ಕೋವ್ಯಾಕ್ಸಿನ್ ಲಸಿಕೆ ಪಡೆದ ಬಳಿಕ ನೋವು ನಿವಾರಕ ಮಾತ್ರೆಯ ಅಗತ್ಯವಿಲ್ಲ
ನವದೆಹಲಿ, ಜನವರಿ 06: ಕೋವ್ಯಾಕ್ಸಿನ್ ಲಸಿಕೆ ಪಡೆದ ಬಳಿಕ ಪ್ಯಾರಾಸಿಟಾಮಲ್ ಅಥವಾ ಇನ್ಯಾವುದೇ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಕೋವಾಕ್ಸಿನ್ ತೆಗೆದುಕೊಂಡ ನಂತರ ಜ್ವರ ನಿವಾರಕ ಅಥವಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಕೆಲವು ದಿನಗಳ ಹಿಂದೆ ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡಾಗ, ಅದರಲ್ಲೂ ಕೋವಿಶೀಲ್ಡ್ ತೆಗೆದುಕೊಂಡಾಗ ಕೆಲವರಲ್ಲಿ ಜ್ವರ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಕೆಲವರು ಜ್ವರ ನಿವಾರಕ ಪ್ಯಾರಾಸಿಟಾಮಲ್ ಅಥವಾ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಕೋವಾಕ್ಸಿನ್ ಲಸಿಕೆ ಪಡೆದುಕೊಂಡವರಿಗೆ ಇಂತಹ ಮಾತ್ರೆಗಳನ್ನು ಶಿಫಾರಸು ಮಾಡುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಈ ಕುರಿತು 30 ಸಾವಿರ ವ್ಯಕ್ತಿಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಶೇಕಡಾ 10ರಿಂದ 20ರಷ್ಟು ವ್ಯಕ್ತಿಗಳಲ್ಲಿ ಮಾತ್ರ ತೀವ್ರ ಜ್ವರ ಅಥವಾ ನೋವು ಕಂಡು ಬರುತ್ತದೆ. ಬಹುತೇಕ ಮಂದಿಯಲ್ಲಿ ಸ್ವಲ್ಪ ಮಟ್ಟಿಗೆ ಜ್ವರ ಕಂಡು ಬರುತ್ತದೆ. ಎರಡು ಅಥವಾ ಮೂರು ದಿನಗಳ ಬಳಿಕ ತಾನಾಗಿಯೇ ವಾಸಿಯಾಗುತ್ತದೆ. ಯಾವುದೇ ಅಗತ್ಯ ಇರುವುದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.

ವೈದ್ಯರನ್ನು ಸಂಪರ್ಕಿಸಬೇಕು
ಒಂದು ವೇಳೆ ನಿಮಗೆ ತೀವ್ರ ಜ್ವರ ಕಂಡುಬಂದರೆ, ವೈದ್ಯರನ್ನು ಸಂಪರ್ಕಿಸಬೇಕು ಎಂದು ಭಾರತ್ ಬಯೋಟೆಕ್ ಸಲಹೆ ನೀಡಿದೆ. ಕೋವಾಕ್ಸಿನ್ ಲಸಿಕೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯಾಗಿದೆ.
ಪ್ರಸ್ತುತ ಮಕ್ಕಳಿಗೆ ಕೋವಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತಿದ್ದು, ಕೆಲವು ಕೇಂದ್ರಗಳಲ್ಲಿ ಲಸಿಕೆ ತೆಗೆದುಕೊಂಡ ಮಕ್ಕಳಿಗೆ ಪ್ಯಾರಾಸಿಟಾಮಲ್ 500 ಎಂಜಿ ಮೂರು ಮಾತ್ರೆಗಳು ಶಿಫಾರಸು ಮಾಡುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಬಯೋಟೆಕ್ ಅಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದೆ.
ಇತರ ಕೋವಿಡ್ ಲಸಿಕೆಗಳನ್ನು ತೆಗೆದುಕೊಂಡ ನಂತರ ಪ್ಯಾರಾಸಿಟಾಮಲ್ ತೆಗೆದುಕೊಳ್ಳಲು ಶಿಫಾರಸು ಮಾಡಲಾಗುತ್ತದೆ. ಆದರೆ ಕೋವಾಕ್ಸಿನ್ ತೆಗೆದುಕೊಡ ನಂತರ ಪ್ಯಾರಾಸಿಟಾಮಲ್ ಸೇರಿದಂತೆ ನೋವು ನಿವಾರಕ ಮಾತ್ರೆಗಳ ಅಗತ್ಯ ಇರುವುದಿಲ್ಲ ಎಂದಿದೆ.
ರಾಜ್ಯದಲ್ಲಿ ಜನವರಿ 3 ರಿಂದ 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದ್ದು. ಕೋವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಲ್ಲಿ ಸೌಮ್ಯ ಪ್ರಮಾಣದ ಅಡ್ಡ ಪರಿಣಾಮಗಳು ಕಂಡು ಬರುವ ಸಾಧ್ಯತೆಗಳಿವೆ ಎಂದು ವೈದ್ಯರು ಹೇಳಿದ್ದಾರೆ.
