ಮರುಜನ್ಮ ಪಡೆದ ದಾದಿಯರು ಮರಳಿ ಗೂಡಿಗೆ
ಕೊಚ್ಚಿ, ಜು. 5 : ತಾಯಿ ನೆಲವನ್ನು ಮೆಟ್ಟುತ್ತಿದ್ದಂತೆ, ಮಳೆಯನ್ನು ಕುಡಿದ ಮಣ್ಣಿನ ಘಮಲು ಮೂಗಿಗೆ ಅಡರುತ್ತಿದ್ದಂತೆ, ಬಂಧುಗಳು ಬಂದು ಅಪ್ಪಿಕೊಳ್ಳುತ್ತಿದ್ದಂತೆ, ಉಗ್ರರ ಬಂದೂಕಿನ ನಳಿಕೆಯಿಂದ ಪಾರಾಗಿ ಬಂದ 46 ದಾದಿಯರ ಕಣ್ಣೀರು ಕಟ್ಟೆಯೊಡಿದಿತ್ತು. ಅದನ್ನು ನೋಡಿ ತೆಂಗಿನ ಗರಿಗಳು ಓಲಾಡುತ್ತ ತಟಕ ತಟಕನೆ ಪನ್ನೀರು ಸುರಿಸಿದ್ದವು.
ಐಎಸ್ಐಎಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಉಗ್ರರ ಮಾರಣಾಂತಿಕ ಹಿಡಿತದಿಂದ ಬಿಡಿಸಿಕೊಂಡು ಶನಿವಾರ ಭಾರತಕ್ಕೆ ಆಗಮಿಸಿದ ನರ್ಸ್ ಗಳಿಗೆ ಕೇರಳದ ಕೊಚ್ಚಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಸ್ವತಃ ಕೇರಳದ ಮುಖ್ಯಮಂತ್ರಿ ಊಮನ್ ಚಾಂಡಿ ಮತ್ತು ಇತರ ಸಚಿವರು ಅವರನ್ನು ಬರಮಾಡಿಕೊಂಡರು.
ಇರಾಕ್ ನ ಟಿಕ್ರಿಟ್ ನ ಆಸ್ಪತ್ರೆಯಲ್ಲಿ ರೋಗಿಗಳ ಶುಶ್ರೂಷೆ ಮಾಡುತ್ತಿದ್ದ ದಾದಿಯರಿಗೆ ಇದು ಮರುಜನ್ಮ. ಕೇರಳದ ಕೊಚ್ಚಿಗೆ ದಾದಿಯರು ಬಂದಿಳಿದಾಗ ಕಂಡುಬಂದ ದೃಶ್ಯಗಳ ವಿವರಣೆ ಪದಗಳಿಗೆ ಮೀರಿದಂಥವು. ಸುಮ್ಮನೆ ಚಿತ್ರಗಳನ್ನು ನೋಡುತ್ತಾ ಸಾಗಿರಿ.

ಕೇರಳ ಮುಖ್ಯಮಂತ್ರಿ ಊಮನ್ ಚಾಂಡಿ ಸ್ವಾಗತ
ಮುಂಬೈ ಮೂಲಕ ಕೊಚ್ಚಿಗೆ ಆಗಮಿಸಿದ 46 ದಾದಿಯರನ್ನು ಕೇರಳ ಮುಖ್ಯಮಂತ್ರಿ ಅವರು ಸ್ವತಃ ಸ್ವಾಗತಿಸಿದರು.

ಕಟ್ಟೆಯೊಡೆದ ಬಂಧುಗಳ ಕಣ್ಣೀರಿನ ಪ್ರವಾಹ
ಅಕ್ಕ ಜೀವಂತವಾಗಿ ಬರುತ್ತಾಳೋ ಇಲ್ಲವೋ ಅಂದುಕೊಂಡಿದ್ದ ಪ್ರೀತಿಯ ತಂಗಿಗೆ ಅಕ್ಕನ ಕಂಡಾಕ್ಷಣ ಸಂತೋಷ ಕಟ್ಟೆಯೊಡೆದಿತ್ತು.

ನನ್ನ ಮುದ್ದು ಕಂದ ಸುರಕ್ಷಿತವಾಗಿ ಬಂದೆಯಲ್ಲ
ಉಗ್ರರ ಹಿಡಿತದಿಂದ ಪಾರಾಗಿ ತವರಿಗೆ ಮರಳಿದೆ ಮುದ್ದು ಮಗಳಿಗೆ ಅಮ್ಮನ ಪ್ರೀತಿಯ ಚುಂಬನ.

ಪ್ರಾಮೀಸ್, ಇನ್ನೆಂದು ಅಲ್ಲಿಗೆ ಮರಳಲ್ಲ
ಇನ್ನೆಂದೂ ಭಾರತ ಬಿಟ್ಟು ಪರದೇಶಕ್ಕೆ ಮರಳಲ್ಲ ಅಂತ ವಾಗ್ದಾನ ನೀಡಿದ ಅಕ್ಕನಿಗೆ ತಂಗಿಯ ಆಲಿಂಗನ.

ಆ ನರಕವನ್ನು ಮರೆಯಲು ಸಾಧ್ಯವೇ ಇಲ್ಲ
ಉಗ್ರರ ಹಿಡಿತದಲ್ಲಿದ್ದಾಗ ಜೀವವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡ ಪ್ರತಿ ಘಳಿಗೆ ನರಕ ಯಾತನೆ, ಆ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ ಅಂದಿದ್ದಾರೆ ದಾದಿಯರು.

ದಾದಿಯರಿಗೆ ಕೇರಳಿಗರಿಂದ ಹಣ ವಿತರಣೆ
ಜೀವ ಉಳಿದರೆ ಸಾಕೆಂದು ಮರಳಿ ಬಂದಿರುವ ಪ್ರತಿ ದಾದಿಗೆ ನಾನ್ ರೆಸಿಡೆಂಟ್ ಕೇರಳೈಟ್ಸ್ ಅಫೇರ್ಸ್ ಅಧಿಕಾರಿಗಳು 5 ಸಾವಿರ ರು. ಹಂಚಿದರು ಮತ್ತು ಕ್ಯಾಬ್ ವ್ಯವಸ್ಥೆಯನ್ನೂ ಮಾಡಿದ್ದರು.

ಕೇಂದ್ರ ಸರಕಾರಕ್ಕೆ ಚಾಂಡಿ ಅಭಿನಂದನೆ
ಕೇರಳಕ್ಕೆ ಮರಳಲು ಸಹಕಾರ ನೀಡಿದ್ದಕ್ಕಾಗಿ ಊಮನ್ ಚಾಂಡಿ ಅವರು ಕೇಂದ್ರ ಸರಕಾರವನ್ನು ಅಭಿನಂದಿಸಿದ್ದಾರೆ. ಅವರ ಪುನರ್ವಸತಿಗಾಗಿ ಚಿಂತಿಸುವುದಾಗಿ ಹೇಳಿದ್ದಾರೆ.

ಅಪ್ಪ ಅಮ್ಮನ ಮಡಿಲಲ್ಲಿ ನಿರಾಳ ಭಾವ
ಕೇರಳಕ್ಕೆ ಮರಳಿ ಬಂದ ಮಗಳಿಗೆ ಅಮ್ಮನ ಗರ್ಭದಿಂದ ಮತ್ತೆ ಹುಟ್ಟಿ ಬಂದ ಅನುಭವ.












Click it and Unblock the Notifications