'ಆ ಸಮಯ'ದ ಸುರಕ್ಷತೆ ಕುರಿತು ಮಹಿಳೆಯರಲ್ಲೇ ಇಲ್ಲ ಅರಿವು!
ಡೆಹ್ರಾಡೂನ್, ಜನವರಿ 23: ಭಾರತದಲ್ಲಿ ದಿನ ದಿನವೂ ಸ್ವಚ್ಛತೆಯ ಕುರಿತು, ಆರೋಗ್ಯ ಕಾಳಜಿಯ ಕುರಿತು ಅರಿವು ಮೂಡಿಸುವ ಕೆಲಸ ನಡೆಯುತ್ತಲೇ ಇದ್ದರೂ ಅದು ನಿಜಕ್ಕೂ ಫಲಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ!
ಹೌದು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ(NFHS) ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಭಾರತದಲ್ಲಿರುವ 15-24 ವರ್ಷ ವಯಸ್ಸಿನ ಮಹಿಳೆಯರು ಋತುಸ್ರಾವದ ಸಮಯದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಬದಲಾಗಿ ಬಟ್ಟೆಯನ್ನು ಬಳಸುತ್ತಾರೆ.
ಇದರಲ್ಲಿ ಶೇ.42 ರಷ್ಟು ಮಹಿಳೆಯರು ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ಕೇವಲ ಶೇ.16 ರಷ್ಟು ಜನರು ಮಾತ್ರ ಸ್ಥಳೀಯವಾಗಿ ತಯಾರಿಸಿದ ನ್ಯಾಪ್ಕಿನ್ ಬಳಸುತ್ತಾರೆ. ಉಳಿದಂತೆ ಹೆಚ್ಚಿನ ಮಹಿಳೆಯರು ಬಳಸುವುದು ಬಟ್ಟೆಯನ್ನೇ. ಅನಕ್ಷರತೆ ಹೆಚ್ಚಿರುವ ಕಡೆಗಳಲ್ಲೇ ಈ ಸಮಸ್ಯೆ ಕಂಡುಬರುತ್ತಿದೆ. ಹಳ್ಳಿಗಳಲ್ಲಿ ಈ ಕುರಿತು ಅರಿವು ಮೂಡಿಸುವ ಶಿಬಿರಗಳು ನಡೆಯುತ್ತಿದ್ದರು ಇಂದಿಗೂ ಮಹಿಳೆಯರಲ್ಲಿ ಆರೋಗ್ಯದ ಕುರಿತು ಕಾಳಜಿ ಹುಟ್ಟಿಲ್ಲ.

ಇತ್ತೀಚೆಗೆ ಸರ್ಕಾರ ಮತ್ತು ಕೆಲವು ಎನ್ ಜಿಒಗಳೇ ಗ್ರಾಮೀಣ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಲಭ್ಯವಾಗುವಂತೆ ಮಾಡುತ್ತಿದ್ದರೂ ಈ ಕುರಿತು ಜನರಲ್ಲಿ ಪ್ರಜ್ಞೆ ಮೂಡಿಲ್ಲ. ಮಹಿಳೆಯರಲ್ಲಿ ಕಂಡುಬರುತ್ತಿರುವ ಹಲವು ಗುಪ್ತ ರೋಗಗಳಿಗೆ ಋತುಸ್ರಾವದ ಸಂದರ್ಭದಲ್ಲಿ ಸ್ವಚ್ಛತೆ ಅನುಸರಿಸದಿರುವುದೇ ಕಾರಣ ಎಂಬುದು ಹಲವರಿಗೆ ತಿಳಿದಿಲ್ಲ.
ತಮಿಳುನಾಡು, ಕೇರಳ, ಗೋವಾ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲಿ ಹೆಚ್ಚಿನ ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ ಸುರಕ್ಷಿತ ವಿಧಾನವಾಗಿ ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ. ಆದರೆ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಈ ಸಂಖ್ಯೆ ತೀರಅ ಕಡಿಮೆ ಎಂಬುದು ಕಳವಳಕಾರಿ ಸಂಗತಿ.












Click it and Unblock the Notifications