Bilawal Bhutto: ಭಾರತಕ್ಕೆ ಭೇಟಿ ನೀಡಲಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ
ನವದೆಹಲಿ, ಮೇ. 03: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (SCO) ವಿದೇಶಾಂಗ ಸಚಿವರ ಸಭೆಗಾಗಿ ನಾಳೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೇ 4 ಮತ್ತು 5 ರಂದು ಸಭೆಯನ್ನು ನಿಗದಿಪಡಿಸಲಾಗಿದೆ. ಪಾಕಿಸ್ತಾನ, ರಷ್ಯಾ ಮತ್ತು ಚೀನಾದ ವಿದೇಶಾಂಗ ಮಂತ್ರಿಗಳು ಸಭೆಯಲ್ಲಿ ಭಾಗವಹಿಸುವುದಾಗಿ ದೃಢಪಡಿಸಿದ್ದಾರೆ.
ಇಸ್ಲಾಮಾಬಾದ್‌ನಿಂದ 2011 ರ ನಂತರ ಮೊದಲ ಬಾರಿಗೆ ಪಾಕಿಸ್ತಾನದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿಯಾಗುತ್ತಿರುವುದರಿಂದ ಈ ಬೆಳವಣಿಗೆಯು ಮಹತ್ವದ್ದಾಗಿದೆ. ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವರಾದ ಹಿನಾ ರಬ್ಬಾನಿ ಖಾರ್ ಆ ವರ್ಷ ಭಾರತಕ್ಕೆ ಭೇಟಿ ನೀಡಿದ್ದರು. ಈಗ ಸಚಿವ ಬಿಲಾವಲ್ ಬುಟ್ಟೋ ಅವರು ದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಸಂಬಂಧಗಳ ಹೊಸ ಬೆಳವಣಿಗೆಗಳ ನಡುವೆ ಈ ಭೇಟಿ ಬಂದಿದೆ. ಎರಡೂ ದೇಶಗಳು ಕನಿಷ್ಠ ಸಂವಹನ ಮಾರ್ಗಗಳನ್ನು ಹೊಂದಿವೆ. 2019 ರ ಪುಲ್ವಾಮಾ ದಾಳಿ ಮತ್ತು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ನಂತರ ಎರಡು ದೇಶಗಳ ನಡುವಿನ ಸಂಬಂಧಗಳಲ್ಲಿ ಬಿರುಕು ಬಂದಿತ್ತು.
ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ಮತ್ತು 35 ಎ ವಿಧಿಗಳನ್ನು ರದ್ದುಗೊಳಿಸುವ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಭಾರತದ ನಿರ್ಧಾರದಿಂದ ಪಾಕಿಸ್ತಾನವು ಸಂತೋಷವಾಗಿಲ್ಲ. ಡಿಸೆಂಬರ್ 2022 ರಲ್ಲಿ, ಬಿಲಾವಲ್ ಭುಟ್ಟೊ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಜಿ-77 ಶೃಂಗಸಭೆಯ ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹೇಳಿಕೆ ನೀಡಿದ್ದರು.

ಸಚಿವ ಬಿಲಾವಲ್ ಬುಟ್ಟೋ ಅವರ ಈ ಹೇಳಿಕೆಗಳಿಗೆ ಭಾರತ ಸರ್ಕಾರದಿಂದ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿತು. ಇದಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಸೃಷ್ಟಿ ಮಾಡಿತ್ತು. ಸದ್ಯ ಆರ್ಥಿಕವಾಗಿ ದುರ್ಬಲವಾಗಿರುವ ಪಾಕಿಸ್ತಾನಕ್ಕೆ ಈ ಭೇಟಿ ನಿರ್ಣಾಯಕವಾಗಿದೆ. ಪಾಕಿಸ್ತಾನ ಪ್ರಸ್ತುತ ದೇಶೀಯ ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಎದುರಿಸಲು ಹಲವು ದೇಶಗಳ ಬೆಂಬಲವನ್ನು ಬಯಸುತ್ತಿದೆ.
ಶಾಂಘೈ ಸಹಕಾರ ಸಂಘಟನೆಯ ಸಭೆಗಾಗಿ ರಷ್ಯಾ ಮತ್ತು ಚೀನಾದ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಚೀನಾದ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಅವರು ಇತರ ಎಸ್‌ಸಿಒ ಸಹವರ್ತಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಇನ್ನು, ರಷ್ಯಾ-ಉಕ್ರೇನ್ ಯುದ್ಧದ ಮಧ್ಯೆ ರಷ್ಯಾದ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಭೇಟಿ ನೀಡಲಿದ್ದಾರೆ.
ಶಾಂಘೈ ಸಹಕಾರ ಸಂಘಟನೆಯ ಅಧ್ಯಕ್ಷ ರಾಷ್ಟ್ರವಾಗಿ ಭಾರತವು ಜುಲೈನಲ್ಲಿ ನಿಗದಿಯಾಗಿರುವ ಎಸ್‌ಸಿಒ ನಾಯಕರ ಶೃಂಗಸಭೆಯ ಮೊದಲು ಹಲವಾರು ಸಭೆಗಳನ್ನು ನಡೆಸುತ್ತಿದೆ. ಕಳೆದ ವಾರ, ಭಾರತವು ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ಎಸ್‌ಸಿಒ ಸದಸ್ಯರ ರಕ್ಷಣಾ ಮಂತ್ರಿಗಳಿಗೆ ಆತಿಥ್ಯವನ್ನು ನೀಡಿತು. ಪಾಕಿಸ್ತಾನ ರಕ್ಷಣ ಸಚಿವರು ವರ್ಚುವಲ್ ಆಗಿ ಭಾಗವಹಿಸಿದ್ದರು.












Click it and Unblock the Notifications