ಮಣಿಪುರ ಹಿಂಸಾಚಾರ: ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಲಿರುವ ವಿಪಕ್ಷಗಳ ನಾಯಕರು
ಇಂಫಾಲ, ಜುಲೈ. 30: ಪ್ರತಿಪಕ್ಷ ಮೈತ್ರಿಕೂಟದ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ದ 21 ಸಂಸದರ ನಿಯೋಗವು ಮಣಿಪುರಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಇದೆ ಜೊತೆಗೆ ಭಾನುವಾರ ರಾಜ್ಯಪಾಲರಾದ ಅನುಸೂಯಾ ಉಯಿಕ್ ಅವರನ್ನು ಭೇಟಿಯಾಗಲಿದ್ದಾರೆ.
ಮೊದಲ ದಿನ ಶನಿವಾರ ವಿಪಕ್ಷಗಳ ಸಂಸದರು ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಮತ್ತು ಚುರಾಚಂದ್‌ಪುರ ಪರಿಹಾರ ಶಿಬಿರಗಳಲ್ಲಿ ಘರ್ಷಣೆಯ ಸಂತ್ರಸ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭಾನುವಾರ ನಿಯೋಗವು ರಾಜ್ಯಪಾಲರಾದ ಅನುಸೂಯಾ ಉಯಿಕ್ ಅವರನ್ನು ಭೇಟಿ ಮಾಡಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷಗಳು ಮೇ 3 ರಿಂದ ರಾಜ್ಯವನ್ನು ಆವರಿಸಿರುವ ಹಿಂಸಾಚಾರದ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ನಾವು ಮಣಿಪುರಕ್ಕೆ ಬಂದಿದ್ದೇವೆ ಮತ್ತು ನಾವು ಅದನ್ನು ಸಂಸತ್ತಿನಲ್ಲಿ ಪ್ರತಿಬಿಂಬಿಸುತ್ತೇವೆ" ಎಂದು ಹೇಳಿದ್ದಾರೆ. ಜೊತೆಗೆ ವಿರೋಧ ಪಕ್ಷವು ಶಾಂತಿಯುತ ಪರಿಹಾರಕ್ಕೆ ಕರೆ ನೀಡಿದೆ. ಆದರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ವಿಪಕ್ಷಗಳ ಭೇಟಿ ನಾಟಕ ಎಂದು ಟೀಕಿಸಿದೆ.
ಕಾಂಗ್ರೆಸ್ ಸಂಸದ ಗೌರವ್ ಗೊಗೋಯ್, "ಪ್ರಧಾನಿ ಅವರು ಸರ್ವಪಕ್ಷ ನಿಯೋಗವನ್ನು ಮುನ್ನಡೆಸಲು ಬಯಸಿದರೆ, ನಾವು ಅದರ ಭಾಗವಾಗಿರಲು ಸಂತೋಷಪಡುತ್ತೇವೆ. ಕೊನೆಗೆ ಶಾಂತಿ ಸ್ಥಾಪನೆಯಾಗಬೇಕೆಂದು ನಾವು ಯಾವಾಗಲೂ ಹೇಳುತ್ತೇವೆ. ಪ್ರತಿಪಕ್ಷಗಳು ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡಲು ಪ್ರಯತ್ನಿಸುತ್ತಿಲ್ಲ" ಎಂದು ಅವರ ಅಧೀರ್ ಚೌಧರಿ ಅವರ ಮಾತನ್ನು ಮತ್ತೆ ಪುನರುಚ್ಚರಿಸಿದ್ದಾರೆ.
ಆದರೆ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷಗಳ ಭೇಟಿಯನ್ನು "ಕೇವಲ ಪ್ರದರ್ಶನ" ಎಂದು ಆರೋಪಿಸಿದ್ದಾರೆ. ಹಿಂದಿನ ಸರ್ಕಾರಗಳಲ್ಲಿ ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ಪ್ರತಿಪಕ್ಷಗಳು ಈಶಾನ್ಯ ರಾಜ್ಯದ ಬಗ್ಗೆ ಕಾಳಜಿ ವಹಿಸಲಿಲ್ಲ. ಮಣಿಪುರವು ತಿಂಗಳುಗಟ್ಟಲೆ ಮುಚ್ಚಲ್ಪಟ್ಟಾಗ, ಅವರು ಒಂದು ಮಾತನ್ನೂ ಮಾತನಾಡಲಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಆರೋಪಿಸಿದ್ದಾರೆ.

ಬಿಜೆಪಿ ನಾಯಕ ಅಜಯ್ ಅಲೋಕ್, "ಐಎನ್‌ಡಿಐಎ ನಿಯೋಗ ಮಣಿಪುರ ಪ್ರವಾಸೋದ್ಯಮಕ್ಕೆ ತೆರಳಿದೆ. ಅವರು ಸಂಸತ್ತಿನಲ್ಲಿ ಚರ್ಚೆ ನಡೆಸುವಂತಿಲ್ಲ, ಮಣಿಪುರದಲ್ಲಿ ಅವರು ಯಾವ ಮೌಲ್ಯಮಾಪನ ನಡೆಸುತ್ತಾರೆ..? ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ" ಎಂದು ಆರೋಪಿಸಿದ್ದಾರೆ.
'ಜನರ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಮಣಿಪುರಕ್ಕೆ ಭೇಟಿ ನೀಡಿದ್ದೇವೆ'
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, "I.N.D.I.A. ಮೈತ್ರಿಕೂಟವು ನಿರಂತರವಾಗಿ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಏಕೈಕ ನಿಯೋಗವಾಗಿದೆ. ಪ್ರಧಾನಿ ಅವರು ಸರ್ವಪಕ್ಷ ನಿಯೋಗವನ್ನು ಮುನ್ನಡೆಸಲು ಬಯಸಿದರೆ, ನಾವು ಅದರ ಭಾಗವಾಗಿರುತ್ತೇವೆ. ಪಶ್ಚಿಮ ಬಂಗಾಳ, ಜಾರ್ಖಂಡ್, ಕೇರಳ ಮತ್ತು ತಮಿಳುನಾಡಿನ ರಾಜಕೀಯ ಪಕ್ಷಗಳು ಜನರೊಂದಿಗೆ ಸಂವಾದ ನಡೆಸಲು ಬಯಸುತ್ತಿವೆ ಮತ್ತು ಅವರ ಕಳವಳಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕೆಂದು ನಾವು ಬಯಸುತ್ತೇವೆ" ಎಂದು ತಿಳಿಸಿದ್ದಾರೆ.
"ನಾವು ಒಟ್ಟು ನಾಲ್ಕು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದೇವೆ. ಚುರಾಚಂದ್‌ಪುರದಲ್ಲಿ ಎರಡು, ಇಂಫಾಲ್‌ನಲ್ಲಿ ಒಂದು ಮತ್ತು ಮೊಯಿರಾಂಗ್‌ನಲ್ಲಿ ಒಂದು. ಶಿಬಿರಕ್ಕೆ ಭೇಟಿ ನೀಡಿದ್ದೇವೆ. ಪ್ರತಿಯೊಬ್ಬರೂ ಶಾಂತಿಯನ್ನು ಬಯಸುತ್ತಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಬಯಸುತ್ತಾರೆ. ನಾವು ನಮ್ಮ ಎರಡನೇ ತಂಡವನ್ನು ಭೇಟಿ ಮಾಡಿ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತೇವೆ. ನಾವು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಮಣಿಪುರ ಘಟನೆ ವಿರೋಧಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆ
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸತಾನಾ ಪಟ್ಟಣದಲ್ಲಿ ಮಣಿಪುರದಲ್ಲಿ ಮೇ 4 ರಂದು ಇಬ್ಬರು ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಯ ವಿರುದ್ಧ ನಡೆದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಕನಿಷ್ಠ 10 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.












Click it and Unblock the Notifications