ದುಬಾರಿ ದಂಡ: ವಾಹನ ಸವಾರರಿಗೆ ಕೊಂಚ ಸಮಾಧಾನ ನೀಡಿದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 11: ಸಂಚಾರ ನಿಯಮ ಉಲ್ಲಂಘನೆಯ ದುಬಾರಿ ದಂಡದಿಂದ ಬೆಚ್ಚಿಬಿದ್ದಿರುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ತುಸು ನೆಮ್ಮದಿ ನೀಡಿದೆ. ಬಡ ವಾಹನ ಮಾಲೀಕರ ಬದುಕನ್ನೇ ಹಿಂಡುವಂತಹ ನಿಯಮಗಳ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಕೆಲವು ರಾಜ್ಯಗಳು ದಂಡದ ಮೊತ್ತವನ್ನು ಕಡಿಮೆಗೊಳಿಸುತ್ತಿವೆ.
ನೂತನ ಮೋಟಾರು ವಾಹನ ಕಾಯ್ದೆಯಡಿಯಲ್ಲಿನ ದಂಡದ ಮೊತ್ತ ಕಡ್ಡಾಯವಲ್ಲ. ಅದರ ಪ್ರಮಾಣವನ್ನು ತಕ್ಕಮಟ್ಟಿಗೆ ಕಡಿಮೆ ಮಾಡಲು ಮುಕ್ತ ಅವಕಾಶವಿದೆ. ರಾಜ್ಯ ಸರ್ಕಾರಗಳು ದಂಡದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
ಗುಜರಾತ್, ಮಹಾರಾಷ್ಟ್ರ ಮತ್ತು ಬಿಹಾರದಂತಹ ರಾಜ್ಯಗಳು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುವ ದಂಡದ ಮೊತ್ತ ಅತಿಯಾಗಿದೆ ಎಂಬ ಕಾರಣಕ್ಕೆ ಅದನ್ನು ಸಂಪೂರ್ಣವಾಗಿ ಜಾರಿಮಾಡಲು ಅಸಮ್ಮತಿ ಸೂಚಿಸಿದ್ದವು. ಅದರ ಬಳಿಕ ನಿತಿನ್ ಗಡ್ಕರಿ ಅವರು ಈ ಹೇಳಿಕೆ ನೀಡಿದ್ದಾರೆ. ವಾಹನ ಸವಾರರ ಮೇಲೆ ವಿಧಿಸುವ ದಂಡವು ಅವರು ಸಂಚಾರ ನಿಯಮಾವಳಿಗಳ ಪಾಲನೆಯನ್ನು ಶಿಸ್ತು ಕಲಿಯಲಿ ಎಂಬ ಉದ್ದೇಶವನ್ನು ಹೊಂದಿದೆಯೇ ವಿನಾ ಆದಾಯ ಸಂಗ್ರಹಿಸುವುದಲ್ಲ ಎಂದಿದ್ದಾರೆ.
Recommended Video

ರಾಜ್ಯಗಳಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು
'ಮೊದಲಿಗೆ ಮೋಟಾರ್ ವಾಹನ ಕಾಯ್ದೆಯು ನಮ್ಮ ಸಹವರ್ತಿ ಪಟ್ಟಿಯಲ್ಲಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕಾನೂನು ರಚಿಸಲು ಅಧಿಕಾರ ಹೊಂದಿವೆ. ಉಲ್ಲಂಘನೆಗೆ ತಕ್ಕಂತೆ ದಂಡ ಬದಲಾಗುತ್ತದೆ. ರಾಜ್ಯಗಳಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ' ಎಂದು ಗಡ್ಕರಿ ತಿಳಿಸಿದ್ದಾರೆ.

