ಗಡಿಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕ್, ಗುಂಡು ಹಾರಿಸಿ ಅಟ್ಟಹಾಸ
ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಗುಂಡಿನ ಉಗ್ರರ ದಾಳಿ ಘಟನೆ ಬಳಿಕ ಭಾರತವು ಪಾಕಿಸ್ತಾನ ಬಿಸಿ ಮುಟ್ಟಿಸಲು ಶುರು ಮಾಡಿದೆ. ಬಹುತೇಕ ಯುದ್ಧದ ವಾತಾವರಣ ನಿರ್ಮಾಣವಾಗಿದ್ದು, ಇಂದು ಭಾರತದ ಗಡಿಯಲ್ಲಿ ಪಾಕ್ ಮತ್ತೆ ಬಾಲ ಬಿಚ್ಚಿದೆ. ನಿಯಂತ್ರಣ ರೇಖೆಯ (ಎಲ್‌ಒಸಿ) ಕೆಲವು ಸ್ಥಳಗಳಲ್ಲಿ ಪಾಕಿಸ್ತಾನ ಸೇನೆಯು ಗುಂಡು ಹಾರಿಸಿದ್ದು, ಭಾರತೀಯ ಸೇನೆ ಕೂಡ ಇದಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯೆ ನೀಡಿದೆ. ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಭಾರತೀಯ ಸೇನಾ ಅಧಿಕಾರಿಗಳು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರವಾಗಿ ಹೆಚ್ಚಿದ್ದು, ನಿಯಂತ್ರಣ ರೇಖೆ (ಎಲ್‌ಒಸಿ) ಆಚೆಗೆ ದಾಳಿಯ ಸೂಚನೆ ಇತ್ತು. ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ಭಾರತ ಈಗಾಗಲೇ ಹಲವಾರು ರಾಜತಾಂತ್ರಿಕ ಕ್ರಮಗಳನ್ನು ತೆಗೆದುಕೊಂಡಿದೆ. ಈ ಹಿನ್ನೆಲೆ ಎರಡೂ ಮಿಲಿಟರಿ ಪಡೆಗಳು ಹೈ ಅಲರ್ಟ್ ಆಗಿವೆ.

ಈ ಶಕ್ತಿ ಪ್ರದರ್ಶನದಲ್ಲಿ ಭಾರತದ ಹೊಸ ಯುದ್ಧನೌಕೆ ಐಎನ್ಎಸ್ ಸೂರತ್, ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಯಶಸ್ವಿ ಕ್ಷಿಪಣಿ ಪ್ರತಿಬಂಧಕ ಪರೀಕ್ಷೆಯನ್ನು ನಡೆಸಿದೆ. ಕ್ಷಿಪಣಿಯು ಕಡಿಮೆ-ಹಾರುವ ವೈಮಾನಿಕ ಗುರಿಯನ್ನು ಹೊಡೆದುರುಳಿಸಿದೆ. ಪಾಕಿಸ್ತಾನವು ನೌಕಾ ಪ್ರದೇಶ ಕೂಡ ಎಚ್ಚರಿಕೆ ನೀಡಿದ್ದು, ಏಪ್ರಿಲ್ 24-25ರ ನಡುವೆ ಅರೇಬಿಯನ್ ಸಮುದ್ರದ ದೊಡ್ಡ ಭಾಗದಲ್ಲಿ ಶಸ್ತ್ರಾಸ್ತ್ರ ಗುಂಡಿನ ದಾಳಿಯನ್ನು ಘೋಷಿಸಿದೆ.
ಭಾರತದ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್, ಕಾರವಾರದಲ್ಲಿರುವ ತನ್ನ ನೆಲೆಯಿಂದ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲ್ಪಟ್ಟಿದೆ ಎಂದು ಉಪಗ್ರಹ ಚಿತ್ರಣಗಳು ದೃಢಪಡಿಸಿವೆ. ಇದು ಪ್ರಸ್ತುತ ಉದ್ವಿಗ್ನತೆಗಳಿಗೆ ಪ್ರತಿಕ್ರಿಯೆಯಾಗಿ ಹೆಚ್ಚಿದ ನೌಕಾಪಡೆಯ ಅಲರ್ಟ್ ಅನ್ನು ಸೂಚಿಸುತ್ತದೆ. ಭಾರತೀಯ ವಾಯುಪಡೆಯು ಕೇಂದ್ರ ವಲಯದಲ್ಲಿ 'ಅಕ್ರಮಣ' ಕಸರತ್ತು ನಡೆಸುತ್ತಿದ್ದು, ಇದನ್ನು ಅಧಿಕಾರಿಗಳು ಕವಾಯತು ಎಂದಿದ್ದಾರೆ.

