ಕೇಸರಿ ಪಕ್ಷದ ಪದ್ಮ ಪ್ರಶಸ್ತಿಗಳ ಪಟ್ಟಿಗೆ ಇನ್ನಷ್ಟು ಹೆಸರು
ಬೆಂಗಳೂರು, ಜ.12: ನರೇಂದ್ರ ಮೋದಿ ಸರ್ಕಾರ ತನ್ನ ಅಧಿಕಾರ ಅವಧಿಯಲ್ಲಿ ಪಕ್ಷದ ಪರ ನಿಂತ ವಿವಿಧ ಕ್ಷೇತ್ರದ ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ನೀಡಲು ಮುಂದಾದಂತೆ ತೋರುತ್ತದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮದನ್ ಮೋಹನ್ ಮಾಳವೀಯ ಅವರಿಗೆ ಭಾರತ ರತ್ನ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಪದ್ಮ ವಿಭೂಷಣ ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವ ಬಗ್ಗೆ ಸುದ್ದಿ ಬಂದಿತ್ತು.
ಈಗ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ, ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಗುರೂಜಿ ಅವರಿಗೆ ಪದ್ಮ ವಿಭೂಷಣ ಖಾತ್ರಿಯಾಗಿದೆ ಎಂಬ ಸುದ್ದಿಯಿದೆ. ಜ. 25ರಂದು ಕೇಂದ್ರ ಸರ್ಕಾರ ಪದ್ಮಭೂಷಣ, ಪದ್ಮ ವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು 2014-15ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. [ವಾಜಪೇಯಿ, ಮಾಳವೀಯರಿಗೆ 'ಭಾರತರತ್ನ' ಘೋಷಣೆ]

ಸದ್ಯಕ್ಕೆ ಈ ಪಟ್ಟಿಯಲ್ಲಿ ಮೋದಿ ಸರ್ಕಾರದ ಬೆಂಬಲಕ್ಕೆ ನಿಂತ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹಿತ ಕಾಯ್ದ ಪತ್ರಕರ್ತರೊಬ್ಬರು, ಉದ್ಯಮಿ ಇಬ್ಬರು ಹಾಗೂ ಹಿರಿಯ ಹಿಂದಿ ಚಲನಚಿತ್ರ ನಟರೊಬ್ಬರಿಗೆ ಪದ್ಮ ಪ್ರಶಸ್ತಿ ಗೌರವ ಲಭಿಸುವ ಸಾಧ್ಯತೆಯಿದೆ.
ಲಭ್ಯ ಮಾಹಿತಿ ಪ್ರಕಾರ ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಅವರಿಗೂ ಪದ್ಮ ವಿಭೂಷಣ ಲಭಿಸುವ ಸಾಧ್ಯತೆಯಿದೆ. ಅವರಿಗೆ 1991ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಉಳಿದಂತೆ ಪಟ್ಟಿಯಲ್ಲಿ ಉದ್ಯಮಿ ಎಚ್ ಸಿಎಲ್ ನ ಶಿವ್ ನಾಡರ್, ಪ್ರಸೂನ್ ಜೋಶಿ, ಅರುಣಿಮಾ ಸಿನ್ಹಾ, ಹರೀಶ್ ಸಾಳ್ವೆ ಅವರ ಹೆಸರುಗಳಿವೆ. ಮಾತಾ ಅಮೃತಾನಂದಮಯಿ ಅವರಿಗೂ ಪದ್ಮ ಒಲಿಯುವ ಸುಳಿವು ಸಿಕ್ಕಿದೆ.












Click it and Unblock the Notifications