ವಯಸ್ಕರಲ್ಲಿ ಕಂಡು ಬರುತ್ತಿರುವಂತೆಯೇ ಮಕ್ಕಳಲ್ಲೂ ಕೂಡ ಲಸಿಕೆ ಪಡೆದ ಜಾಗದಲ್ಲಿ ನೋವು, ಸೌಮ್ಯ ಜ್ವರ, ದೇಹದ ನೋವು, ಊತದಂತಹ ಅಡ್ಡಪರಿಣಾಮಗಳು ಕಂಡು ಬರಲಿದೆ ಎಂದು ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ ಈ ವರೆಗೂ ಚರ್ಮದ ದದ್ದುಗಳು, ಉಸಿರಾಟ ಸಮಸ್ಯೆ, ಕಡಿಮೆ ಬಿಪಿ, ಹೊಟ್ಟೆ ನೋವು, ವಾಂತಿಯಂತಹ ಸಮಸ್ಯೆಗಳು ಕಂಡು ಬಂದಿಲ್ಲ. ಲಸಿಕೆ ಪಡೆದವರ ಆರೋಗ್ಯ ಮೇಲ್ವಿಚಾರಣೆ ಮಾಡಲು ಲಸಿಕೆ ಪಡೆದುಕೊಂಡ ಸ್ಥಳದಲ್ಲಿ 30 ನಿಮಿಷ ಕಾಲ ಇರಿಸಿಕೊಳ್ಳಲಾಗುತ್ತದೆ. ಅಡ್ಡ ಪರಿಣಾಮಗಳು ಕಂಡು ಬಂದು ಇಂಟ್ರಾಮಸ್ಕುಲರ್ ಅಡ್ರಿನಾಲಿನ್ ಇಂಜೆಕ್ಷನ್ ನೀಡಿರುವ ಪ್ರಕರಣಗಳು ಅತ್ಯಂತ ಕಡಿಮೆಯಾಗಿದೆ.
ಲಸಿಕೆ ಪಡೆದಾದ "ಜ್ವರ ಮತ್ತು ದೇಹದ ನೋವು ಸಾಮಾನ್ಯವಾಗಿರುತ್ತದೆ. ಲಸಿಕೆ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮಗಳ ಕುರಿತು ಸರ್ಕಾರವು ಸಾಕಷ್ಟು ವರದಿಯನ್ನು ಪ್ರಕಟಿಸಿಲ್ಲ, ಆದರೆ, ಲಸಿಕೆ ಪಡೆದಾಗ ಸೀಮಿತ ಪ್ರಮಾಣದ ಅಡ್ಡಪರಿಣಾಮಗಳು ಸಾಮಾನ್ಯವಾಗಿರುತ್ತದೆ. ಲಸಿಕೆ ಪಡೆದವರಲ್ಲಿ ಇಲ್ಲಿಯವರೆಗೆ ಯಾವುದೇ ಸಾವುಗಳು ಸಂಭವಿಸಿಲ್ಲ.
ಇನ್ನು ಮುಂದೆ ಕೂಡ ದೊಡ್ಡ ಪ್ರಮಾಣದ ಸಮಸ್ಯೆಯಾಗುವುದಿಲ್ಲ ಎಂಬ ನಿರೀಕ್ಷೆ ಇದೆ ಎಂದು ಪೀಡಿಯಾಟ್ರಿಕ್ ಇಂಟರ್ವೆನ್ಷನಲ್ ಪಲ್ಮನಾಲಜಿ ಮತ್ತು ಸ್ಲೀಪ್ ಮೆಡಿಸಿನ್, ಆಸ್ಟರ್ ಸಿಎಂಐ ಆಸ್ಪತ್ರೆಯ ಸಲಹೆಗಾರ ಡಾ.ಶ್ರೀಕಾಂತ್ ಜೆಟಿ ಅವರು ಹೇಳಿದ್ದಾರೆ.
ಲಸಿಕೆ ಪಡೆದ ಸ್ಥಳದಲ್ಲಿ ನೋವು, ಊತ, ಕೆಂಪು, ತುರಿಕೆ, ತಲೆನೋವು, ಜ್ವರ, ದೇಹದ ನೋವು, ವಾಕರಿಕೆ, ವಾಂತಿ, ದದ್ದುಗಳು ಈ ಪಟ್ಟಿಯಲ್ಲಿದ್ದವು. ಇದಷ್ಟೇ ಅಲ್ಲದೆ, ತೀವ್ರತರ ಅಲರ್ಜಿ ಕೂಡ ಕಾಣಿಸಿಕೊಳ್ಳಬಹುದು ಎಂದು ಹೇಳಿತ್ತು.
ಯಾವುದೇ ಲಸಿಕೆ ಪಡೆದರೂ ಸಣ್ಣಪುಟ್ಟ ಅಡ್ಡ ಪರಿಣಾಮಗಳು ಸಾಮಾನ್ಯವಾಗಿರುತ್ತದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಮಕ್ಕಳ ತಜ್ಞರು ಎಂಆರ್ (ದಡಾರ ರುಬೆಲ್ಲಾ) ಲಸಿಕೆ ಅಭಿಯಾನವನ್ನು ಆರಂಭಿಸಿದಾಗಲೂ ಕೆಲವು ಅಡ್ಡಪರಿಣಾಮಗಳು ಎದುರಾಗಿತ್ತು. ಆದ್ದರಿಂದ, ಎಲ್ಲಾ ಆರೋಗ್ಯ ಕಾರ್ಯಕರ್ತರು ಇಂತಹ ಅಭಿಯಾನ ನಡೆಸಲು ತರಬೇತಿ ಪಡೆದಿದ್ದಾರೆ ಮತ್ತು ಸುಸಜ್ಜಿತರಾಗಿದ್ದಾರೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ.ಬಸವರಾಜ್ ಜಿವಿ ಅವರು ಹೇಳಿದ್ದಾರೆ.












Click it and Unblock the Notifications