ವರ್ಷಕ್ಕೆ 5 ಲಕ್ಷ ರಸ್ತೆ ಅಪಘಾತ
'ಪ್ರತಿ ವರ್ಷ ಭಾರತದಲ್ಲಿ ಸುಮಾರು 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ ಎಂಬ ವರದಿ ಬಗ್ಗೆ ನಾನು ಅನೇಕ ಬಾರಿ ಉಲ್ಲೇಖಿಸಿದ್ದೇನೆ. ಇದರಲ್ಲಿ 1.5 ಲಕ್ಷಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ. ಜಗತ್ತಿನಲ್ಲಿ ಸಂಚಾರ ಅಪಘಾತಗಳಿಂದ ಸಾವಿಗಿಡಾಗುವ ಸಂಖ್ಯೆ ಭಾರತದಲ್ಲಿಯೇ ಹೆಚ್ಚು' ಎಂದಿದ್ದಾರೆ.

ದಂಡದ ಉದ್ದೇಶವೇ ಅಪಘಾತ ತಡೆ!
'ಈ ಅಪಘಾತಗಳಿಗೆ ಹಲವು ಕಾರಣಗಳಿರುತ್ತವೆ. ರಸ್ತೆ ಎಂಜಿನಿಯರಿಂಗ್, ರಸ್ತೆ ಅಪಘಾತಗಳು ಮತ್ತು ಆಟೋಮೊಬೈಲ್‌ಗೆ ಸಂಬಂಧಿಸಿದವು. ಆದರೆ ಮುಖ್ಯ ಸಮಸ್ಯೆಯೇನೆಂದರೆ ನಿಯಮ ಉಲ್ಲಂಘಿಸುವವರು ಕಾನೂನುಗಳನ್ನು ಗೌರವಿಸುವುದಿಲ್ಲ ಮತ್ತು ಅವರಿಗೆ ಅದರ ಬಗ್ಗೆ ಹೆದರಿಕೆಯೇ ಇರುವುದಿಲ್ಲ. ದಂಡ ಹೆಚ್ಚಳದ ಮುಖ್ಯ ಉದ್ದೇಶವೇ ಅಪಘಾತಗಳ ಸಂಖ್ಯೆ ಇಳಿಸುವುದು ಮತ್ತು ಜೀವಗಳನ್ನು ಉಳಿಸುವುದಾಗಿದೆ' ಎಂದು ಸಮರ್ಥನೆ ನೀಡಿದ್ದಾರೆ.

ಡಿಎಲ್ ಮಾಡಿಸಿಕೊಳ್ಳುತ್ತಿದ್ದಾರೆ
ಕಟ್ಟುನಿಟ್ಟಾಗಿ ಸಂಚಾರ ನಿಯಮ ಪಾಲಿಸಿ ಎಂದು ಮನವಿ ಮಾಡಿದ ಗಡ್ಕರಿ, 'ಜನರು ಕಾನೂನು ಉಲ್ಲಂಘಿಸದೆಯೇ ಇದ್ದರೆ ಅವರಿಗೆ ದಂಡ ಹಾಕುವುದಿಲ್ಲ. ಈ ಕಾಯ್ದೆಗೆ ಮಾಧ್ಯಮಗಳು ನೀಡಿರುವ ಮಹತ್ವವು ಸಾಕಷ್ಟು ನೆರವಾಗಿದೆ. ಅಪಾರ ಸಂಖ್ಯೆಯ ಜನರು ಈಗ ವಾಹನ ಪರವಾನಗಿ ಮಾಡಿಸಿಕೊಳ್ಳುವ ಸಲುವಾಗಿ ಆರ್‌ಟಿಓ ಕಚೇರಿಗಳ ಮುಂದೆ ನಿಲ್ಲುವುದು ಕಾಣಿಸುತ್ತಿದೆ. ಈ ಮುಂದೆ ಶೇ 30ಕ್ಕೂ ಹೆಚ್ಚು ಡಿಎಲ್‌ಗಳು ನಕಲಿಯಾಗಿದ್ದವು. ಈಗ ಅದೆಲ್ಲ ಬದಲಾಗುತ್ತಿದೆ' ಎಂದು ಹೇಳಿದ್ದಾರೆ.












Click it and Unblock the Notifications