ಮತ್ತೊಂದೆಡೆ ಪಾಕಿಸ್ತಾನ ಕೂಡ ಮುನ್ನೆಚ್ಚರಿಕೆಯಾಗಿ ವಿಮಾನಗಳನ್ನು ನಿಯೋಜಿಸಿದೆ. ಎಲೆಕ್ಟ್ರಾನಿಕ್ ಸಿಗ್ನಲ್‌ಗಳನ್ನು ಸಂಗ್ರಹಿಸಲು ಮತ್ತು ಯಾವುದೇ ಭಾರತೀಯ ವೈಮಾನಿಕ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಸನ್ನದ್ಧಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಹೈ ಅಲರ್ಟ್ ಸ್ಥಿತಿ ಮತ್ತು ಪ್ರತೀಕಾರದ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮಿಲಿಟರಿ ಕೂಡ ತಿರುಗೇಟು ನೀಡಲು ಎಲ್ಲ ರೀತಿಯಲ್ಲಿ ಸಜ್ಜಾಗಿದೆ.
ಸರ್ವಪಕ್ಷ ಸಭೆಯಲ್ಲಿ ಎಲ್ಲರಿಂದ ಬೆಂಬಲ!
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಡೆದ ಸರ್ವಪಕ್ಷ ಸಭೆಯು ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಎಲ್ಲ ಪಕ್ಷಗಳು ಸರ್ವಾನುಮತದಿಂದ ಭರವಸೆ ನೀಡಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಮಂಗಳವಾರ 26 ಜನರ ಸಾವಿಗೆ ಕಾರಣವಾದ ಬೈಸರನ್ ಹುಲ್ಲುಗಾವಲಿಗೆ ಭೇಟಿ ನೀಡಲು ಪ್ರವಾಸಿಗರಿಗೆ ಯಾವುದೇ ಪೊಲೀಸ್ ಅನುಮತಿ ಇರಲಿಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಯಿತು.
ಘಟನೆ ಹೇಗೆ ನಡೆಯಿತು ಮತ್ತು ಎಲ್ಲಿ ಲೋಪಗಳು ಸಂಭವಿಸಿದವು ಎಂಬುದರ ಕುರಿತು ಐಬಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳು ಸರ್ವಪಕ್ಷ ಸಭೆಗೆ ವಿವರಿಸಿದರು ಎಂದು ರಿಜಿಜು ಹೇಳಿದರು. ಹುಲ್ಲುಗಾವಲು ಮುಖ್ಯ ರಸ್ತೆಯಿಂದ ದೂರವಿದ್ದು, ಕಾಲ್ನಡಿಗೆ ಅಥವಾ ಕುದುರೆಯ ಮೂಲಕ ಮಾತ್ರ ಪ್ರವೇಶಿಸಬಹುದು. ಅಲ್ಲಿಗೆ ತಲುಪಲು ಎರಡರಿಂದ ಎರಡೂವರೆ ಗಂಟೆಗಳು ಬೇಕಾಗುತ್ತದೆ ಎಂದು ಹೇಳಿದರು.












Click it and Unblock the Notifications