ಲೋಕಸಭಾ ಚುನಾವಣೆಗೆ ರಣತಂತ್ರ ಹೆಣೆಯಲು ಪಾಟ್ನಾದಲ್ಲಿ ಸಭೆ ಸೇರಲಿವೆ ವಿರೋಧ ಪಕ್ಷಗಳು
ನವದೆಹಲಿ, ಮೇ. 28: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿನ ಭರ್ಜರಿ ಗೆಲುವಿನ ಖುಷಿಯಲ್ಲಿರುವ ಕಾಂಗ್ರೆಸ್ ಈಗ ವಿರೋಧ ಪಕ್ಷಗಳನ್ನು ಒಂದುಗೂಡಿಸಿ, ಕಾರ್ಯತಂತ್ರ ಹೆಣೆಯಲು ಜೂನ್ 12 ರಂದು ಪಾಟ್ನಾದಲ್ಲಿ ಸಭೆ ನಡೆಸಲಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಜಂಟಿ ಕಾರ್ಯತಂತ್ರವನ್ನು ಚರ್ಚಿಸಲು ಮತ್ತು ವಿಪಕ್ಷಗಳ ಬಗ್ಗೆ ನಿರ್ಧರಿಸಲು ಈ ಸಭೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳ ಒಗ್ಗಟ್ಟಿನ ಸಂವಾದಕರಾಗಿ ಕಾರ್ಯನಿರ್ವಹಿಸಲು ಸ್ವಯಂಪ್ರೇರಿತರಾಗಿ ಅಖಾಡಕ್ಕೆ ಇಳಿಸಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯನ್ನು ಭೇಟಿಯಾದ ನಂತರ ದಿನಾಂಕವನ್ನು ನಿರ್ಧರಿಸಲಾಯಿತು.

ನಿತೀಶ್ ಕುಮಾರ್ ಅವರು ಎಲ್ಲಾ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಟ್ಟಿಗೆ ತರಲು ಯೋಜಿಸುತ್ತಿದ್ದಾರೆ. ಇದುವರೆಗೆ ಈ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಕಾಂಗ್ರೆಸ್ ಜೊತೆಗೆ ಸೇರಲು ಒಪ್ಪಿಸಿದ್ದಾರೆ.
ಸಿಎಂ ನಿತೀಶ್ ಕುಮಾರ್ ಅವರು ತಮ್ಮ ಉಪ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ನಾಯಕ ಶರದ್ ಪವಾರ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಾಯಕತ್ವವನ್ನು ಎದುರಿಸಲು ವಿರೋಧ ಪಕ್ಷದ ಶಕ್ತಿಯನ್ನು ಒಂದುಗೂಡಿಸುವತ್ತ ತಮ್ಮ ಚಿತ್ತ ಹರಿಸಿದ್ದಾರೆ. ಇನ್ನು, ಕಾಂಗ್ರೆಸ್, ಎಡ ಪಕ್ಷಗಳು, ಟಿಎಂಸಿ, ಎಸ್‌ಪಿ ಮತ್ತು ಎಎಪಿ ಸೇರಿದಂತೆ 20 ವಿರೋಧ ಪಕ್ಷಗಳು ಒಗ್ಗೂಡಿ ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಿದ್ದಾರೆ.












Click it and Unblock the Notifications