ದೇಶದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ: ಬಿಜೆಪಿ ವಿರುದ್ಧ ತಿರುಗಿಬಿದ್ದ ಪವಾರ್
ಮುಂಬೈ, ಸೆಪ್ಟೆಂಬರ್ 05: ಜಿ 20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು 'President of Bharat' ಎಂದು ಉಲ್ಲೇಖಿಸಲಾಗಿದೆ. ಇದು ದೇಶದಾದ್ಯಂತ ಪರ-ವಿರೋಧದ ಚರ್ಚೆಗಳಿಗೆ ನಾಂಧಿ ಹಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ ನಾಯಕ ಶರದ್ ಪವಾರ್, 'ರಾಷ್ಟ್ರದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ' ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಸಭೆಯಲ್ಲಿ ಈ ವಿಚಾರದ ಕುರಿತು ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ.

28 ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕರೆದಿದ್ದಾರೆ.
'ದೇಶಕ್ಕೆ ಸಂಬಂಧಿಸಿದ ಹೆಸರಿನ ಬಗ್ಗೆ ಆಡಳಿತ ಪಕ್ಷವು ಏಕೆ ಗೊಂದಲಕ್ಕೊಳಗಾಗುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ' ಎಂದು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶರದ್ ಪವಾರ್ ತಿಳಿಸಿದ್ದಾರೆ.
ಸಂವಿಧಾನದಲ್ಲಿ ಭಾರತದ ಹೆಸರನ್ನು ಬದಲಾಯಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಶರದ್ ಪವಾರ್, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾರತ ಮೈತ್ರಿಕೂಟದ ಎಲ್ಲಾ ಪಕ್ಷದ ಮುಖ್ಯಸ್ಥರ ಸಭೆಯನ್ನು ಬುಧವಾರ ಕರೆದಿದ್ದಾರೆ ಎಂದು ಶರದ್ ಪವಾರ್ ಮಾಹಿತಿ ನೀಡಿದ್ದಾರೆ.
'ಸಭೆಯಲ್ಲಿ ಈ ಕುರಿತು ಬಗ್ಗೆ ಚರ್ಚೆ ನಡೆಯಲಿದೆ. ಆದರೆ, ದೇಶದ ಹೆಸರನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ. ಯಾರೂ ಹೆಸರನ್ನು ಬದಲಾಯಿಸಲು ಸಾಧ್ಯವಿಲ್ಲ' ಎಂದು ಎನ್‌ಸಿಪಿ ಮುಖ್ಯಸ್ಥರು ಹೇಳಿದ್ದಾರೆ.
ಜಿ 20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ 'President Of Bharat' ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆ ಆಕ್ರಮಣಕ್ಕೆ ಒಳಗಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
'ಇಂಡಿಯಾ ಮೈತ್ರಿಕೂಟವು ತನ್ನ ಹೆಸರನ್ನು ಭಾರತ್ ಎಂದು ಬದಲಾಯಿಸಿದರೆ ಬಿಜೆಪಿ 'ಭಾರತ್' ಎನ್ನುವ ಹೆಸರನ್ನು ಬದಲಾಯಿಸುತ್ತದೆಯೇ?' ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9 ರಿಂದ 10 ರ ವರೆಗೆ ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದೆ. ಯುಎಸ್ ಅಧ್ಯಕ್ಷ ಜೋ ಬಿಡನ್ ಸೇರಿದಂತೆ ವಿಶ್ವದಾದ್ಯಂತದ ಹಲವಾರು ರಾಷ್ಟ್ರಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.












Click it and Unblock the Notifications