ಅರೇಬಿಯನ್ ಸಮುದ್ರದಲ್ಲಿ ಪಾಕ್ ನೌಕಾ ಸೇನೆ ಅಭ್ಯಾಸ; ಭಾರತದ ಕಣ್ಗಾವಲು
ನವದೆಹಲಿ, ಸೆಪ್ಟೆಂಬರ್ 26: ಉತ್ತರ ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನವು ಮುಖ್ಯ ನೌಕಾ ತಾಲೀಮು ನಡೆಸುತ್ತಿದ್ದು, ಅದರ ಮೇಲೆ ಕಣ್ಗಾವಲು ಇಡುವ ಉದ್ದೇಶದಿಂದ ಭಾರತವು ಕೆಲ ಯುದ್ಧ ನೌಕೆ, ಸಬ್ ಮೆರಿನ್, ಸಮುದ್ರ ಕಣ್ಗಾವಲು ವಿಮಾನ, ಯುದ್ಧ ವಿಮಾನಗಳನ್ನು ಮುಂಚೂಣಿ ನೆಲೆಯಲ್ಲಿ ನಿಯೋಜನೆ ಮಾಡಿದೆ.
ಕ್ಷಿಪಣಿ ಹಾಗೂ ರಾಕೆಟ್ ಉಡಾವಣೆ ಮತ್ತಿತರ ತಾಲೀಮನ್ನು ಪಾಕಿಸ್ತಾನವು ಮುಂದಿನ ಕೆಲ ದಿನಗಳ ಕಾಲ ನಡೆಸಲಿದೆ. ಭಾರತ ಸೇನೆಯ ಉನ್ನತ ಮೂಲಗಳು ಬುಧವಾರ ನೀಡಿದ ಮಾಹಿತಿ ಪ್ರಕಾರ, ಪಾಕಿಸ್ತಾನ ನಡೆಸುತ್ತಿರುವ ತಾಲೀಮಿನ ಮೇಲೆ ತೀವ್ರ ಕಣ್ಗಾವಲು ಇಡಲಾಗಿದೆ. ಇನ್ನು ಭಾರತೀಯ ಸಶಸ್ತ್ರ ಪಡೆಯನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ನೌಕಾ ಸೇನೆ ತಾಲೀಮಿನ ವೇಳೆಯೇ ಪಾಕಿಸ್ತಾನ ಏನಾದರೂ 'ದುಸ್ಸಾಹಸ'ಕ್ಕೆ ಮುಂದಾದರೆ ಅದಕ್ಕೆ ತಕ್ಕ ಉತ್ತರ ನೀಡಲು ಸಿದ್ಧತೆ ನಡೆಸಲಾಗಿದೆ.
ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರದಿಂದ ರದ್ದು ಮಾಡಿದ ಮೇಲೆ ಪಾಕ್ ಸರ್ಕಾರ ಹಾಗೂ ಸರ್ಕಾರೇತರ ಮೂಲಗಳಿಂದ ಭಾರತದ ಮೇಲೆ ದಾಳಿಯ ಆತಂಕ ಇದ್ದೇ ಇದೆ. ಪಾಕಿಸ್ತಾನದ ಈಗಿನ ತಾಲೀಮು ಮಾಮೂಲಿನಂಥದ್ದೇ ಆಗಿರಬಹುದು. ಪ್ರತಿ ವರ್ಷ 'ರಿಬಟ್' ಹೆಸರಿನಲ್ಲಿ ಜಂಟಿ ನೌಕಾ- ವಾಯು ಅಭ್ಯಾಸ ನಡೆಯುತ್ತದೆ. ಆದರೆ ಉದ್ದೇಶ ಯಾವ ಕ್ಷಣದಲ್ಲಾದರೂ ಬದಲಾಗಬಹುದು ಎಂದು ಮೂಲಗಳು ತಿಳಿಸಿವೆ.

