ರೈಲು ಅಪಘಾತದ ಶವಗಳನ್ನು ಇರಿಸಿದ್ದ ಶಾಲೆ ಪೀಸ್ ಪೀಸ್!
ಒಡಿಶಾ: ಭಾರತದ ಇತಿಹಾಸದಲ್ಲಿ ಅತ್ಯಂತ ಭೀಕರ ರೈಲು ದುರಂತ ಎಂದು ಕರೆಸಿಕೊಂಡ ಬಾಲಸೋರ್ ಟ್ರೈನ್ ಆಕ್ಸಿಡೆಂಟ್ ಇದೀಗ ಮತ್ತೆ ಸುದ್ದಿಯಾಗಿದೆ. ಆದರೆ ಈ ಬಾರಿ ಸಾವಿನ ಕಾರಣಕ್ಕೆ ಅಲ್ಲ. ಒಡಿಶಾ ಸರ್ಕಾರ ಕೈಗೊಂಡ ನಿರ್ಧಾರದ ಕಾರಣಕ್ಕೆ ಸದ್ದು ಮಾಡುತ್ತಿದೆ. ರೈಲು ಅಪಘಾತದ ನಂತರ ಶವ ಇಟ್ಟಿದ್ದ ಶಾಲೆಯನ್ನೇ ಸರ್ಕಾರ ಪೀಸ್ ಪೀಸ್ ಮಾಡ್ತಿದೆ!
ಹೌದು, ಜೂನ್ 2ರಂದು ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ್ದ 3 ರೈಲುಗಳ ಅಪಘಾತದಲ್ಲಿ 288 ಜನ ಮೃತಪಟ್ಟಿದ್ದರು. 1000ಕ್ಕೂ ಹೆಚ್ಚು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ನರಳುತ್ತಿದ್ದಾರೆ. ಆದರೆ ಇತ್ತ ಘಟನೆ ನಡೆದಾಗ ಮೃತಪಟ್ಟವರ ಶವ ಇಟ್ಟಿದ್ದ ಶಾಲೆಯನ್ನ ಕೆಡವಿ ಹಾಕಲು ಒಡಿಶಾ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆ ರೈಲು ಅಪಘಾತದಲ್ಲಿ ಮೃತಪಟ್ಟವರ ಶವ ಇಟ್ಟಿದ್ದ ಬಹನಾಗ ಹೈಸ್ಕೂಲ್ ಕಟ್ಟಡ ಒಡೆದು ಹಾಕುವ ಕೆಲಸ ಆರಂಭವಾಗಿದೆ. ಹಾಗಾದ್ರೆ ಒಡಿಶಾ ಸರ್ಕಾರ ದಿಢೀರ್ ಇಂತಹ ಕ್ರಮವನ್ನ ಕೈಗೊಂಡಿದ್ದು ಯಾಕೆ? ಕಾರಣ ರೋಚಕವಾಗಿದೆ ಮುಂದೆ ಓದಿ.

ಭೂತ & ಆತ್ಮದ ಭಯಕ್ಕೆ ಶಾಲೆ ಧ್ವಂಸ?
ಅಷ್ಟಕ್ಕೂ ರೈಲು ದುರಂತದ ನಂತರ ಶಾಲೆಯನ್ನು ತಾತ್ಕಾಲಿಕ ಶವಾಗಾರವಾಗಿ ಪರಿವರ್ತನೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ ಭೂತಗಳ ಭಯ ಮತ್ತು ಆತ್ಮಗಳ ಭಯದ ಕಾರಣ ವಿದ್ಯಾರ್ಥಿಗಳು ಶಾಲೆಗೆ ಬರಲು ಹಿಂದೇಟು ಹಾಕಿದ್ದರು. ಈ ಮಧ್ಯೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇಂಥ ಮೂಢ ನಂಬಿಕೆ ನಂಬಬೇಡಿ, ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಮನವಿ ಮಾಡಿದ್ದರೂ ವರ್ಕೌಟ್ ಆಗಿರಲಿಲ್ಲ. ಹೊಸ ಶಾಲೆ ಬೇಕೆಂದು ಪಟ್ಟು ಹಿಡಿದಿದ್ದರು ಪೋಷಕರು.
ಕಟ್ಟಡ ಕೆಡವಿದ್ದರೂ ಸಿಕ್ಕಿದೆ ಸಿಹಿಸುದ್ದಿ!
ಈ ವಿಚಾರವನ್ನ ಕಂಟ್ರೋಲ್ ಮಾಡಲು ಎಷ್ಟೇ ಪ್ರಯತ್ನಿಸಿದರೂ ಪೋಷಕರು & ಮಕ್ಕಳು ಶಾಲೆಗೆ ಬರಲು ಒಪ್ಪಲೇ ಇಲ್ಲ. ತಾತ್ಕಾಲಿಕ ಶವಾಗಾರವನ್ನಾಗಿ ಮಾಡಿದ್ದ ಶಾಲೆ ನೆಲಸಮ ಮಾಡುವಂತೆ ಒತ್ತಾಯಿಸಿದ್ದರು. ಭಯದಲ್ಲೇ ನಾವು ಶಾಲೆಯಲ್ಲಿ ಪಾಠ ಕಲಿಯಲ್ಲಿ ಅಂತಾ ಮಕ್ಕಳು ಹಠ ಮಾಡಿದ್ದರು. ಕೊನೆಗೆ ಜನರ ಒತ್ತಡಕ್ಕೆ ಒಪ್ಪಿಗೆ ಸೂಚಿಸಿದ ಒಡಿಶಾ ಸರ್ಕಾರ ಶಾಲೆ ಕಟ್ಟಡ ಕೆಡವಲು ಮುಂದಾಗಿದೆ. ಅಲ್ಲದೆ ಜೊತೆಗೆ ಮತ್ತೊಂದು ಸಿಹಿಸುದ್ದಿ ಕೂಡ ಸಿಕ್ಕಿದೆ. ಹಾಗಾದ್ರೆ ಏನದು ಸಿಹಿಸುದ್ದಿ? ಆ ಬಗ್ಗೆ ಪೂರ್ಣ ಮಾಹಿತಿ ಮುಂದೆ ನೀಡಲಾಗಿದೆ ಓದಿ.

ವಿದ್ಯಾರ್ಥಿಗಳು, ಪೋಷಕರಿಗೆ ಲಾಟರಿ!
ಶಾಲಾ ವ್ಯವಸ್ಥಾಪಕ ಸಮಿತಿ ಸದಸ್ಯರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಶಾಲೆ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಯಿತು. ಅಲ್ದೆ 65 ವರ್ಷಗಳಷ್ಟು ಹಳೆಯದಾದ ಈ ಶಾಲಾ ಕಟ್ಟಡದಲ್ಲಿ ಮಕ್ಕಳು ಓದಲು ಭಯದಲ್ಲೇ ತೆರಳಬೇಕಿತ್ತು. ಜೂನ್ 16ರಿಂದ ಶಾಲೆಗೆ ಬರಲು ಮಕ್ಕಳು ಭಯಪಡುವಂತಾಗಿತ್ತು. ಶಾಲಾ ಕಟ್ಟಡದಲ್ಲಿ ಇಷ್ಟೊಂದು ಮೃತದೇಹಗಳನ್ನ ಇಟ್ಟಿದ್ದು ಅವರು ಮರೆಯುವುದು ಕಷ್ಟವಾಗಲಿದೆ ಎಂಬ ಮಾತು ಕೂಡ ಕೇಳಿಬಂದಿತ್ತು. ಹೀಗಾಗಿಯೇ ಹೊಸ ಕಟ್ಟಡವನ್ನ ಅದೇ ಜಾಗದಲ್ಲಿ ಕಟ್ಟಲು ಒಡಿಶಾ ಸರ್ಕಾರ ಮುಂದಾಗಿದೆ. ಇನ್ನೊಂದ್ಕಡೆ ಮಕ್ಕಳಿಗೆ ಹೊಸ ಕಟ್ಟಡ ಕೂಡ ಸಿಗಲಿದ್ದು ಡಬಲ್ ಖುಷಿ ಸಿಕ್ಕಂತಾಗಿದೆ.
3 ರೂಂಗೆ ಮಾತ್ರ ಅನುಮತಿ ಇತ್ತು!
ಇನ್ನು ರೈಲು ದುರಂತ ನಡೆದ ಸಂದರ್ಭದಲ್ಲಿ ಮತ್ತೊಂದು ಎಡವಟ್ಟು ಕೂಡ ನಡೆದು ಹೋಗಿತ್ತು. ಅದೇನೆಂದರೆ ರೈಲು ದುರಂತದಲ್ಲಿ ಮೃತಪಟ್ಟವರ ಪೈಕಿ, ಪ್ರಯಾಣಿಕರ ಶವ ಇಡಲು ಶಾಲೆಯ 3 ಕೊಠಡಿಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಶಾಲಾ ಸಮಿತಿಯು ಕೇವಲ 3 ತರಗತಿಗಳಲ್ಲಿ ಶವ ಇಡಲು ಅನುಮತಿ ನೀಡಿತ್ತು, ಆದರೆ ನಂತರ ಜಿಲ್ಲಾಡಳಿತವು ಮೃತ ದೇಹಗಳನ್ನ ಗುರುತಿಸಲು ತೆರೆದ ಸಭಾಂಗಣದಲ್ಲಿ ಇರಿಸಿತ್ತು. ಇದೇ ವಿಚಾರಕ್ಕೆ ಮಕ್ಕಳ ಪೋಷಕರು ಹಾಗೂ ಇದೇ ಶಾಲೆಯಲ್ಲಿ ಓದಬೇಕಿದ್ದ ಮಕ್ಕಳು ಭಯಪಟ್ಟಿದ್ದರು.
ಒಟ್ನಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಈಗ ಒಡಿಶಾದಲ್ಲಿ ಹೊಸದಾಗಿ ಶಾಲೆ ಕಟ್ಟಡವನ್ನೇ ಕಟ್ಟಿಸಬೇಕಾದ ಪರಿಸ್ಥಿತಿ ಬಂದಿದೆ. ಹಾಗೇ ರೈಲು ಅಪಘಾತದ ಬಳಿಕ ಶವಗಳನ್ನ ಇಟ್ಟಿದ್ದ ಶಾಲೆಯನ್ನ ದಿಢೀರ್ ಕೆಡವಲು ಮುಂದಾಗಿದ್ದ ಒಡಿಶಾ ಸರ್ಕಾರದ ಕ್ರಮ ದೇಶದ ಗಮನ ಸೆಳೆದಿತ್ತು. ಇದೀಗ ಅದಕ್ಕೆ ಉತ್ತರ ಕೂಡ ಸಿಕ್ಕಿದ್ದು, ಪೋಷಕರು & ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications