೋಕಸಭೆಯಲ್ಲಿ ಗುರುವಾರ ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ (ನಿಯಂತ್ರಣ) ಮಸೂದೆಯನ್ನು ಅಂಗೀಕರಿಸಲಾಗಿದೆ.
ರಾಜ್ಯಸಭೆಯಿಂದ ಅಮಾನತುಗೊಂಡಿರುವ 12 ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿಕ ಗುರುವಾರವೂ ಪ್ರತಿಭಟನೆ ನಡೆಸಿದರು. ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಸದಸ್ಯರು ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಸರ್ಕಾರ ಅಮಾನತುಗೊಂಡಿರುವ ಸದಸ್ಯರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕರು ಅಮಾನತುಗೊಂಡಿರುವ ಸಂಸದರ ಬೆಂಬಲಕ್ಕೆ ನಿಂತಿದ್ದಾರೆ. ಅಮಾನತು ಆದೇಶ ವಾಪಸ್ ಪಡೆಯಬೇಕೆಂದು ಇಂದು ಸಹ ಪ್ರತಿಭಟನೆಯನ್ನು ಅವರು ನಡೆಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಮಾನತುಗೊಂಡಿರುವ ಸದಸ್ಯರನ್ನು ಗುರುವಾರ ಭೇಟಿ ಮಾಡಿದರು.

ಆಯ್ಕೆ ಸಮಿತಿಗೆ ಕಳಿಸಲು ನೋಟಿಸ್; ರಾಜ್ಯಸಭೆಯಲ್ಲಿ ಸಂಸದ ಟಿ. ಶಿವ 'ಅಣೆಕಟ್ಟು ಸುರಕ್ಷತಾ ಮಸೂದೆ 2019' ಅನ್ನು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಲು ನೋಟಿಸ್ ನೀಡಿದರು. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಸಭೆಯಲ್ಲಿ 'ಅಣೆಕಟ್ಟು ಸುರಕ್ಷತಾ ಮಸೂದೆ 2019'ಯನ್ನು ಹೆಚ್ಚಿನ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಲಿದ್ದಾರೆ. ವಿಧೇಯಕವನ್ನು ಬುಧವಾರವೇ ಸದನದಲ್ಲಿ ಮಂಡಿಸಲಾಯಿತು. ಆದರೆ ಪ್ರತಿಪಕ್ಷಗಳ ಗದ್ದಲದಿಂದಾಗಿ ಅದನ್ನು ಅಂಗೀಕರಿಸಲಾಗಲಿಲ್ಲ.
ಅಮಾನತು ಬಗ್ಗೆ ಸಭಾಪತಿಗಳ ಮಾತು; ರಾಜ್ಯಸಭಾ ಸದಸ್ಯರ ಅಮಾನತು ಬಗ್ಗೆ ಸಭಾಪತಿ ವೆಂಕಯ್ಯ ನಾಯ್ಡು ಮಾತನಾಡಿದ್ದಾರೆ, "ಅಮಾನತು ಆದೇಶ ಕಾನೂನಿನ ಪ್ರಕಾರ ಇಲ್ಲ ಎಂದು ಸದಸನ ಒಳಗೆ ಮತ್ತು ಹೊರಗೆ ಚರ್ಚೆ ಆಗುತ್ತಿದೆ. ಆದರೆ ಅಮಾನತು ಮಾಡಿದ ಕಾರಣದ ಬಗ್ಗೆ ಒಂದು ಮಾತು ಸಹ ಹೇಳುತ್ತಿಲ್ಲ" ಎಂದರು.
ಓಮಿಕ್ರಾನ್; ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, "ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹೆಚ್ಚಿಸಲು ಕಳೆದ 6 ತಿಂಗಳಿನಿಂದ ನಾವು ಪ್ರಯತ್ನ ನಡೆಸಿದ್ದೇವೆ. 11 ದೇಶಗಳನ್ನು ಅಪಾಯಕಾರಿ ಎಂದು ನಾವು ಗುರುತಿಸಿದ್ದೇವೆ" ಎಂದು ಹೇಳಿದರು.
ಮೂರು ವರ್ಷಗಳಲ್ಲಿ 57 ಲಕ್ಷ ಅಹವಾಲುಗಳನ್ನು ಆನ್‌ಲೈನ್ ಮೂಲಕ ಪಡೆಯಲಾಗಿದೆ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ಹೇಳಿದೆ. ಇವುಗಳಲ್ಲಿ 54.65 ಲಕ್ಷ ಅಹವಾಲುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದೆ.












Click it and Unblock the Notifications