ಮೇಘಾಲಯದಲ್ಲಿ ಕಾಂಗ್ರೆಸ್ ಬಿಟ್ಟರೆ, ಎನ್ ಪಿ ಪಿಗೆ ಸಕತ್ ಚಾನ್ಸ್
ಶಿಲ್ಲಾಂಗ್, ಮಾರ್ಚ್ 03: ಮೇಘಗಳ ಆವಾಸ ಸ್ಥಾನ ಮೇಘಾಲಯದಲ್ಲಿ ಸರ್ಕಾರ ರಚನೆ ಸರ್ಕಸ್ ಕುತೂಹಲ ಮೂಡಿಸಿದೆ. ಬಿಜೆಪಿಗೆ ಸರ್ಕಾರ ರಚನೆ ಅವಕಾಶವಿಲ್ಲ ಎಂದು ಕಾಂಗ್ರೆಸ್ ಮುಖಂಡ ಕಮಲ್ ನಾಥ್ ಹೇಳಿದ್ದಾರೆ.
ಆದರೆ, ರಾಜಕೀಯ ವಿಶ್ಲೇಷಕರು ಕಾಂಗ್ರೆಸ್ ಮುನ್ನಡೆ ಪಡೆದರೂ ಸರ್ಕಾರ ರಚನೆಯಲ್ಲಿ ಮುಗ್ಗರಿಸುವ ಸಂಭವ ಹೆಚ್ಚು ಎಂದಿದ್ದಾರೆ. ಕಮಲ್ ನಾಥ್ ಹಾಗೂ ಸಿಪಿ ಜೋಶಿಗಿಂತ ಬಿಜೆಪಿಯ ಹಿಮತಾ ಬಿಸ್ವಾಗೆ ಇಲ್ಲಿನ ಒಳ-ಹೊರಗೂ ಪರಿಸ್ಥಿತಿ ಗೊತ್ತಿದೆ. ಹೀಗಾಗಿ, ಎನ್ ಪಿಪಿ ಹಾಗೂ ಬಿಜೆಪಿ ಮೈತ್ರಿ ಸಾಧ್ಯವಿದೆ ಎಂದು ಹೇಳಿದ್ದಾರೆ.
ಮೇಘಾಲಯದಲ್ಲಿ ಸದ್ಯದ ಮಾಹಿತಿಯಂತೆ, 59 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 23 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎನ್‌ಪಿಪಿ 15 ಕ್ಷೇತ್ರಗಳಲ್ಲಿ, ಬಿಜೆಪಿ 4 ಹಾಗೂ ಇತರರು 17 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
4.30 ಗಂಟೆಗೆ ಫಲಿತಾಂಶ ಗೆಲುವು : 45/59 : ಕಾಂಗ್ರೆಸ್ 16, ಎನ್ ಪಿಪಿ 13, ಬಿಜೆಪಿ 2 ಸ್ಥಾನಗಳು. 2013ರಲ್ಲಿ ಕಾಂಗ್ರೆಸ್ 28, ಎನ್ ಪಿಪಿ 2 ಸ್ಥಾನಗಳಿಸಿತ್ತು.

