ಒಡಿಶಾ: ಭೂಮಿ ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ಸಿಗುವವರೆಗೆ ಜಿಲ್ಲಾಧಿಕಾರಿಗೆ ಸಂಬಳವಿಲ್ಲ ಎಂದ ಹೈಕೋರ್ಟ್
ಭುವನೇಶ್ವರ, ಜ. 23: ಜಮೀನು ಕಳೆದುಕೊಂಡ ಗ್ರಾಮಸ್ಥರಿಗೆ ಪರಿಹಾರ ನೀಡುವವರೆಗೂ ಜಿಲ್ಲಾಧಿಕಾರಿಗಳಿಗೆ ಸಂಬಳ ನೀಡದಂತೆ ಹೈಕೋರ್ಟ್ ಆದೇಶಿಸಿರುವ ಅಪರೂಪದ ಘಟನೆ ಒಡಿಶಾದಲ್ಲಿ ನಡೆದಿದೆ.
ಹೌದು, ಆರು ದಶಕಗಳ ಹಿಂದೆ ನೀರಾವರಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡ 188 ಗ್ರಾಮಸ್ಥರು ಪರಿಹಾರ ಪಡೆಯುವವರೆಗೆ ಅಂಗುಲ್ ಜಿಲ್ಲಾಧಿಕಾರಿಗಳು ಮತ್ತು ಇತರ ಇಬ್ಬರು ಸಿಬ್ಬಂದಿಯ ವೇತನವನ್ನು ತಡೆಹಿಡಿಯುವಂತೆ ಒರಿಸ್ಸಾ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಒರಿಸ್ಸಾ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಬಿ.ಆರ್.ಸಾರಂಗಿ ಮತ್ತು ಬಿ.ಪಿ.ಸತಪತಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಐತಿಹಾಸಿಕ ತೀರ್ಪು ನೀಡಿದೆ. ಕುಕುರಪೇಟ ಕಿರು ನೀರಾವರಿ ಯೋಜನೆ ನಿರ್ಮಾಣದ ನಂತರ 188 ಗ್ರಾಮಸ್ಥರ ಜಮೀನು ಮುಳುಗಡೆಯಾಗಿದೆ. ಈ ಗ್ರಾಮಸ್ಥರಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಇವರೆಲ್ಲರು ಪರಿಹಾರ ಪಡೆಯುವವರೆಗೆ ಜಿಲ್ಲಾಧಿಕಾರಿಗಳ ವೇತನವನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ.

1961ರಲ್ಲಿ ಭೂಸ್ವಾಧೀನಪಡಿಸಿಕೊಂಡು 60 ವರ್ಷಗಳು ಕಳೆದರೂ ಇಲ್ಲಿಯವರೆಗೆ ಅರ್ಜಿದಾರರಿಗೆ ಪರಿಹಾರ ಮೊತ್ತ ಪಾವತಿಯಾಗದ ಕಾರಣ ಈ ನ್ಯಾಯಾಲಯವು ಜಿಲ್ಲಾಧಿಕಾರಿ, ಭೂಸ್ವಾಧೀನಾಧಿಕಾರಿಗಳ ವೇತನ ತಡೆಹಿಡಿದಿದೆ. ಅರ್ಜಿದಾರರಿಗೆ ಪರಿಹಾರ ನೀಡುವವರೆಗೆ ಅಂಗುಲ್ ಜಿಲ್ಲಾ ಪರಿಷತ್ತಿನ ಕಾರ್ಯನಿರ್ವಾಹಕ ಅಧಿಕಾರಿಗೂ ವೇತನ ಬಿಡುಗಡೆ ಮಾಡುವುದಿಲ್ಲ ಎಂದು ಹೈಕೋರ್ಟ್ ಕಟುವಾಗಿ ಎಚ್ಚರಿಕೆ ನೀಡಿ ಆದೇಶಿಸಿದೆ.
ಅಂಗುಲ್ ಜಿಲ್ಲೆಯ ಐದು ಗ್ರಾಮಗಳ ಸಂತ್ರಸ್ತ ಗ್ರಾಮಸ್ಥರು ಕಳೆದ 51 ವರ್ಷಗಳಿಂದ ಸಣ್ಣ ನೀರಾವರಿ ಯೋಜನೆಯಿಂದ ಮುಳುಗಡೆಯಾದ 62 ಎಕರೆ ಭೂಮಿಗೆ ಪರಿಹಾರವನ್ನು ಪಡೆಯಲು ಇನ್ನೂ ಕಾಯುತ್ತಿದ್ದಾರೆ. ಸುಮಾರು ಆರು ದಶಕಗಳ ಹಿಂದಿನಿಂದಲೂ ಇವರಿಗೆ ಪರಿಹಾರ ಮರೀಚಿಕೆಯಾಗಿದೆ.
ಜಮೀನು ಮುಳುಗಡೆಯಾಗಿದ್ದರೂ, ಜಮೀನು ಸ್ವಾಧೀನಪಡಿಸಿಕೊಳ್ಳುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸದೇ ಅನ್ಯಾಯ ಮಾಡಿದೆ. ಇದೇ ಕಾರಣಕ್ಕೆ ಇಷ್ಟು ವರ್ಷಗಳ ಕಾಲ ಜಮೀನು ಕಂದಾಯವನ್ನು ಗ್ರಾಮಸ್ಥರ ಹೆಸರಿಗೆ ದಾಖಲಿಸುವುದು ಮುಂದುವರಿದಿದೆ.












Click it and Unblock the Notifications