Just in: ರಾಷ್ಟ್ರಪತಿ ಪ್ರಮಾಣವಚನ ಸಮಾರಂಭ, ಖರ್ಗೆಗೆ ಅಗೌರವ
ನವದೆಹಲಿ, ಜುಲೈ 25: ದ್ರೌಪದಿ ಮುರ್ಮು ಸೋಮವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಸಮಾರಂಭ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಅಗೌರವ ತೋರಿಸಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಗೆ ಸಮಾರಂಭದಲ್ಲಿ ಅಗೌರವ ಸಲ್ಲಿಸಲಾಗಿದೆ ಎಂದು ಪ್ರತಿಪಕ್ಷಗಳು ಪತ್ರ ಬರೆದು ರಾಜ್ಯಸಭಾ ಸಭಾಪತಿಗಳಿಗೆ ಸಲ್ಲಿಸಿವೆ. ಈ ಪತ್ರವನ್ನು ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಪತ್ರದಲ್ಲಿ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಖರ್ಗೆಯನ್ನು ಅವರ ಸ್ಥಾನಕ್ಕೆ ತಕ್ಕ ಆಸನದಲ್ಲಿ ಕೂರಿಸಿಲ್ಲ. ಉದ್ದೇಶಪೂರ್ವಕವಾಗಿ ಅಗೌರವ ತೋರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇಂದು ಗೌರವಾನ್ವಿತ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೊಂದಿರುವ ಸ್ಥಾನಕ್ಕೆ ಹೊಂದಿಕೆಯಾಗದ ಆಸನದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗಿದೆ. ಶಿಷ್ಟಾಚಾರವನ್ನು ಉಲ್ಲಂಘಿಸಿ ಅತ್ಯಂತ ಹಿರಿಯ ನಾಯಕನಿಗೆ ತೋರಿದ ಈ ಉದ್ದೇಶಪೂರ್ವಕ ಅಗೌರವದಿಂದ ನಮಗೆ ಆಘಾತವುಂಟಾಗಿದೆ. ಈ ಕುರಿತು ಪ್ರತಿಭಟನೆಯನ್ನು ವ್ಯಕ್ತಪಡಿಸಲು ನಾವು ಪತ್ರ ಬರೆಯುತ್ತಿದ್ದೇವೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.
ದ್ರೌಪದಿ ಮುರ್ಮು ಇಂದು ಭಾರತದ 15 ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಹುದ್ದೆಗೆ ಏರಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗಿದ್ದು, ರಾಷ್ಟ್ರಪತಿ ಹುದ್ದೆಗೇರಿದ ಎರಡನೇ ಮಹಿಳೆಯಾಗಿದ್ದಾರೆ.
Recommended Video
"ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಆಗಿರುವುದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೇ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ರಾಷ್ಟ್ರಪತಿ ಮುರ್ಮು ಸಂಸತ್ತಿನಲ್ಲಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಹೇಳಿದರು.












Click it and Unblock the Notifications