ಸರ್ಕಾರ ರಚನೆಯ ವಿಶ್ವಾಸದಲ್ಲಿ ಕೊನ್ರಾಡ್ ಸಂಗ್ಮಾ
ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಸ್ಥಾಪಕ ಪಿ.ಎ ಸಂಗ್ಮಾ ಅವರ ಪುತ್ರಿ ಅಗಾಥಾ ಸಂಗ್ಮಾ ಹಾಗೂ ಪುತ್ರ ಜೇಮ್ಸ್ ಸಂಗ್ಮಾ ಇಬ್ಬರು ಕ್ರಮವಾಗಿ ಡೌತ್ ಟುರಾ ಹಾಗೂ ಡಡೆಂಗ್ರೆ ಕ್ಷೇತ್ರಗಳಿಂದ ಜಯಭೇರಿ ಬಾರಿಸಿದ್ದಾರೆ. ಈ ನಡುವೆ ಎನ್ ಪಿಪಿಯ ಅಧ್ಯಕ್ಷರಾಗಿರುವ ಕೊನ್ರಾಡ್ ಸಂಗ್ಮಾ ಅವರು ಇತರೆ ಅಭ್ಯರ್ಥಿಗಳ ಬೆಂಬಲದಿಂದ ಸರ್ಕಾರ ರಚನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2010ರಿಂದ ಮುಕುಲ್ ಸಂಗ್ಮಾ ಮುಖ್ಯಮಂತ್ರಿ
2003ರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದು, 2010ರಿಂದ ಮುಕುಲ್ ಸಂಗ್ಮಾ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈ ಬಾರಿ ಸ್ವತಂತ್ರ ಅಭ್ಯರ್ಥಿಗಳು, ಇತರೆ ಪಕ್ಷಗಳ ಬೆಂಬಲದಿಂದ ಎನ್ ಪಿಪಿಯಿಂದ ಸರ್ಕಾರ ರಚನೆ ಮಾಡಿ, ಎನ್ ಪಿಪಿಯಿಂದಲೇ ಸಿಎಂ ಆಯ್ಕೆ ಮಾಡಲು ಬಿಜೆಪಿಯ ನಿಪುಣ ಹಿಮಂತಾ ಬಿಸ್ವಾ ಶರ್ಮ ಯತ್ನಿಸುತ್ತಿದ್ದಾರೆ.

ಅಹ್ಮದ್ ಪಟೇಲ್ ರಿಂದ ಯತ್ನ
ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಾಧ್ಯತೆಯಿರುವ ಎಲ್ಲಾ ಮಾರ್ಗಗಳನ್ನು ಹುಡುಕುತ್ತಿದೆ. ಗೋವಾದಲ್ಲಿ ಆದಂತೆ ಮೇಘಾಲಯದಲ್ಲಿ ಆಗಬಾರದು ಎಂಬ ಎಚ್ಚರಿಕೆ ವಹಿಸಲಾಗುತ್ತಿದೆ. ಶಿಲ್ಲಾಂಗ್ ಗೆ ಪಕ್ಷದ ಮುಖಂಡರಾದ ಅಹ್ಮದ್ ಪಟೇಲ್ ಹಾಗೂ ಕಮಲ್‍ನಾಥ್ ಅವರು ಆಗಮಿಸಿದ್ದಾರೆ. ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಗಿದ್ದಾರೆ.

ಬಿಜೆಪಿ ವಕ್ತಾರ ನಳೀನ್ ಕೊಹ್ಲಿ
ಮೇಘಾಲಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಸ್ಪಷ್ಟವಾಗಿ ಗೋಚರವಾಗುತ್ತಿದ್ದು, ಚುನಾವಣೋತ್ತರ ಮೈತ್ರಿಯನ್ನು ಸಾಧಿಸಲು ನಾವು ಮುಂದಾಗುತ್ತಿದ್ದೇವೆ. ಕಾಂಗ್ರೆಸ್ ವಿರೋಧಿ ಮತಗಳು ಎನ್ ಪಿಪಿ, ಯುಡಿಪಿ, ಬಿಜೆಪಿಗಳಿಗೆ ಹಂಚಿಹೋಗಿವೆ. ಜನಾಭಿಪ್ರಾಯ ಸ್ಪಷ್ಟವಾಗಿದೆ. ಆದ್ದರಿಂದ ಚುನಾವಣೋತ್ತರ ಮೈತ್ರಿಯ ಸಾಧ್ಯತೆಯಿದೆ ಎಂದು ಬಿಜೆಪಿ ವಕ್ತಾರ ನಳೀನ್ ಕೊಹ್ಲಿ ಹೇಳಿದ್ದಾರೆ.












Click it and Unblock the Notifications