Oubaitori: ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿ! ಸಂತೋಷದ ಬದುಕಿಗೆ ಜಪಾನಿಗರ ಓಬಾಯಿಟೋರಿ ತತ್ವ
ನಮ್ಮ ಜೀವನದಲ್ಲಿ ಹೋಲಿಕೆ ಎಂಬುದು ಬಹಳ ಸಹಜವಾದ ಸಂಗತಿ. ಸ್ನೇಹಿತರಿಗೆ ಉತ್ತಮ ಉದ್ಯೋಗ ಸಿಕ್ಕಾಗ, ಪರಿಚಯದವರು ಹೊಸ ಮನೆ ಖರೀದಿಸಿದಾಗ, ಸಹೋದ್ಯೋಗಿಗಳಿಗೆ ಬಡ್ತಿ ದೊರೆತಾಗ ಅಥವಾ ನಮ್ಮ ವಯಸ್ಸಿನವರು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದಾಗ, ನಮ್ಮ ಬದುಕಿನ ಬಗ್ಗೆ ನಾವೇ ಪ್ರಶ್ನೆ ಮಾಡಿಕೊಳ್ಳುತ್ತೇವೆ. "ನಾನು ಇನ್ನೂ ಏನನ್ನೂ ಸಾಧಿಸಿಲ್ಲವಾ?", "ನನ್ನ ಜೀವನ ಏಕೆ ಹೀಗಿದೆ?", "ನಾನು ಇತರರಿಗಿಂತ ಹಿಂದೆ ಉಳಿದಿದ್ದೇನೆಯೇ?" ಎಂಬ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ.
ಆದರೆ ಪ್ರತಿಯೊಬ್ಬರ ಜೀವನವೂ ಒಂದೇ ರೀತಿಯಲ್ಲಿ ಸಾಗುವುದಿಲ್ಲ. ಎಲ್ಲರಿಗೂ ಒಂದೇ ಸಮಯದಲ್ಲಿ ಯಶಸ್ಸು ಸಿಗುವುದಿಲ್ಲ. ಒಬ್ಬರು ಬೇಗನೆ ಗುರಿ ತಲುಪಿದರೆ, ಮತ್ತೊಬ್ಬರು ನಿಧಾನವಾಗಿ ತಮ್ಮದೇ ಆದ ದಾರಿಯನ್ನು ರೂಪಿಸಿಕೊಳ್ಳುತ್ತಾರೆ. ಇದೇ ವಿಚಾರವನ್ನು ಜಪಾನ್‌ನ ಓಬಾಯಿಟೋರಿ (Oubaitori) ಎಂಬ ಜೀವನ ತತ್ವ ಸುಂದರವಾಗಿ ವಿವರಿಸುತ್ತದೆ.

ಏನಿದು ಓಬಾಯಿಟೋರಿ ತತ್ವ?
ಓಬಾಯಿಟೋರಿ ಎಂಬುದು ಜಪಾನ್‌ನ ಒಂದು ಸುಂದರ ಪರಿಕಲ್ಪನೆ. ಇದನ್ನು ನಾಲ್ಕು ವಿಭಿನ್ನ ಮರಗಳ ಹೂಬಿಡುವಿಕೆಯ ಮೂಲಕ ವಿವರಿಸಲಾಗುತ್ತದೆ. ಚೆರ್ರಿ, ಪ್ಲಮ್, ಏಪ್ರಿಕಾಟ್ ಮತ್ತು ಪೀಚ್ ಮರಗಳು ತಮ್ಮದೇ ಆದ ಸಮಯದಲ್ಲಿ ಹೂಬಿಡುತ್ತವೆ. ಅವುಗಳ ಹೂವುಗಳು ವಿಭಿನ್ನವಾಗಿರುತ್ತವೆ. ಪ್ರತಿಯೊಂದು ಮರಕ್ಕೂ ತನ್ನದೇ ಆದ ಸೌಂದರ್ಯ ಮತ್ತು ವೈಶಿಷ್ಟ್ಯವಿರುತ್ತದೆ.
ಒಂದು ಮರ ಬೇಗನೆ ಹೂಬಿಟ್ಟಿತು ಎಂದು ಮತ್ತೊಂದು ಮರವನ್ನು ಕಡಿಮೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗೆಯೇ, ಒಂದು ಮರದ ಹೂವು ಮತ್ತೊಂದು ಮರದ ಹೂವಿಗಿಂತ ಉತ್ತಮ ಎಂದು ಹೇಳಲು ಸಾಧ್ಯವಿಲ್ಲ. ಪ್ರಕೃತಿಯಲ್ಲಿರುವ ಈ ವೈವಿಧ್ಯವೇ ಜೀವನಕ್ಕೂ ಅನ್ವಯಿಸುತ್ತದೆ.
ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಅವರ ಸಾಮರ್ಥ್ಯ, ಆಸಕ್ತಿ, ಪರಿಸ್ಥಿತಿ, ಅವಕಾಶಗಳು ಮತ್ತು ಜೀವನದ ಗುರಿಗಳು ಬೇರೆಬೇರೆ. ಹೀಗಿರುವಾಗ ಎಲ್ಲರೂ ಒಂದೇ ರೀತಿಯಲ್ಲಿ ಬೆಳೆಯಬೇಕು, ಒಂದೇ ವಯಸ್ಸಿನಲ್ಲಿ ಸಾಧನೆ ಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ.
ಇತರರ ಯಶಸ್ಸು ನಿಮ್ಮ ಸೋಲಲ್ಲ
ನಮ್ಮ ಸುತ್ತಲಿನ ಜನರ ಸಾಧನೆಗಳನ್ನು ಗಮನಿಸುವುದು ತಪ್ಪಲ್ಲ. ಆದರೆ ಅವರ ಸಾಧನೆಗಳನ್ನು ನಮ್ಮ ವೈಫಲ್ಯಕ್ಕೆ ಹೋಲಿಕೆಯಾಗಿ ಬಳಸಿಕೊಳ್ಳುವುದು ಮಾತ್ರ ಸರಿಯಲ್ಲ. ನಿಮ್ಮ ಸ್ನೇಹಿತರಿಗೆ ಉತ್ತಮ ಉದ್ಯೋಗ ಸಿಕ್ಕಿರಬಹುದು. ನಿಮ್ಮ ಸಹೋದ್ಯೋಗಿಗಳಿಗೆ ಬಡ್ತಿ ದೊರೆತಿರಬಹುದು. ನಿಮ್ಮ ಪರಿಚಯದವರು ಪ್ರೀತಿಯಲ್ಲಿ ಯಶಸ್ಸು ಕಂಡಿರಬಹುದು ಅಥವಾ ಕುಟುಂಬ ಜೀವನದಲ್ಲಿ ಸಂತೋಷವಾಗಿರಬಹುದು.
ಇವೆಲ್ಲವೂ ಅವರ ಜೀವನದ ಸುಂದರ ಕ್ಷಣಗಳು. ಅದೇ ಸಮಯದಲ್ಲಿ ನಿಮ್ಮ ಜೀವನದಲ್ಲಿಯೂ ಅನೇಕ ಸಾಧನೆಗಳಿರಬಹುದು. ನೀವು ಕಷ್ಟದ ಸಮಯವನ್ನು ಧೈರ್ಯದಿಂದ ಎದುರಿಸಿರಬಹುದು. ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸಿರಬಹುದು. ಹೊಸ ಕೌಶಲ್ಯಗಳನ್ನು ಕಲಿತಿರಬಹುದು. ನಿಮ್ಮ ಕನಸುಗಳಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರಬಹುದು.
ಇತರರು ಮುಂದೆ ಸಾಗುತ್ತಿದ್ದಾರೆ ಎಂಬ ಕಾರಣಕ್ಕೆ ನಿಮ್ಮ ಸಾಧನೆಗಳು ಅರ್ಥಹೀನವಾಗುವುದಿಲ್ಲ. ಇದನ್ನು ಅರ್ಥಮಾಡಿಕೊಂಡಾಗ ಮಾತ್ರ ನಾವು ನಮ್ಮ ಜೀವನವನ್ನು ಸಂತೋಷದಿಂದ ಸ್ವೀಕರಿಸಲು ಸಾಧ್ಯ.
ನಿಮ್ಮ ಬೆಳವಣಿಗೆಗೆ ನೀವೇ ಮಾನದಂಡವಾಗಿರಿ
ಇತರರೊಂದಿಗೆ ಹೋಲಿಕೆ ಮಾಡಿಕೊಳ್ಳುವುದಕ್ಕಿಂತ, ನಿನ್ನೆ ಇದ್ದ ನಿಮ್ಮನ್ನು ಇಂದಿನ ನಿಮ್ಮೊಂದಿಗೆ ಹೋಲಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ನಿನ್ನೆಗಿಂತ ಇಂದು ನೀವು ಸ್ವಲ್ಪ ಹೆಚ್ಚು ಕಲಿತಿದ್ದೀರಾ? ನಿಮ್ಮ ತಪ್ಪುಗಳಿಂದ ಪಾಠ ಕಲಿತಿದ್ದೀರಾ? ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೀರಾ? ನಿಮ್ಮ ಗುರಿಯತ್ತ ಒಂದು ಸಣ್ಣ ಹೆಜ್ಜೆಯನ್ನಾದರೂ ಇಟ್ಟಿದ್ದೀರಾ?
ಈ ಪ್ರಶ್ನೆಗಳು ನಿಮ್ಮ ಜೀವನದ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಜೀವನದಲ್ಲಿ ದೊಡ್ಡ ಬದಲಾವಣೆಗಳು ಒಂದೇ ದಿನದಲ್ಲಿ ಸಂಭವಿಸುವುದಿಲ್ಲ. ಸಣ್ಣ ಸಣ್ಣ ಪ್ರಯತ್ನಗಳು, ನಿರಂತರ ಅಭ್ಯಾಸ ಮತ್ತು ತಾಳ್ಮೆಯಿಂದ ದೊಡ್ಡ ಸಾಧನೆಗಳನ್ನು ಮಾಡಬಹುದು. ಇತರರ ಯಶಸ್ಸನ್ನು ನೋಡಿ ಆತುರಪಡುವ ಬದಲು, ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಬೆಳೆಸಿಕೊಳ್ಳಿ.
ಪರಿಪೂರ್ಣತೆಯ ಬೆನು ಹತ್ತುವ ಅಗತ್ಯವಿಲ್ಲ
ಜೀವನದಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕು ಎಂಬ ನಿರೀಕ್ಷೆ ನಮ್ಮನ್ನು ಅನಗತ್ಯ ಒತ್ತಡಕ್ಕೆ ಒಳಪಡಿಸಬಹುದು. ಉತ್ತಮ ಉದ್ಯೋಗ, ಹೆಚ್ಚು ಹಣ, ಸುಂದರ ಮನೆ, ಸಂತೋಷದ ಕುಟುಂಬ, ಸಾಮಾಜಿಕ ಗೌರವ ಹೀಗೆ ಎಲ್ಲವನ್ನೂ ಒಂದೇ ಸಮಯದಲ್ಲಿ ಪಡೆಯಬೇಕು ಎಂದುಕೊಳ್ಳುತ್ತೇವೆ.
ಆದರೆ ಜೀವನದಲ್ಲಿ ಪ್ರತಿಯೊಂದು ಹಂತವೂ ಒಂದೇ ರೀತಿಯಲ್ಲಿ ಸಾಗುವುದಿಲ್ಲ. ಕೆಲವು ದಿನಗಳು ಸಂತೋಷದಿಂದ ಕೂಡಿರುತ್ತವೆ. ಇನ್ನು ಕೆಲವು ದಿನಗಳು ಸವಾಲುಗಳಿಂದ ತುಂಬಿರುತ್ತವೆ. ಕೆಲವೊಮ್ಮೆ ನಾವು ವೇಗವಾಗಿ ಬೆಳೆಯುತ್ತೇವೆ. ಮತ್ತೊಮ್ಮೆ ನಿಧಾನವಾಗಿ ಸಾಗುತ್ತೇವೆ. ಇದನ್ನೆಲ್ಲ ಜೀವನದ ಸಹಜ ಭಾಗವೆಂದು ಸ್ವೀಕರಿಸುವುದು ಮುಖ್ಯ.
ಓಬಾಯಿಟೋರಿ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ?
ಓಬಾಯಿಟೋರಿ ಕೇವಲ ಒಂದು ಸುಂದರ ಪರಿಕಲ್ಪನೆಯಲ್ಲ. ಅದನ್ನು ನಮ್ಮ ದೈನಂದಿನ ಜೀವನದಲ್ಲಿಯೂ ಅಳವಡಿಸಿಕೊಳ್ಳಬಹುದು.
1. ಸಾಮಾಜಿಕ ಜಾಲತಾಣಗಳ ಹೋಲಿಕೆಯಿಂದ ದೂರವಿರಿ
ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಾರೆ. ಆದರೆ ಅವರ ಜೀವನದ ಸಮಸ್ಯೆಗಳು, ಆತಂಕಗಳು ಮತ್ತು ಸವಾಲುಗಳು ನಮಗೆ ಕಾಣಿಸುವುದಿಲ್ಲ. ಇತರರ ಜೀವನದ ಆಯ್ದ ಕ್ಷಣಗಳನ್ನು ನಮ್ಮ ಸಂಪೂರ್ಣ ಜೀವನದೊಂದಿಗೆ ಹೋಲಿಸಿಕೊಳ್ಳಬೇಡಿ.
2. ನಿಮ್ಮ ಸಾಧನೆಗಳನ್ನು ಗುರುತಿಸಿ
ನೀವು ಸಾಧಿಸಿರುವ ಸಣ್ಣ ಸಂಗತಿಗಳನ್ನೂ ಗೌರವಿಸಿ. ಹೊಸ ಕೌಶಲ್ಯ ಕಲಿಯುವುದು, ಕುಟುಂಬಕ್ಕೆ ಸಮಯ ನೀಡುವುದು, ಕಷ್ಟದ ಪರಿಸ್ಥಿತಿಯಲ್ಲಿ ಧೈರ್ಯದಿಂದ ನಿಲ್ಲುವುದು ಕೂಡ ಸಾಧನೆಯೇ.
3. ನಿಮ್ಮದೇ ಆದ ಗುರಿಗಳನ್ನು ರೂಪಿಸಿಕೊಳ್ಳಿ
ಸಮಾಜ ಏನು ನಿರೀಕ್ಷಿಸುತ್ತದೆ ಎಂಬುದಕ್ಕಿಂತ, ನಿಮಗೆ ನಿಜವಾಗಿಯೂ ಯಾವುದು ಮುಖ್ಯ ಎಂಬುದನ್ನು ಗುರುತಿಸಿ. ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕಂತೆ ಗುರಿಗಳನ್ನು ನಿರ್ಧರಿಸಿ.
4. ತಾಳ್ಮೆಯಿಂದ ಬೆಳೆಯಿರಿ
ಎಲ್ಲರಿಗೂ ಒಂದೇ ರೀತಿಯ ಅವಕಾಶಗಳು ಸಿಗುವುದಿಲ್ಲ. ನಿಮ್ಮ ಪರಿಸ್ಥಿತಿಗೆ ಅನುಗುಣವಾಗಿ ಪ್ರಯತ್ನಿಸುತ್ತಿರಿ. ನಿಧಾನವಾದ ಬೆಳವಣಿಗೆಯೂ ಬೆಳವಣಿಗೆಯೇ ಎಂಬುದನ್ನು ನೆನಪಿಡಿ.
5. ಇತರರ ಯಶಸ್ಸನ್ನು ಸಂಭ್ರಮಿಸಿ
ಬೇರೆಯವರು ಯಶಸ್ಸು ಕಂಡಾಗ ಅವರೊಂದಿಗೆ ಸಂತೋಷ ಹಂಚಿಕೊಳ್ಳಿ. ಅವರ ಸಾಧನೆಯನ್ನು ನಿಮ್ಮ ಸೋಲಾಗಿ ನೋಡಬೇಡಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ಸಮಯ ಮತ್ತು ಅವಕಾಶಗಳಿರುತ್ತವೆ.


Click it and Unblock the Notifications
