ಕೆಲಸ ಮಾಡದಿದ್ದರೇ ಸಂಬಳವಿಲ್ಲ: ಹಿಂಸಾಚಾರದ ನಡುವೆ ಲಕ್ಷ ಉದ್ಯೋಗಿಗಳಿಗೆ ಮಣಿಪುರ ಸರ್ಕಾರದ ಎಚ್ಚರಿಕೆ
ಇಂಫಾಲ, ಜೂನ್. 27: ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದಲ್ಲಿ ಜನರು ಮನೆಯಿಂದ ಹೊರಬರಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಯಾವಾಗ ಎಲ್ಲಿಂದ ಗುಂಡಿನ ಸದ್ದು ಕೇಳಿಸುತ್ತದೆಯೋ? ಎಲ್ಲಿಂದ ಸಾವಿನ ಸುದ್ದಿ ಬರುತ್ತದೋ ಎಂಬ ಆತಂಕದಲ್ಲಿರುವವ ಸರ್ಕಾರಿ ನೌಕರರಿಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸರ್ಕಾರ ಕಚೇರಿಗೆ ಹಾಜರಾಗದ ತನ್ನ ಉದ್ಯೋಗಿಗಳಿಗೆ "ಕೆಲಸವಿಲ್ಲದಿದ್ದರೇ, ವೇತನವಿಲ್ಲ" ಎಂಬ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.
ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಹಿಂಸಾಚಾರದ ಪರಿಸ್ಥಿತಿಯಿಂದಾಗಿ ತಮ್ಮ ಅಧಿಕೃತ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಉದ್ಯೋಗಿಗಳ ವಿವರಗಳನ್ನು ಒದಗಿಸುವಂತೆ ಸರ್ಕಾರ ಸಾಮಾನ್ಯ ಆಡಳಿತ ಇಲಾಖೆಗೆ (GAD) ಸೂಚಿಸಿದೆ. ಈ ಬಗ್ಗೆ ಸಾಮಾನ್ಯ ಆಡಳಿತ ಇಲಾಖೆ ಕಾರ್ಯದರ್ಶಿ ಮೈಕೆಲ್ ಅಚೊಮ್ ಸೋಮವಾರ ರಾತ್ರಿ ಸುತ್ತೋಲೆ ಹೊರಡಿಸಿದ್ದಾರೆ. ಮಣಿಪುರ ಸರ್ಕಾರ ಒಂದು ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

"ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜೂನ್ 12 ರಂದು ನಡೆದ ಸಭೆ ಮತ್ತು ಪ್ರಕ್ರಿಯೆಗಳ ಪ್ಯಾರಾ 5-(12) ನಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಎಲ್ಲಾ ನೌಕರರು ಸಾಮಾನ್ಯ ಆಡಳಿತ ಇಲಾಖೆಯಿಂದ ತಮ್ಮ ಸಂಬಳವನ್ನು ಪಡೆಯುತ್ತಾರೆ. ಅಧಿಕೃತ ರಜೆ ಇಲ್ಲದೆ ತಮ್ಮ ಅಧಿಕೃತ ಕರ್ತವ್ಯಕ್ಕೆ ಹಾಜರಾಗದ ಎಲ್ಲಾ ಉದ್ಯೋಗಿಗಳಿಗೆ ಯಾವುದೇ ಕೆಲಸ ಮಾಡದಿದ್ದರೇ ವೇತನವನ್ನು ನೀಡಲಾಗುವುದಿಲ್ಲ ಎಂದು ಮಣಿಪುರ ಸೆಕ್ರೆಟರಿಯೇಟ್ಗೆ ತಿಳಿಸಲಾಗಿದೆ" ಎಂದು ಹೇಳಿದೆ.
ಮುಂದುವರೆದು ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯಿಂದಾಗಿ ತಮ್ಮ ಅಧಿಕೃತ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದ ನೌಕರರ ವಿವರಗಳಾದ ಹುದ್ದೆ, ಹೆಸರು, ಇಐಎನ್, ಪ್ರಸ್ತುತ ವಿಳಾಸ, ಸಾಮಾನ್ಯ ಆಡಳಿತ ಇಲಾಖೆಗೆ ಮತ್ತು ಸಿಬ್ಬಂದಿ ಇಲಾಖೆಗೆ, ಜೂನ್ 28 ರೊಳಗೆ ಸೂಕ್ತ ಅಗತ್ಯ ಕ್ರಮ ತೆಗೆದುಕೊಳ್ಳಲು ವಿವರಗಳನ್ನು ಒದಗಿಸುವಂತೆ ಎಲ್ಲಾ ಆಡಳಿತ ಕಾರ್ಯದರ್ಶಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಈಶಾನ್ಯ ರಾಜ್ಯದಲ್ಲಿ ಇದುವರೆಗೆ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮೇ 3 ರಂದು ಮೊದಲು ಘರ್ಷಣೆಗಳು ಪ್ರಾರಂಭವಾದವು.

ಮಣಿಪುರದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೈತೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರಾದ ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಮತ್ತೊಂದು ಶೇಕಡಾ 40 ರಷ್ಟಿದ್ದಾರೆ ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಇತ್ತ, ಮಣಿಪುರದ ಮಹಿಳಾ ಕಾರ್ಯಕರ್ತರು ಹಿಂಸಾಚಾರ ಪೀಡಿತ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಯನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ನಮ್ಮ ಪ್ರಯತ್ನಗಳಿಗೆ ಅಡ್ಡಿಪಡಿಸುತ್ತಿದ್ದಾರೆ. ಜೀವ ಮತ್ತು ಆಸ್ತಿಯನ್ನು ಉಳಿಸಲು ನಿರ್ಣಾಯಕ ಸಂದರ್ಭಗಳಲ್ಲಿ ಭದ್ರತಾ ಪಡೆಗಳ ಸಮಯೋಚಿತ ಪ್ರತಿಕ್ರಿಯೆಗೆ ಇಂತಹ ಅನಗತ್ಯ ಹಸ್ತಕ್ಷೇಪವು ಹಾನಿಕಾರಕವಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.












Click it and Unblock the Notifications