ಜಿಎಸ್ ಟಿ ಕಾರ್ಯಕ್ರಮದಲ್ಲಿ ವಿಪಕ್ಷಗಳು ಭಾಗವಹಿಸಲ್ಲ, ಇಲ್ಲಿದೆ ಕಾರಣ
ನವದೆಹಲಿ, ಜೂನ್ 26: ಜಿಎಸ್ ಟಿ ಜಾರಿಯ ಸಂಬಂಧ ಜೂನ್ ಮೂವತ್ತರಂದು ರಾತ್ರಿ ಕೇಂದ್ರ ಸರಕಾರ ಆಯೋಜಿಸಲು ಉದ್ದೇಶಿಸಿರುವ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳು ಭಾಗವಹಿಸದಿರಲು ನಿರ್ಧರಿಸಿದಂತಿದೆ. ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ಆ ದಿನದ ಕಾರ್ಯಕ್ರಮ ಭಾಗವಹಿಸುವ ಸಾಧ್ಯತೆ ಇಲ್ಲ ಎದು ಮೂಲಗಳು ತಿಳಿಸಿವೆ.
ಪ್ರಧಾನಿ ಹಾಗೂ ರಾಷ್ಟ್ರಪತಿ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಮಾಜಿ ಪ್ರಧಾನಿಗಳಾದ ಮನ್ ಮೋಹನ್ ಸಿಂಗ್, ಎಚ್ ಡಿ ದೇವೇಗೌಡ ಈ ಸಂದರ್ಭದಲ್ಲಿ ಹಾಜರಿರಬೇಕು. ಆದರೆ ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನೇ ಬಾಯ್ಕಾಟ್ ಮಾಡಲು ನಿರ್ಧರಿಸಿವೆ.

ಯುಪಿಎ ಸರಕಾರ ಅಧಿಕಾರದಲ್ಲಿದ್ದ ಸಮಯದಲ್ಲಿ ಜಿಎಸ್ ಟಿ ಜಾರಿ ಆಲೋಚನೆ ಚಾಲ್ತಿಗೆ ಬಂದಿತ್ತು. ಆದರೆ ಈ ಯೋಜನೆಯ ಎಲ್ಲ ಶ್ರೇಯವನ್ನು ನರೇಂದ್ರ ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಪ್ರಣವ್ ಮುಖರ್ಜಿ ಯುಪಿಎ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದಾಗ ಜಿಎಸ್ ಟಿ ಜಾರಿಗೆ ಪ್ರಯೋಗ ಆರಂಭಿಸಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬ ಅಧಿಕೃತವಾಗಿ ಏನೂ ಹೇಳದಿದ್ದರೂ ಮೂಲಗಳ ಪ್ರಕಾರ ಭಾಗವಹಿಸುವ ಸಾಧ್ಯತೆ ಇಲ್ಲ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮೊನ್ನೆ ಶುಕ್ರವಾರ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಎನ್ ಡಿಎ ಮೈತ್ರಿಕೂಟದ ಯಾವೊಬ್ಬ ಸಚಿವರೂ ಪಾಲ್ಗೊಂಡಿರಲಿಲ್ಲ ಎಂಬುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications