Highways: ದೇಶದ 40,000 ಕಿಮೀ ಹೆದ್ದಾರಿಗೆ AI ಟಚ್, ನಿರ್ವಹಣೆ ಮತ್ತಷ್ಟು ಸುಲಭ, ಇಲ್ಲಿದೆ ಮಾಹಿತಿ
National Highways: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಐಟಿ ಬಿಟಿ ಕಂಪನಿಗಳು, ಕಾರ್ಪೋರೇಟ್ ಸಂಸ್ಥೆಗಳು ಸೇರಿದಂತೆ ಹಲವಾರು ಕ್ಷೇತ್ರಕ್ಕೆ ಕಾಲಿಟ್ಟಿದೆ. ಇದೀಗ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಎಐ ತನ್ನ ಪ್ರಭಾವ ಬೀರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೇಶದ ಹೈವೇಗಳಲ್ಲಿ ಸುಧಾರಿತ AI-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರಿಚಯಿಸಲು ಮುಂಗಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಹೌದು, ಭಾರತದ ಸುಮಾರು 40,000 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಸುಧಾರಿತ AI-ಚಾಲಿತ ಮೇಲ್ವಿಚಾರಣಾ ವ್ಯವಸ್ಥೆ ತರಲಾಗುತ್ತಿದೆ. ಈ ಹೊಸ ಎಐ ಯೋಜನೆಯಿಂದ ಹೆದ್ದಾರಿ ರಸ್ತೆ ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಿ ಹಾಗೂ ಡೇಟಾ-ಚಾಲಿತವಾದ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ.

ಇದೊಂದು ಡ್ಯಾಶ್‌ಕ್ಯಾಮ್ ಅನಾಲಿಟಿಕ್ಸ್ ಸರ್ವೀಸಸ್ (DAS) ಎಂಬ ವ್ಯವಸ್ಥೆಯಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML) ಬಳಸಿ ಹೈವೇ ಮೇಲ್ವಿಚಾರಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಈ ತಂತ್ರಜ್ಞಾನದ ಸೆಟ್ ಅಪ್‌ನ್ನು ರೂಟ್ ಪೆಟ್ರೋಲ್ ವಾಹನಗಳಲ್ಲಿ (RPVs) ಹೆಚ್ಚಿನ ರೆಸಲ್ಯೂಶನ್ ಡ್ಯಾಶ್‌ಬೋರ್ಡ್ ಕ್ಯಾಮೆರಾಗಳನ್ನು ಸ್ಥಾಪಿಸಲಾಗುತ್ತದೆ. ಈ ವಾಹನಗಳು ಹೆದ್ದಾರಿಗಳ ತುಂಬ ನಿಯಮಿತವಾಗಿ ಸಮೀಕ್ಷೆ ಕೈಗೊಳ್ಳುತ್ತವೆ. ಮೊದಲು ಈ ವಾಹನಗಳು ನಿರಂತರ ಹೈವೇದಲ್ಲಿ ಸಂಚರಿಸಿ ವೀಡಿಯೊ ಮತ್ತು ಪೋಟೋ ಸೆರೆ ಹಿಡಿಯುತ್ತದೆ. ಬಳಿಕ ಅವುಗಳನ್ನು ಎಐ ತಂತ್ರಜ್ಞಾನ ಮೂಲಕ ವಿಶ್ಲೇಷಿಸಿ ಮೇಲ್ವಿಚಾರಣೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.
ಹೈವೇ ಲೋಪದೋಷಗಳ ಪತ್ತೆ ಇನ್ನೂ ಸಲೀಸು
ಹೆದ್ದಾರಿಯಲ್ಲಿ ವಾಹನ ಸಂಚಾರ ವೇಳೆ ಕಂಡು ಬರುವ ಲೋಪದೋಷಗಳ ಪೈಕಿ ಸಮಾರು 30 ಕ್ಕೂ ಹೆಚ್ಚು ರೀತಿಯ ದೋಷ ಹಾಗೂ ವೈಪರೀತ್ಯಗಳನ್ನು ಸ್ವಯಂಪ್ರೇರಿತವಾಗಿ ಎಐ ಗುರುತಿಸುತ್ತದೆ. ಅವುಗಳಿಗೆ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. ಇನ್ನೂ ರಸ್ತೆ ಗುಂಡಿಗಳು, ಬಿರುಕುಗಳು ಮತ್ತು ಡಾಂಬರ್/ಕಾಂಕ್ರೀಟ್ ರಸ್ತೆ ಮೇಲ್ಮೈ ಸವೆತದಂತಹ ಸಮಸ್ಯೆಗಳನ್ನು ತ್ವರಿತವಾಗಿ ಪತ್ತೆ ಮಾಡುವ ಜೊತೆಗೆ ಮಾನವ ತಪಾಸಣೆ ತಪ್ಪಿಸಿ ಸಮಸ್ಯೆಗಳ ಮುಕ್ತಿಗೆ ತ್ವರಿತವಾಗಿ ಸ್ಪಂದಿಸಲು ಸಹಾಯ ಮಾಡುತ್ತದೆ.