ವಾಣಿಜ್ಯ ಹಡಗುಗಳಿಗೆ ಎಚ್ಚರಿಕೆ
ಸೆಪ್ಟೆಂಬರ್ ಇಪ್ಪತ್ತೈದರಿಂದ ಇಪ್ಪತ್ತೊಂಬತ್ತರ ಮಧ್ಯೆ ಉತ್ತರ ಆರೇಬಿಯನ್ ಸಮುದ್ರದಲ್ಲಿ ಸಮರಾಭ್ಯಾಸ ನಡೆಯುತ್ತದೆ. ಈ ವೇಳೆ ಕ್ಷಿಪಣಿ, ರಾಕೆಟ್ ಹಾಗೂ ಬಂದೂಕಿನಿಂದ ಗುಂಡು ಹಾರಿಸುವ ತಾಲೀಮು ನಡೆಯುತ್ತದೆ. ಆದ್ದರಿಂದ ವಾಣಿಜ್ಯ ಹಡಗುಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಈಗಾಗಲೇ ಪಾಕಿಸ್ತಾನವು ಎಚ್ಚರಿಕೆ ನೀಡಿದೆ.

ಇಡೀ ತಾಲೀಮಿನ ಮೇಲೆ ಭಾರತದ ಕಣ್ಗಾವಲು
ಭಾರತವು ಇಡೀ ತಾಲೀಮು ಪ್ರಕ್ರಿಯೆ ಮೇಲೆ ಕಣ್ಣಿಡಲಿದೆ. ಕಾರ್ಯಚಟುವಟಿಕೆ ಸಾಮರ್ಥ್ಯ ಹಾಗೂ ರೂಢಿಯಲ್ಲಿ ಯಾವುದೇ ಬದಲಾವಣೆಯಾದರೂ ಗಮನ ಆ ಕಡೆ ಇರಲಿದೆ. ಇದಕ್ಕಾಗಿ ಭಾರತೀಯ ನೌಕಾ ಸೇನೆ, ವಾಯು ಸೇನೆಯ ವಿವಿಧ ಘಟಕಗಳನ್ನು ನಿಯೋಜನೆ ಮಾಡಲಾಗಿದೆ.

ಪಾಕಿಸ್ತಾನದ ಏಳರಿಂದ ಎಂಟು ಯುದ್ಧ ವಿಮಾನಗಳು
ಯುದ್ಧ ನೌಕೆ ಹಾಗೂ ಸಬ್ ಮೆರಿನ್ ಗಳನ್ನು ಹೊರತುಪಡಿಸಿ Poseidon-8I ಹೆಸರಿನ ಕಾವಲು ವಿಮಾನವನ್ನು ಕೂಡ ಪಾಕಿಸ್ತಾನ ತಾಲೀಮು ನಡೆಸುತ್ತಿರುವ ಪ್ರದೇಶದಲ್ಲಿ ಭಾರತ ನಿಯೋಜನೆ ಮಾಡಿದೆ. ಸದ್ಯಕ್ಕೆ ಆ ಸ್ಥಳದಲ್ಲಿ ಪಾಕಿಸ್ತಾನದ ಕನಿಷ್ಠ ಏಳರಿಂದ ಎಂಟು ಯುದ್ಧ ವಿಮಾನಗಳು ಇವೆ.

ದೊಡ್ಡ ಮಟ್ಟದ ಭಯೋತ್ಪಾದನೆ ದಾಳಿಗೆ ಸಿದ್ಧತೆ
ಪಾಕಿಸ್ತಾನದ ಜತೆಗೆ ಸಾಂಪ್ರದಾಯಿಕ ಯುದ್ಧ ಆಗುವ ಯಾವ ಸನ್ನಿವೇಶವೂ ಈಗ ಇಲ್ಲ. ಹಾಗಂತ 'ಇರಲಿ ಬಿಡು' ಎಂಬಂಥ ಧೋರಣೆಯಲ್ಲಿ ಇದ್ದು ಬಿಡುವುದು ಸಾಧ್ಯವಿಲ್ಲ. ಇನ್ನು ಕಳೆದ ಆಗಸ್ಟ್ ಐದನೇ ತಾರೀಕು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದ ಮೇಲೆ ಭಾರತದ ವಿರುದ್ಧ ದೊಡ್ಡ ಮಟ್ಟದ ಭಯೋತ್ಪಾದನೆ ದಾಳಿಗೆ ಸಿದ್ಧತೆ ನಡೆದಿದೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆಯಿಂದ ಬರುತ್ತಿವೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications