ಅಖಿಲೇಶ್ ಬಿಟ್ಟು ಎನ್‌ಡಿಎ ಮೈತ್ರಿ ಕೂಟ ಸೇರಿದ ಓಪಿ ರಾಜ್‌ಭರ್!
ಲಕ್ನೋ, ಜುಲೈ 16; ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಎಸ್‌ಬಿಎಸ್‌ಪಿಯ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಮುರಿದುಕೊಂಡು ಎನ್‌ಡಿಎ ಮೈತ್ರಿಕೂಟ ಸೇರಿದ್ದದಾರೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಇದು ಮಹತ್ವ ಪಡೆದಿದೆ.
ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಓಂ ಪ್ರಕಾಶ್ ರಾಜ್‌ಭರ್ ಎನ್‌ಡಿಎ ಮೈತ್ರಿಕೂಟ ಸೇರಿದ್ದಾರೆ. ಈ ಮೂಲಕ ಅವರು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಿಂದ ದೂರವಾಗಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಎಸ್‌ಬಿಎಸ್‌ಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಎರಡೂ ಪಕ್ಷಗಳಿಗೂ ಸಹ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಿತ್ತು. ಜುಲೈ ಆರಂಭದಲ್ಲಿ ಮೈತ್ರಿ ಕೊನೆಗೊಳಿಸುವುದಾಗಿ ಎಸ್‌ಬಿಎಸ್‌ಪಿ ಘೋಷಣೆ ಮಾಡಿತ್ತು.
ಹಲವಾರು ಜನರು ಪಕ್ಷ ಬಿಟ್ಟಿದ್ದರು; ಕೆಲವು ದಿನಗಳ ಹಿಂದೆ ಎರಡು ಡಜನ್‌ಗೂ ಅಧಿಕ ನಾಯಕರು ಓಂ ಪ್ರಕಾಶ್ ರಾಜ್‌ಭರ್ ನೇತೃತ್ವದ ಎಸ್‌ಬಿಎಸ್‌ಪಿ ಪಕ್ಷವನ್ನು ತೊರೆದಿದ್ದರು. ಇವರಲ್ಲಿ ಸಂಸ್ಥಾಪಕ ಸದಸ್ಯ ಮತ್ತು ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮಹೇಂದ್ರ ರಾಜ್‌ಭರ್ ಸಹ ಸೇರಿದ್ದರು.
ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಮತ್ತು ಎಸ್‌ಬಿಎಸ್‌ಪಿ ನಡುವೆ ಹಲವು ಅಸಮಾಧಾನವಿತ್ತು. ಎಸ್‌ಬಿಎಸ್‌ಪಿಯ ಹಲವು ನಾಯಕರು ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷವನ್ನು ಸೇರಿದ್ದರು. ಈಗ ಎಸ್‌ಬಿಎಸ್‌ಪಿ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದೆ.
ಪಕ್ಷವನ್ನು ತೊರೆದಿದ್ದ ಮಹೇಂದ್ರ ರಾಜ್‌ಭರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಓಂ ಪ್ರಕಾಶ್ ರಾಜ್‌ಭರ್ ಕೇವಲ ಹಣ ಸಂಗ್ರಹದಲ್ಲಿ ನಿರತರಾಗಿದ್ದಾರೆ. 2002ರಲ್ಲಿ ನಾವು ಬಡವರು, ದಲಿತರು ಮತ್ತು ವಂಚಿತರ ಪರವಾಗಿ ಕೆಲಸ ಮಾಡಲು ಪಕ್ಷವನ್ನು ಸ್ಥಾಪನೆ ಮಾಡಿದೆವು. ಆದರೆ ಈಗ ಪಕ್ಷ ಹಣ ಸಂಗ್ರಹಕ್ಕೆ ಬಳಕೆಯಾಗುತ್ತಿದೆ" ಎಂದು ಆರೋಪ ಮಾಡಿದ್ದರು.