ಹೆದ್ದಾರಿಯಲ್ಲಿ ಬೀದಿ ದೀಪ ಸಮಸ್ಯೆ, ಸಂಚಾರಿ ಸೂಚನಾ ಫಲಕ, ಪಾದಚಾರಿ ಗುಣಮಟ್ಟದ ಜೊತೆಗೆ, ಲೇನ್ ಗುರುತು, ತಡೆಗೋಡೆಗಳು ಇನ್ನೂ ಹೆದ್ದಾರಿ ಮೂಲಸೌಕರ್ಯ ಅಂಶಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಅಕ್ರಮ ಹೋರ್ಡಿಂಗ್‌ಗಳು, ಸುಗಮ ಸಂಚಾರಕ್ಕೆ ಅಡಚಣೆಗಳು, ರಸ್ತೆ ಬದಿ ಎಲ್ಲೆಂದರೆ ಪಾರ್ಕಿಂಗ್, ಸುರಕ್ಷತೆಗೆ ಸಂಬಂಧಿಸಿದ ಕಾಳಜಿ ಬಗ್ಗೆ ಆಗಾಗ ಮಾಹಿತಿ ರವಾನಿಸುತ್ತದೆ. ಅದನ್ನು ಪರಿಶೀಲಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.
ತಂತ್ರಜ್ಞಾನ ಸಹಾಯದಿಂದ ತ್ವರಿತ ಪರಿಹಾರ
ಮಳೆಗಾಲದಲ್ಲಿ ಹೈವೇಗಳಲ್ಲಿ ನೀರು ನಿಂತರೆ, ಒಳಚರಂಡಿ ಸಮಸ್ಯೆ, ಗಿಡ ಮರಗಳಿಂದ ಸಂಚಾರ ಸಮಸ್ಯೆ, ಬಸ್ ಬೇಗಳ ಸ್ಥಿತಿ ಸೇರಿದಂತೆ ಮಾನವರು ಮಾಡುವ ಎಲ್ಲ ಕೆಲಸವನ್ನು ಈ ಎಐ ತಂತ್ರಜ್ಞಾನ ಮಾಡುತ್ತದೆ. ತನ್ನ ವ್ಯಾಪ್ತಿಯಗೆ ಬಂದ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿ ಪರಿಹಾರ ಒದಗಿಸಲು ಸಹಾಯ ಮಾಡುತ್ತದೆ. ಈ ಮಹತ್ತರ ಉದ್ದೇಶದಿಂದ ಎಐ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು NHAI ಮುಂದಾಗಿದೆ.
ಭವಿಷ್ಯದಲ್ಲಿ ಹೈವೇ ನಿರ್ವಹಣೆ ತಂತ್ರಜ್ಞಾನ ಸಹಿತವಾಗಲಿದೆ. ಈ ಎಐ ತಂತ್ರಜ್ಞಾನ ಅಳವಡಿಕೆ, ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಯಾವತ್ತಿನಿಂದ ಜಾರಿಗೆ ಬರುತ್ತದೆ. ಇದರ ಅಳವಡಿಕೆಯಿಂದ ವಾಹನ ಸವಾರರಿಗೆ ಏನಾದರೂ ಸೂಚನೆಗಳು, ಮಾರ್ಗಸೂಚಿ ಇವೆಯಾ, ಸಂಚಾರದಲ್ಲಿ ಬದಲಾವಣೆ ಆಗಲಿದೆಯಾ ಎಂಬುದರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.












Click it and Unblock the Notifications