ಎಸ್‌ಬಿಎಸ್‌ಪಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ಜುನ್ ಚೌಹಾಣ್, ರಾಜ್ಯ ಉಪಾಧ್ಯಕ್ಷ ಅವಧೇಶ್ ರಾಜ್‌ಭರ್ ಸೇರಿದಂತೆ ಎರಡು ಡಜನ್‌ಗೂ ಅಧಿಕ ನಾಯಕರು ಮಹೇಂದ್ರ ರಾಜ್‌ಭರ್ ನೇತೃತ್ವದಲ್ಲಿ ತೊರೆದಿದ್ದರು. ಈ ಕುರಿತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ರಾಜ್‌ಭರ್ ಮಾತನಾಡಿ, "ರಾಜೀನಾಮೆ ನೀಡಿದವರು ಸಮಾಜವಾದಿದ ಪಕ್ಷದಿಂದ ಪ್ರಭಾವಿತಗೊಂಡಿರಬಹುದು" ಎಂದು ಹೇಳಿದ್ದರು.
ಕ್ಯಾಬಿನೆಟ್ ತೊರೆದಿದ್ದರು; ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾದಾಗ ಓಂ ಪ್ರಕಾಶ್ ರಾಜ್‌ಭರ್ ಸಚಿವ ಸಂಪುಟದಲ್ಲಿದ್ದರು. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರು ಸಚಿವ ಸಂಪುಟ ತೊರೆದಿದ್ದರು. ಈ ಸಂದರ್ಭದಲ್ಲಿ ಅಮಿತ್ ಶಾ ಮತ್ತು ಬಿಜೆಪಿ ನರೇಂದ್ರ ಮೋದಿ ಜೊತೆಗಿರುವ ಫೋಟೋವನ್ನು ಟ್ವೀಟ್ ಮಾಡಿ ಉಭಯ ನಾಯಕರಿಗೂ ಅಭಿನಂದನೆ ಸಲ್ಲಿಕೆ ಮಾಡಿದ್ದರು.
ಈಗ ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಿರುವ ಓಂ ಪ್ರಕಾಶ್ ರಾಜ್‌ಭರ್, "ಸಾಮಾಜಿಕ ನ್ಯಾಯ, ದೇಶದ ಭದ್ರತೆ, ಉತ್ತಮ ಆಡಳಿ ಮತ್ತು ಎಲ್ಲಾ ವರ್ಗದ ಕಲ್ಯಾಣಕ್ಕಾಗಿ ಬಿಜೆಪಿಯ ಜೊತೆ ಹೋಗುತ್ತೇನೆ" ಎಂದು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.
ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಓಂ ಪ್ರಕಾಶ್ ರಾಜ್‌ಭರ್ ಬೇರೆ ಪಕ್ಷಗಳ ಜೊತೆ ಮೈತ್ರಿಗೆ ಬಯಸಿದ್ದರು. ಬುಧವಾರ ಅವರು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಭೇಟಿಯಾಗಿದ್ದರು.
ಜುಲೈ 18ರಂದು ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ಓಂ ಪ್ರಕಾಶ್ ರಾಜ್‌ಭರ್ ಪಾಲ್ಗೊಳ್ಳುವ ನಿರೀಕ್ಷೆ ಇದೆ. 2024ರ ಲೋಕಸಭೆ ಚುನಾವಣೆಗೂ ಮೊದಲು ಆಡಳಿತ ಪಕ್ಷದ ಶಕ್ತಿಯನ್ನು ತೋರಿಸಲು ಈ ಸಭೆಯನ್ನು ಕರೆಯಲಾಗಿದೆ.
ಇದೇ ಸಮಯದಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧದ ವಿರೋಧ ಪಕ್ಷಗಳ 2ನೇ ಸಭೆ ನಡೆಯಲಿದೆ. ಸುಮಾರು 42 ಪಕ್ಷಗಳಿಗೆ ಆಹ್ವಾನ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.












Click it and Unblock the Notifications